ಯೋಗದ ಅಭ್ಯಾಸವು ಮನಸ್ಥಿತಿ ಉಲ್ಲಾಸಗೊಳಿಸುತ್ತದೆ ಮತ್ತು ಮಾನಸಿಕ ಶಕ್ತಿಯನ್ನು ಹೆಚ್ಚಿಸುತ್ತದೆ. ದೈನಂದಿನ ಜೀವನದಲ್ಲಿ ಒತ್ತಡದ ಮಟ್ಟವನ್ನು ಕಡಿಮೆ ಮಾಡಲು ಇದು ಸೂಕ್ತವೆಂದು ತೋರುತ್ತದೆ. ಒತ್ತಡ ಮತ್ತು ಆತಂಕವನ್ನು ನಿರ್ವಹಿಸಲು ನಿಮಗೆ ಸಹಾಯ ಬೇಕಾದಲ್ಲಿ, ಯೋಗವು ಉತ್ತಮ ಪರಿಹಾರ ಮತ್ತು ಸ್ವಯಂ-ಆರೈಕೆಯಾಗಿದೆ.
ನಾವು ವಾಸಿಸುವ ಜಗತ್ತಿನಲ್ಲಿ ಜೀವನ ನಿರ್ವಹಣೆ ಸವಾಲಾಗಿರಬಹುದು. ನಮ್ಮಲ್ಲಿ ಹೆಚ್ಚಿನವರಿಗೆ, ಬೇಗ ಏಳುವುದು, ತಡರಾತ್ರಿವರೆಗೆ ಕೆಲಸ ಮಾಡುವುದು, ಪ್ರಯಾಣ, ವ್ಯಾಯಾಮ ಇತ್ಯಾದಿಗಳು ಕಷ್ಟವೆನಿಸಬಹುದು.
ಆದರೆ, ಒತ್ತಡಕ್ಕೆ ಒಳಗಾಗುವುದು ಮಾತ್ರ ಸುಲಭ. ಒತ್ತಡವು ಪ್ರತಿದಿನ ಇರುತ್ತದೆ, ಇದು ಸೌಮ್ಯವಾಗಿರಬಹುದು ಮತ್ತು ಕೆಲವೊಮ್ಮೆ ಅಸಹನೀಯವಾಗಿ ಅಧಿಕ ರಕ್ತದೊತ್ತಡ, ಖಿನ್ನತೆ ಇತ್ಯಾದಿಗಳಿಗೆ ಕಾರಣವಾಗುತ್ತದೆ.
ಹೀಗಾಗಿ, ಒತ್ತಡವನ್ನು ನಿವಾರಿಸಲು ಮತ್ತು ನಿಮ್ಮ ಜೀವನದಲ್ಲಿ ಅದು ಆಳವಾಗಿ ಬೇರೂರುವುದನ್ನು ತಡೆಯಲು ಮಾರ್ಗಗಳನ್ನು ಕಂಡುಕೊಳ್ಳುವುದು ಅತ್ಯಗತ್ಯ. ಈ ಹಿನ್ನೆಲೆ ಒತ್ತಡವನ್ನು ನಿವಾರಿಸುವ ಒಂದು ಮಾರ್ಗವೆಂದರೆ ಯೋಗವನ್ನು ಅಭ್ಯಾಸ ಮಾಡುವುದು. ನಮಗೆಲ್ಲರಿಗೂ ಪರಿಣಾಮಕಾರಿ ಪರಿಹಾರ ಬೇಕು.
ಅದು ಮಾನಸಿಕ ಅಸ್ವಸ್ಥತೆಗಳನ್ನು ಜಯಿಸಲು ಸಹಾಯ ಮಾಡಬೇಕು ಮತ್ತು ಆರೋಗ್ಯಕರ ಮನಸ್ಸು ಮತ್ತು ದೇಹದೊಂದಿಗೆ ಶಾಂತಿಯುತವಾಗಿ ಬದುಕಲು ಅನುವು ಮಾಡಿಕೊಡಬೇಕು ಎಂದರೆ ಅದು ಯೋಗದಿಂದ ಸಾಧ್ಯ. ಒತ್ತಡಕ್ಕೊಳಗಾದ ಯಾವುದೇ ವ್ಯಕ್ತಿಗೆ ಧ್ಯಾನ ಮತ್ತು ದೈಹಿಕ ಆಸನಗಳು ಒತ್ತಡವನ್ನು ತಕ್ಷಣವೇ ಜಯಿಸಲು ಸಹಾಯ ಮಾಡುವ ಅಸ್ತ್ರಗಳು.
