ಹೈದರಾಬಾದ್: 2021ಕ್ಕೆ ಗುಡ್ಬೈ ಹೇಳಿ, ಹೊಸ ಭರವಸೆವೊಂದಿಗೆ 2022 ಬರಮಾಡಿಕೊಳ್ಳಲು ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಆದರೆ, ಈ ವರ್ಷ ಅನೇಕ ಕಾರಣಗಳಿಗಾಗಿ ಸದಾ ನೆನಪಿನಲ್ಲಿ ಉಳಿಯಲಿದೆ. ಅನೇಕ ಸಿಹಿ ಘಟನೆಗಳ ಜೊತೆಗೆ ಕಹಿ ನನೆಪು ಹಾಗೂ ಅನೇಕ ಒಳ್ಳೆಯ ಅನುಭವ ನಮ್ಮೊಂದಿಗೆ ಬಿಟ್ಟು ಹೋಗಲು ಸಜ್ಜಾಗಿದೆ. 2021ರಲ್ಲಿ ನಡೆದ ಪ್ರಮುಖ ಘಟನಾವಳಿಗಳ ಹಿನ್ನೋಟದ ಮೇಲೆ ಒಂದು ಇಣುಕು ನೋಟ ಇಲ್ಲಿದೆ..
1. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಶಾಶ್ವತವಲ್ಲದ ಸ್ಥಾನಕ್ಕೆ ಭಾರತ ಆಯ್ಕೆ
ಜನವರಿ 2021ರಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ(UNSC) ಭಾರತ ಶಾಶ್ವತವಲ್ಲದ ಸದಸ್ಯ ಸ್ಥಾನಕ್ಕೆ ಆಯ್ಕೆಯಾಯಿತು. ವಿಶೇಷವೆಂದರೆ 8ನೇ ಸಲ ಭಾರತ ಈ ಜವಾಬ್ದಾರಿ ಪಡೆದುಕೊಂಡಿದ್ದು, ಮುಂದಿನ ಎರಡು ವರ್ಷಗಳ ಕಾಲ ಅಂದರೆ ಡಿಸೆಂಬರ್ 2022ರವರೆಗೆ ಈ ಸ್ಥಾನದಲ್ಲಿ ಇರಲಿದೆ.192 ಮತಗಳ ಪೈಕಿ 184 ಮತಗಳು ಭಾರತದ ಪರವಾಗಿ ದಾಖಲಾಗಿದ್ದವು.
2. ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆಲುವು
ಯುವ ಪ್ರತಿಭೆಗಳಿಂದ ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ತವರಿನಲ್ಲೇ ಕಾಂಗರೂ ಪಡೆಗೆ ಸೋಲಿನ ರುಚಿ ತೋರಿಸಿತ್ತು. ನಾಲ್ಕು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ 2-1 ಅಂತರದಿಂದ ಸರಣಿ ಕೈವಶ ಮಾಡಿಕೊಂಡು ಹೊಸ ಇತಿಹಾಸ ರಚನೆ ಮಾಡಿತು. ಈ ಹಿಂದೆ 2018-19ರಲ್ಲೂ ಭಾರತ ಕಾಂಗರೂಗಳ ವಿರುದ್ಧ ಭರ್ಜರಿ ಗೆಲುವು ದಾಖಲಿಸಿತು.
3. ಗಣರಾಜ್ಯೋತ್ಸವ ಸಂಭ್ರಮದ ವೇಳೆ ದೆಹಲಿಯಲ್ಲಿ ಹಿಂಸಾಚಾರ
ಜನವರಿ 26ರಂದು ದೆಹಲಿಯಲ್ಲಿ ಗಣರಾಜ್ಯೋತ್ಸವ ಸಂಭ್ರಮದಲ್ಲಿದ್ದಾಗ ಕೇಂದ್ರದ ಕೃಷಿ ಕಾಯ್ದೆಗಳ ವಿರುದ್ಧ ಅನ್ನದಾತರು ಟ್ರ್ಯಾಕ್ಟರ್ ಮೆರವಣಿಗೆ ನಡೆಸಿದ್ದರು. ಈ ವೇಳೆ ಹಿಂಸಾಚಾರ ಉಂಟಾಗಿ, ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಘರ್ಷಣೆ ಸಹ ನಡೆಯಿತು. ವಿಶೇಷವೆಂದರೆ ದೆಹಲಿಯ ಕೆಂಪು ಕೋಟೆಯ ಮೇಲೆ ಸಿಖ್ರು ತಮ್ಮ ಧ್ವಜ ಹಾರಿಸಿದ್ದರು.
