ವಿಲ್ಲುಪುರಂ (ತಮಿಳುನಾಡು) : ತಮಿಳುನಾಡು ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ (Annamalai) ಅವರ 37ನೇ ಹುಟ್ಟುಹಬ್ಬದ ಪ್ರಯುಕ್ತ ಜುಲೈ 5ರಂದು ವಿಲ್ಲುಪುರಂ ಜಿಲ್ಲೆಯ ತಿಂಡಿವನಂ ಬಳಿಯ ಒಮಂತೂರ್ ಪ್ರದೇಶದಲ್ಲಿ ಖಾಸಗಿ ಶಾಲೆಯ ಟ್ರಸ್ಟ್ ವತಿಯಿಂದ 39 ಜೋಡಿಗಳಿಗೆ ಉಚಿತ ಮತ್ತು ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಮದುವೆಯಾದ ಮರುದಿನ ಮಗುವಿನ ಹುಟ್ಟುಹಬ್ಬ ಆಚರಣೆ: ಈ ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರು ನವ ಜೋಡಿಗಳಿಗೆ ತಾಳಿ ನೀಡಿ ವಿವಾಹ ನಡೆಸಿಕೊಟ್ಟಿದ್ದರು. ಈ 36 ಜೋಡಿಗಳ ಪೈಕಿ ಕೆಲವರು ಈಗಾಗಲೇ ಮದುವೆಯಾಗಿದ್ದಾರೆ. ಕೆಲವರು ಮದುವೆಯಾಗಿ ಮಕ್ಕಳನ್ನು ಸಹ ಹೊಂದಿದ್ದರು ಎಂಬ ಟೀಕೆಗಳು ಕೇಳಿ ಬಂದಿದ್ದು, ಈ ಸಮಾರಂಭ ಕೂಡಾ ತಮಿಳುನಾಡಿನಲ್ಲಿ ಟೀಕೆಗೆ ಗುರಿಯಾಗಿದೆ. ಈ ಪರಿಸ್ಥಿತಿಯಲ್ಲಿ, ಮದುವೆಯಾದ ಮರುದಿನವೇ (ಜುಲೈ 6) ವಿವಾಹಿತ ದಂಪತಿಯ ಮಗುವಿನ ಹುಟ್ಟುಹಬ್ಬವನ್ನು ಸಹ ಆಚರಿಸಲಾಗಿದೆ ಎಂಬ ಸುದ್ದಿ ಸೋಷಿಯಲ್ ಮೀಡಿಯಾಗಳಲ್ಲಿ ಟ್ರೋಲ್ ಆಗುತ್ತಿದ್ದು, ಚರ್ಚೆಗೆ ಗ್ರಾಸ ಒದಗಿಸಿದೆ.
ಸಹೋದರರ ಮರುಮದುವೆ: ಮದುವೆಯಾದ 39 ಜೋಡಿಗಳ ಪೈಕಿ ತಿಂಡಿವನಂನ ಗಿಡಂಗಲ್ ಪ್ರದೇಶದ ಇಬ್ಬರು ಸಹೋದರರು ಈಗಾಗಲೇ ಮದುವೆಯಾಗಿದ್ದಾರೆ ಎನ್ನುವ ಮಾಹಿತಿ ಇದೆ. ಹಿರಿಯ ಸಹೋದರನಿಗೆ ಈಗಾಗಲೇ ಒಂದು ಮಗು ಮತ್ತು ಕಿರಿಯ ಸಹೋದರನಿಗೆ ಇಬ್ಬರು ಮಕ್ಕಳಿದ್ದಾರೆ. ಈ ಬಗ್ಗೆ ಅವರನ್ನು ಟ್ರೋಲ್ ಮಾಡಲಾಗುತ್ತಿದೆ.
ದೇವಸ್ಥಾನದಲ್ಲಿ ಮದುವೆಯಾಗಿದ್ದ ಯುವಕನಿಗೆ ಮರುಮದುವೆ: ಅದೇ ಪ್ರದೇಶದ ಒಬ್ಬ ಯುವಕನಿಗೆ ಮೈಲಂ ಮುರುಗನ್ ದೇವಸ್ಥಾನದಲ್ಲಿ ಈ ಹಿಂದೆ ಮದುವೆಯಾಗಿತ್ತು ಎಂದು ವರದಿಯಾಗಿದೆ. ಅಲ್ಲದೇ, ಈ ಮದುವೆ ಸಮಾರಂಭವನ್ನು ಎಐಎಡಿಎಂಕೆ ಕಾರ್ಯಕಾರಿ ಮತ್ತು ಬಂಡಾಯ ನಾಯಕ ಮುರಳಿ ಅಲಿಯಾಸ್ ರಘುರಾಮನ್ ಆಯೋಜಿಸಿದ್ದರು. ಈ ಪ್ರಕರಣದ ನಂತರ ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಕೆ. ಪಳನಿಸ್ವಾಮಿ ಅವರು ಎಐಎಡಿಎಂಕೆಯಿಂದ ಮುರಳಿ ಅವರನ್ನು ತೆಗೆದುಹಾಕುವ ಮೂಲಕ ಕ್ರಮ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎಡಪ್ಪಾಡಿ ಪಳನಿಸ್ವಾಮಿ ಸ್ಪಷ್ಟನೆ: ಎಐಎಡಿಎಂಕೆ ಪಕ್ಷದ ತತ್ವಗಳಿಗೆ ವಿರುದ್ಧವಾಗಿ, ಪಕ್ಷದ ಕಾನೂನು ಯೋಜನೆಗಳಿಗೆ ವ್ಯತಿರಿಕ್ತವಾಗಿ ವರ್ತಿಸಿ, ಪಕ್ಷದ ಸುವ್ಯವಸ್ಥೆಗೆ ಅಡ್ಡಿಪಡಿಸಿ, ಪಕ್ಷದ ಅಪಖ್ಯಾತಿಗೆ ಕಾರಣರಾದ ಮುರಳಿ ಅವರನ್ನು ಎಐಎಡಿಎಂಕೆಯಿಂದ ಉಚ್ಛಾಟಿಸಲಾಗಿದೆ ಎಂದು ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಎಡಪ್ಪಾಡಿ ಪಳನಿಸ್ವಾಮಿ ಇದೇ ವೇಳೆ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ: 'ಜನರ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡಿದ್ದಕ್ಕಾಗಿ ಕ್ಷಮೆಯಾಚಿಸುತ್ತೇನೆ': ಆದಿಪುರುಷ್ ಡೈಲಾಗ್ ರೈಟರ್
ಮದುವೆಯಾದ ಮರುದಿನವೇ ಮಗುವಿನ ಜನ್ಮದಿನವನ್ನು ಆಚರಿಸಲಾಗಿದೆ ಎಂದು ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಈ ಘಟನೆ ಬಗ್ಗೆ ಟೀಕಿಸುತ್ತಿದ್ದಾರೆ. ಅಲ್ಲದೇ ಅಣ್ಣಾಮಲೈ ಹೆಸರಿನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಮದುವೆಯಾದವರನ್ನು ಮರುಮದುವೆ ಮಾಡಿರುವ ಕ್ರಮಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಕೂಡಾ ವ್ಯಕ್ತವಾಗುತ್ತಿದೆ.
ಇದನ್ನೂ ಓದಿ: Kiccha Sudeep: ನಿರ್ಮಾಪಕ ಕುಮಾರ್ ವಿರುದ್ಧ 10 ಕೋಟಿ ರೂ. ಮಾನನಷ್ಟ ಮೊಕದ್ದಮೆ ಹಾಕಿದ ಸುದೀಪ್