ಹೆಸರಾಂತ ಯೋಗ ಬೋಧಕರಾದ ಅಭಿಷೇಕ್ ಒಟ್ವಾಲ್ ಪ್ರಕಾರ, ಯೋಗವು ಹೇಗೆ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಈ ಸಮಸ್ಯೆಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುತ್ತದೆ. ಅದ್ಹೇಗೆ ಅನ್ನೋದನ್ನ ಇಲ್ಲಿ ಓದಿ :
ವಿಶ್ರಾಂತಿ : ಯೋಗವು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ವಿಶ್ರಾಂತಿಯನ್ನು ಉತ್ತೇಜಿಸುತ್ತದೆ. ನೀವು ಯೋಗವನ್ನು ಅಭ್ಯಾಸ ಮಾಡುವುದರಿಂದ, ಸ್ವಲ್ಪ ದಿನದಲ್ಲೇ ನಿಮ್ಮ ಆರೋಗ್ಯದ ಮೇಲೆ ಅದು ಧನಾತ್ಮಕವಾಗಿ ಪರಿಣಾಮ ಬೀರುವುದನ್ನು ಕಾಣಬಹುದು. ಇದು ನಿಮ್ಮ ದೇಹಕ್ಕೆ ಪಾಸಿಟಿವ್ ಎನರ್ಜಿ ನೀಡುತ್ತದೆ ಮತ್ತು ಆರಾಮವನ್ನು ನೀಡುತ್ತದೆ. ನೀವು ಮನೆಯಲ್ಲಿರಲಿ, ಕೆಲಸದಲ್ಲಿರಲಿ ಅಥವಾ ಎಲ್ಲಿಯೇ ಇರಲಿ, ಯೋಗವು ಯಾವಾಗಲೂ ನಿಮಗೆ ವಿಶ್ರಾಂತಿ ಪಡೆಯಲು ಸಹಾಯ ಮಾಡುತ್ತದೆ.
ಸಾವಧಾನತೆ ನೀಡುತ್ತದೆ : ನಾವು ಒತ್ತಡದಲ್ಲಿದ್ದಾಗ, ನಾವು ಆಗಾಗ್ಗೆ ಮಾಡುವ ಕೆಲಸಗಳ ಪರಿಣಾಮಗಳ ಬಗ್ಗೆಯೇ ಹೆಚ್ಚು ಯೋಚಿಸಲು ಪ್ರಾರಂಭಿಸುತ್ತೇವೆ. ಸದ್ಯಕ್ಕೆ ಅದನ್ನು ಆನಂದಿಸುವ ಬದಲು ಭವಿಷ್ಯ ಏನಾಗಬಹುದು ಎಂದು ಯೋಚಿಸುತ್ತಾ ಕೂರುತ್ತೇವೆ. ಉದಾಹರಣೆಗೆ, ನಿಮ್ಮ ದೇಹವನ್ನು ಯೋಗದೊಂದಿಗೆ ಕೇಂದ್ರೀಕರಿಸುವುದು ಪರೋಕ್ಷವಾಗಿ ನಿಮ್ಮ ಬಗ್ಗೆ ಸಾಕಷ್ಟು ವಿಷಯಗಳನ್ನು ಗಮನಿಸುವಂತೆ ಮಾಡುತ್ತದೆ. ಈ ಕ್ಷಣದಲ್ಲಿ ಜೀವಿಸುವುದು ನಿಮ್ಮ ಗಮನ ಮತ್ತು ಏಕಾಗ್ರತೆಯ ಸಾಮರ್ಥ್ಯವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ, ಇದು ಜೀವನದ ಎಲ್ಲಾ ಅಂಶಗಳಿಗೆ ಸಹಾಯ ಮಾಡುತ್ತದೆ.