4. ಕೋವಿಡ್ ಎರಡನೇ ಅಲೆ: ಅನೇಕ ರಾಜ್ಯಗಳಲ್ಲಿ ಆಮ್ಲಜನಕ, ಬೆಡ್ ಕೊರತೆ
2020ರಲ್ಲಿ ಮೊದಲನೇ ಕೊರೊನಾ ಅಲೆಗೆ ಒಳಗಾಗಿದ್ದ ಭಾರತ 2021ರ ಏಪ್ರಿಲ್ ನಂತರ ಎರಡನೇ ಅಲೆಗೆ ಸಿಲುಕಿ ತತ್ತರಿಸಿ ಹೋಯಿತು. ಪ್ರತಿದಿನ ಲಕ್ಷಾಂತರ ಪ್ರಕರಣದ ಜೊತೆಗೆ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡರು. ಎರಡನೇ ಅಲೆ ವೇಳೆ ದೇಶದ ಬಹುತೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆ ಜೊತೆಗೆ ಬೆಡ್, ಔಷಧಿ ಸಮಸ್ಯೆ ಉಂಟಾಯಿತು. ಪ್ರತಿದಿನ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಂಡಿದ್ದರಿಂದ ಸ್ಮಶಾನಗಳಲ್ಲಿ ಅಂತ್ಯಕ್ರಿಯೆ ನಡೆಸಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿತ್ತು.
5.ಉತ್ತರಾಖಂಡದಲ್ಲಿ ರಾಜಕೀಯ ಹೈಡ್ರಾಮಾ
2021ರಲ್ಲಿ ಉತ್ತರಾಖಂಡದಲ್ಲಿ ರಾಜಕೀಯ ಕೋಲಾಹಲ ಉಂಟಾಗಿದ್ದರಿಂದ ಕೇವಲ ನಾಲ್ಕು ತಿಂಗಳಲ್ಲೇ ಮೂವರು ಮುಖ್ಯಮಂತ್ರಿಗಳನ್ನ ಕಾಣಬೇಕಾಯಿತು. 2017ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಗೆಲುವು ದಾಖಲಿಸಿತ್ತು. ಈ ವೇಳೆ ತ್ರಿವೇಂದ್ರ ಸಿಂಗ್ ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸಿದ್ದರು. ಆದರೆ, ಮಾರ್ಚ್ 2021ರಲ್ಲಿ ತಮ್ಮ ಸ್ಥಾನಕ್ಕೆ ಅವರು ರಾಜೀನಾಮೆ ನೀಡುತ್ತಿದ್ದಂತೆ ತಿರತ್ ಸಿಂಗ್ ರಾವತ್ ಹೊಸ ಸಿಎಂ ಆದರು. ಆದರೆ, ಕೇವಲ 116 ದಿನಗಳಲ್ಲೇ ಆ ಸ್ಥಾನಕ್ಕೆ ಪುಷ್ಕರ್ ಅವರನ್ನ ಕರೆತರಲಾಯಿತು. ಜುಲೈ 2021ರಿಂದ ಪುಷ್ಕರ್ ಸಿಂಗ್ ಧಾಮಿ ಸಿಎಂ ಆಗಿ ಅಧಿಕಾರ ನಡೆಸುತ್ತಿದ್ದಾರೆ. ವಿಶೇಷವೆಂದರೆ 2022ರ ಆರಂಭದಲ್ಲೇ ಉತ್ತರಾಖಂಡ ವಿಧಾನಸಭೆ ಚುನಾವಣೆ ನಡೆಯಲಿದೆ.
6. ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ, ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್
2021ರಲ್ಲಿ ಪಶ್ಚಿಮ ಬಂಗಾಳ, ಅಸ್ಸೋಂ, ಕೇರಳ, ತಮಿಳುನಾಡು ಮತ್ತು ಪುದುಚೇರಿಯಲ್ಲಿ ವಿಧಾನಸಭೆ ಚುನಾವಣೆ ನಡೆದವು. ತಮಿಳುನಾಡಿನಲ್ಲಿ ಸ್ಟಾಲಿನ್ ನೇತೃತ್ವದ ಡಿಎಂಕೆ ಅಧಿಕಾರಕ್ಕೆ ಮರಳಿದರೆ, ಅಸ್ಸೋಂನಲ್ಲಿ ಎರಡನೇ ಬಾರಿಗೆ ಬಿಜೆಪಿ, ಕೇರಳದಲ್ಲಿ ಪಿಣರಾಯಿ ವಿಜಯನ್, ಪುದುಚೇರಿಯಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಅಧಿಕಾರದ ಚುಕ್ಕಾಣಿ ಹಿಡಿಯಿತು. ಹೆಚ್ಚು ಕುತೂಹಲ ಮೂಡಿಸಿದ್ದ ಪಶ್ಚಿಮ ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್ ಜಯ ಸಾಧಿಸಿದರೆ, ಬಿಜೆಪಿ 77 ಸ್ಥಾನಗಳಲ್ಲಿ ಗೆದ್ದು ಪ್ರತಿಪಕ್ಷ ಸ್ಥಾನದಲ್ಲಿ ಕುಳಿತುಕೊಂಡಿತು. ವಿಶೇಷವೆಂದರೆ ನಂದಿಗ್ರಾಮದಿಂದ ಸ್ಪರ್ಧೆ ಮಾಡಿದ್ದ ಮಮತಾ ಸೋಲು ಕಂಡಿದ್ದರು.
7. ಮೋದಿ ಕ್ಯಾಬಿನೆಟ್ನಲ್ಲಿ ಅಧಿಕ ಮಹಿಳಾ ಸಚಿವೆಯರು
2021ರಲ್ಲಿ ಮೋದಿ ಸಚಿವ ಸಂಪುಟ ವಿಸ್ತರಣೆ ಮಾಡಲಾಯಿತು. ಈ ವೇಳೆ ಒಟ್ಟು 78 ಸಂಸದರು ಸಚಿವರಾಗಿ ಅಧಿಕಾರ ಪಡೆದುಕೊಂಡರೆ 7 ಮಹಿಳೆಯರಿಗೆ ಸಚಿವ ಸ್ಥಾನ ನೀಡಲಾಯಿತು. ಈ ಮೂಲಕ ನಮೋ ಕ್ಯಾಬಿನೆಟ್ನಲ್ಲಿ 11 ಮಹಿಳಾ ಸಂಸದರು ಸಚಿವ ಸ್ಥಾನ ಪಡೆದರು. ಭಾರತದ ರಾಜಕೀಯ ಇತಿಹಾಸದಲ್ಲಿ ಇಷ್ಟೊಂದು ಮಹಿಳೆಯರಿಗೆ ಅವಕಾಶ ನೀಡಿದ್ದು, ಇದೇ ಮೊದಲು ಎಂಬ ದಾಖಲೆಗೆ ನಮೋ ಸಂಪುಟ ಪಾತ್ರವಾಯಿತು. ನಿರ್ಮಲಾ ಸೀತಾರಾಮನ್, ಮೀನಾಕ್ಷಿ ಲೇಖಿ, ಸ್ಮೃತಿ ಇರಾನಿ, ಸಾಧ್ವಿ ನಿರಂಜನ್ ಜ್ಯೋತಿ, ಶೋಭಾ ಕರಂದ್ಲಾಜೆ, ಅನ್ನಪೂರ್ಣ ದೇವಿ, ಪ್ರತಿಮಾ ಭೌಮಿಕ್, ಡಾ. ಭಾರತಿ ಪವಾರ್, ಅನುಪ್ರಿಯಾ ಪಟೇಲ್ ಪ್ರಮುಖರಾಗಿದ್ದಾರೆ.