ನಿಮ್ಮನ್ನು ನೀವು ಹೆಚ್ಚು ತಿಳಿಯಲು ಸಹಾಯ : ಯೋಗವು ಮನಸ್ಸು, ದೇಹ ಮತ್ತು ಆತ್ಮವನ್ನು ಒಂದುಗೂಡಿಸುವುದಲ್ಲದೆ ಬೇರೇನೂ ಅಲ್ಲ ಮತ್ತು ಆದ್ದರಿಂದ, ನಿಮ್ಮ ದೈನಂದಿನ ಕಾರ್ಯಗಳ ಪಟ್ಟಿಗೆ ಯೋಗವನ್ನು ಸೇರಿಸಲು ಒಂದು ಉತ್ತಮ ಕಾರಣವೆಂದರೆ ಅದು ನಿಮ್ಮ ಮನಸ್ಸು, ದೇಹ ಮತ್ತು ಭಾವನೆಗಳ ಬಗ್ಗೆ ಇನ್ನಷ್ಟು ತಿಳಿದುಕೊಳ್ಳಲು ಸಹಾಯ ಮಾಡುತ್ತದೆ.
ಆತಂಕ- ಖಿನ್ನತೆಯ ಲಕ್ಷಣ ಕಡಿಮೆ ಮಾಡುತ್ತೆ : ಯೋಗವು ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಯೋಗವು ನಿಮ್ಮ ಮನಸ್ಥಿತಿಯನ್ನು ಮತ್ತು ಒಟ್ಟಾರೆ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಕಷ್ಟಕರ ಸನ್ನಿವೇಶಗಳಿಂದಾಗಿ ನಿಮ್ಮ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ನಿರ್ವಹಿಸಲು ಯೋಗವು ನಿಮಗೆ ಸಹಾಯ ಮಾಡಬಹುದು. ನೀವು ಹೊರಗೆ ಯೋಗವನ್ನು ಮಾಡುತ್ತಿದ್ದರೆ, ನಿಮ್ಮ ಯೋಗಾಭ್ಯಾಸದ ಸಮಯದಲ್ಲಿ ಪರಿಸರದಲ್ಲಿ ಗಮನ ಸೆಳೆಯುವ ಬಣ್ಣಗಳು, ಶಬ್ಧಗಳು ಮತ್ತು ಭಾವನೆಗಳನ್ನು ಅನುಭವಿಸಬಹುದು. ಇದು ನಿಮ್ಮಲ್ಲಿ ಧನಾತ್ಮಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮಾನಸಿಕ ಶಕ್ತಿ ಸುಧಾರಿಸುತ್ತೆ : ಹೆಚ್ಚಿನ ಜನರು ಪಡೆಯುವ ಸಾಮಾನ್ಯ ಪ್ರಯೋಜನವೆಂದರೆ ಯೋಗವು ನಿಮ್ಮ ದೇಹ ಮತ್ತು ನಿಮ್ಮ ಮನಸ್ಸಿನ ಶಕ್ತಿ ಮತ್ತು ನಮ್ಯತೆಯನ್ನು ಸುಧಾರಿಸುತ್ತದೆ. ಯೋಗ, ವ್ಯಾಯಾಮಗಳು ಮಾನಸಿಕ ದೃಢತೆಯನ್ನು ಸುಧಾರಿಸುವುದರಿಂದ ಅದು ದೇಹದ ಚಲನೆಗಳೊಂದಿಗೆ ಆತ್ಮ ವಿಶ್ವಾಸವನ್ನು ಹೆಚ್ಚಿಸುತ್ತದೆ ಮತ್ತು ಮನಸ್ಸನ್ನು ಹೆಚ್ಚು ಕೇಂದ್ರೀಕರಿಸುವಂತೆ ಮಾಡುತ್ತದೆ.
ಯೋಗ ಮಾಡುವಾಗ ಸ್ನಾಯುಗಳ ಸಮನ್ವಯವನ್ನು ನೋಡಿಕೊಳ್ಳಲು ಅಥವಾ ದೇಹವನ್ನು ನಿರ್ದಿಷ್ಟ ಭಂಗಿ ಅಥವಾ ರೂಪದಲ್ಲಿ ಉಳಿಯುವಂತೆ ಮಾಡಲು ಮನಸ್ಸು ನಿರತವಾಗುತ್ತದೆ. ದೇಹವನ್ನು ಸ್ಥಿರವಾಗಿಡುವ ಪ್ರಯತ್ನದಿಂದ ಮನಸ್ಸಿನಲ್ಲಿ ಉಳಿಯುವ ಶಕ್ತಿಯು ಮಾನಸಿಕ ಸ್ಥೈರ್ಯ ಎಂದು ಕರೆಯಲ್ಪಡುತ್ತದೆ. ಯೋಗವು ಮೆದುಳಿನ ಶಕ್ತಿಯನ್ನು ಸುಧಾರಿಸುವ ಅತ್ಯಂತ ಪರಿಣಾಮಕಾರಿ ನೈಸರ್ಗಿಕ ವಿಧಾನಗಳಲ್ಲಿ ಒಂದಾಗಿದೆ. ಬಲವಾದ ಮನಸ್ಸು ಖಂಡಿತವಾಗಿಯೂ ಆರೋಗ್ಯಕರ ಮೆದುಳಿಗೆ ಸಂಬಂಧಿಸಿದೆ.
ಆತ್ಮವಿಶ್ವಾಸ ಹೆಚ್ಚಿಸುತ್ತದೆ : ಯೋಗವು ದೇಹವನ್ನು ಯಾವತ್ತೂ ಚಲಿಸದ ದಿಕ್ಕುಗಳಲ್ಲಿ ಮತ್ತು ಮಾರ್ಗಗಳಲ್ಲಿ ಚಲಿಸಲು ಸಹಾಯ ಮಾಡುತ್ತದೆ. ಈ ಹೊಸ ಅನುಭವಗಳು ಅಪರಿಚಿತರೊಂದಿಗೆ ಮಾತನಾಡಲು ವ್ಯವಹರಿಸಲು ವಿಶ್ವಾಸವನ್ನು ಹೆಚ್ಚಿಸುತ್ತದೆ. ಒಬ್ಬ ವ್ಯಕ್ತಿಯು ಆಯ್ಕೆ ಮಾಡಿದ ಯಾವುದೇ ಹಾದಿಯಲ್ಲಿ ನಿರಂತರವಾಗಿ ಮುಂದುವರಿಯಲು ಹೆಚ್ಚಿನ ಆತ್ಮವಿಶ್ವಾಸ ಅಗತ್ಯ.
ಗಮನವನ್ನು ಮರುಕೇಂದ್ರಿಕರಿಸಲು : ಯೋಗವು ಎಲ್ಲೆಲ್ಲೋ ಚದುರಿದ ಮನಸ್ಸನ್ನು ಒಂದೆಡೆ ಹಿಡಿದಿಡಲು ಸಹಾಯ ಮಾಡುತ್ತದೆ ಮತ್ತು ಅದರ ಶಕ್ತಿಯನ್ನು ಒಂದು ಆಲೋಚನೆ, ಕ್ರಿಯೆ ಅಥವಾ ಕಾರ್ಯದ ಮೇಲೆ ಕೇಂದ್ರೀಕರಿಸುತ್ತದೆ. ಕೇಂದ್ರೀಕೃತ ಶಕ್ತಿಯು ಬಯಸಿದ್ದನ್ನು ಸಾಧಿಸಲು ಹೆಚ್ಚುವರಿ ಶಕ್ತಿಯನ್ನು ಒದಗಿಸುತ್ತದೆ. ಚದುರಿದ ಮನಸ್ಸು ದುರ್ಬಲ ಮನಸ್ಸಾಗಿದೆ. ಹೀಗಾಗಿ, ಯೋಗ-ಧ್ಯಾನವನ್ನು ನಿಯಮಿತವಾಗಿ ಅಭ್ಯಾಸ ಮಾಡುವುದರಿಂದ ಮನಸ್ಸನ್ನು ಏಕಾಗ್ರತೆಗೆ ಮರಳಿ ತರಬಹುದು.