8. ನೈಸರ್ಗಿಕ ವಿಪತ್ತುಗಳ ವರ್ಷ -2021
2021ರಲ್ಲಿ ದೇಶದ ಬಹುತೇಕ ರಾಜ್ಯಗಳು ನೈರ್ಸಗಿಕ ವಿಕೋಪಕ್ಕೆ ತುತ್ತಾದವು. ಚಂಡಮಾರುತದ ಹೊರತಾಗಿ ಅನೇಕ ರಾಜ್ಯಗಳು ಪ್ರವಾಹ ಎದುರಿಸಬೇಕಾಯಿತು. ಟೌಕೇಟ್, ಯಾಸ್, ಗುಲಾಬ್ನಂತರ ಚಂಡಮಾರುತಗಳು ಕರಾವಳಿ ರಾಜ್ಯದ ಜನರ ಜೀವನ ಅಸ್ತವ್ಯಸ್ತಗೊಳಿಸಿದವು. ಪ್ರಮುಖವಾಗಿ ತೆಲಂಗಾಣ, ಆಂಧ್ರಪ್ರದೇಶ, ಕೇರಳ, ತಮಿಳುನಾಡು, ಕರ್ನಾಟಕ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅನೇಕ ತೊಂದರೆ ಅನುಭವಿಸುವಂತಾಯಿತು. ಜೊತೆಗೆ ಹಿಮಾಚಲ ಪ್ರದೇಶ, ಉತ್ತರಾಖಂಡದಲ್ಲೂ ಪ್ರವಾಹ ಭೀತಿ ತುಸು ಹೆಚ್ಚಾಗಿತ್ತು.
9. ಪೆಗಾಸಸ್ ಬೇಹುಗಾರಿಕೆ ಪ್ರಕರಣ ಸದ್ದು..
ಇಸ್ರೇಲ್ ಮೂಲದ ಸ್ಪೈ ವೇರ್ ಬಳಸಿ ದೇಶದ 300ಕ್ಕೂ ಹೆಚ್ಚು ಪ್ರಮುಖರ ಫೋನ್ ಹ್ಯಾಕ್ ಮಾಡಿರುವ ಆರೋಪ ಪ್ರಕರಣ ರಾಜಕೀಯ ವಲಯದಲ್ಲಿ ಹೆಚ್ಚು ಕೋಲಾಹಲಕ್ಕೆ ಕಾರಣವಾಯಿತು. ಕಾಂಗ್ರೆಸ್ನ ರಾಹುಲ್ ಗಾಂಧಿಯಿಂದ ಹಿಡಿದು ಪ್ರಶಾಂತ್ ಕಿಶೋರ್ ಸೇರಿದಂತೆ ಹಲವು ರಾಜಕಾರಣಿಗಳು, ಪತ್ರಕರ್ತರು ಮತ್ತು ಸಮಾಜ ಸೇವಕರ ಹೆಸರುಗಳು ಬೇಹುಗಾರಿಕೆಯಲ್ಲಿ ಸೇರಿಕೊಂಡಿದ್ದವು. 2021ರ ಮುಂಗಾರು ಅಧಿವೇಶನಕ್ಕೆ ಒಂದು ದಿನ ಬಾಕಿ ಇರುವಾಗಲೇ ಈ ಹಗರಣ ಬೆಳಕಿಗೆ ಬಂದಿದ್ದರಿಂದ ಅಧಿವೇಶನದಲ್ಲಿ ಪ್ರತಿಪಕ್ಷಗಳು ಆಡಳಿತ ಪಕ್ಷದ ವಿರುದ್ಧ ವಾಗ್ದಾಳಿ ನಡೆಸಿದವು. ಇದರ ವಿಚಾರಣೆ ಇದೀಗ ಸುಪ್ರೀಂಕೋರ್ಟ್ನಲ್ಲಿ ನಡೆಯುತ್ತಿದೆ.
10. ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮರುನಾಮಕರಣ
ಕ್ರೀಡೆಯಲ್ಲಿ ಅತ್ಯುತ್ತಮ ಸಾಧನೆ ತೋರಿರುವ ಕ್ರೀಡಾಪಟುಗಳಿಗೆ ಪ್ರತಿ ವರ್ಷ ನೀಡುವ ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಪ್ರಶಸ್ತಿ ಎಂದು ಮರುನಾಮಕರಣ ಮಾಡಲಾಯಿತು. ಆದರೆ ಈ ವಿಷಯ ರಾಜಕೀಯ ಬಣ್ಣ ಸಹ ಪಡೆದುಕೊಂಡಿತು.
11. ಒಲಿಂಪಿಕ್ಸ್‌ನಲ್ಲಿ ಭಾರತದ ಅಮೋಘ ಸಾಧನೆ
2021ರಲ್ಲಿ ಟೋಕಿಯೋದಲ್ಲಿ ನಡೆದ ಒಲಿಂಪಿಕ್ಸ್‌ನಲ್ಲಿ ಭಾರತ ಅಮೋಘ ಸಾಧನೆ ಮಾಡಿತು. ಒಂದು ಚಿನ್ನ, ಎರಡು ಬೆಳ್ಳಿ ಹಾಗೂ ನಾಲ್ಕು ಕಂಚಿನ ಪದಕ ಗೆದ್ದಿತು. ಪ್ರಮುಖವಾಗಿ ಜಾವೆಲಿನ್ ಥ್ರೋನಲ್ಲಿ ನೀರಜ್ ಚೋಪ್ರಾ ಚಿನ್ನದ ಪದಕ ಗೆದ್ದರೆ, ಕುಸ್ತಿಪಟು ರವಿಕುಮಾರ್ ದಹಿಯಾ, ವೇಟ್ ಲಿಫ್ಟರ್ ಮೀರಾಬಾಯಿ ಚಾನು ದೇಶಕ್ಕೆ ಬೆಳ್ಳಿ ಪದಕ ತಂದುಕೊಟ್ಟರು. ಉಳಿದಂತೆ ಬ್ಯಾಡ್ಮಿಂಟನ್ ತಾರೆ ಪಿ ವಿ ಸಿಂಧು, ಕುಸ್ತಿಪಟು ಬಜರಂಗ್ ಪುನಿಯಾ, ಪುರುಷರ ಹಾಕಿ ತಂಡ ಅದ್ಭುತ ಪ್ರದರ್ಶನ ನೀಡಿ, ಭಾರತಕ್ಕೆ ಕಂಚಿನ ಪದಕ ತಂದುಕೊಟ್ಟರು.
12. 60 ಸಾವಿರ ಗಡಿ ದಾಟಿದ ಸೆನ್ಸೆಕ್ಸ್
2021 ಭಾರತೀಯ ಷೇರು ಮಾರುಕಟ್ಟೆಯಲ್ಲಿ ಹೊಸದೊಂದು ಇತಿಹಾಸ ರಚನೆ ಮಾಡಿತು. ಇದೇ ಮೊದಲ ಸಲ 60 ಸಾವಿರ ಗಡಿ ದಾಟಿದ ಮುಂಬೈ ಸೆನ್ಸೆಕ್ಸ್ ಹೊಸದೊಂದು ದಾಖಲೆ ನಿರ್ಮಾಣ ಮಾಡಿ, ಅನೇಕ ಹೂಡಿಕೆದಾರರ ಜೇಬು ತುಂಬಿಸಿತು.
13. ಲಖೀಂಪುರಿ ಖೇರಿ ಹಿಂಸಾಚಾರ
ಕೇಂದ್ರ ಸರ್ಕಾರದ ಕೃಷಿ ಕಾಯ್ದೆ ವಿರೋಧಿಸಿ ರೈತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಉತ್ತರ ಪ್ರದೇಶದ ಲಖೀಂಪುರಿ ಖೇರಿಯಲ್ಲಿ ಹಿಂಸಾಚಾರ ನಡೆಯಿತು. ಅಕ್ಟೋಬರ್ ತಿಂಗಳಲ್ಲಿ ನಡೆದ ಈ ಹಿಂಸಾಚಾರದಲ್ಲಿ ನಾಲ್ವರು ರೈತರು, ಓರ್ವ ಪತ್ರಕರ್ತ ಸೇರಿದಂತೆ ಬಿಜೆಪಿಯ ಮೂವರು ಕಾರ್ಯಕರ್ತರು ಸಾವನ್ನಪ್ಪಿದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಅವರ ಪುತ್ರ ಆಶಿಶ್ ಮಿಶ್ರಾ ಪ್ರತಿಭಟನಾನಿರತ ರೈತರ ಮೇಲೆ ಕಾರು ಹಾಯಿಸಿದ ಆರೋಪ ಕೇಳಿ ಬಂದಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಆಶಿಶ್ ಮಿಶ್ರಾ ಬಂಧನಕ್ಕೊಳಪಟ್ಟಿದ್ದಾರೆ.
14. ಟಿ-20 ವಿಶ್ವಕಪ್ನಲ್ಲಿ ಪಾಕ್ ವಿರುದ್ಧ ಭಾರತಕ್ಕೆ ಸೋಲು
ಅಕ್ಟೋಬರ್ 24ರಂದು ದುಬೈನಲ್ಲಿ ನಡೆದ ಐಸಿಸಿ ಟಿ-20 ವಿಶ್ವಕಪ್ನ ಲೀಗ್ ಹಂತದಲ್ಲಿ ಟೀಂ ಇಂಡಿಯಾ ಪಾಕ್ ವಿರುದ್ಧ 10 ವಿಕೆಟ್ಗಳ ಸೋಲು ಕಂಡಿತು. ಈ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಇದೇ ಮೊದಲ ಸಲ ಸೋಲು ಕಂಡಿತು. ಜೊತೆಗೆ ಲೀಗ್ ಹಂತದಲ್ಲೇ ಟೀಂ ಇಂಡಿಯಾ ಮಹತ್ವದ ಟೂರ್ನಿಯಿಂದ ಹೊರಬಿದ್ದಿತು.
15. ಟಾಟಾ ಗ್ರೂಪ್ ಪಾಲಾದ ಏರ್ ಇಂಡಿಯಾ
ಆರ್ಥಿಕ ನಷ್ಟಕ್ಕೊಳಗಾಗಿದ್ದ ಭಾರತೀಯ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಕಂಪನಿ ಟಾಟಾ ಗ್ರೂಪ್ ಪಾಲಾಯಿತು. 1932ರಲ್ಲಿ ಟಾಟಾ ಸಮೂಹ ಏರ್ ಇಂಡಿಯಾ ಆರಂಭ ಮಾಡಿತ್ತು. ಆದರೆ ತದನಂತರ ಕೇಂದ್ರ ಸರ್ಕಾರ ಅದನ್ನ ತನ್ನ ಸ್ವಾಧೀನಕ್ಕೆ ಪಡೆದುಕೊಂಡಿತು. ಆದರೆ, ನಷ್ಟಕ್ಕೊಳಗಾದ ಕಾರಣ ಅದನ್ನ ಮರಳಿ ಮಾರಾಟ ಮಾಡಿತು.
16. ರಾಜ್ ಕುಂದ್ರಾ ಮತ್ತು ಆರ್ಯನ್ ಖಾನ್ ಬಂಧನ
ಆಶ್ಲೀಲ ಚಿತ್ರ ನಿರ್ಮಾಣ ಮಾಡಿದ್ದಕ್ಕಾಗಿ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ಪತಿ, ಉದ್ಯಮಿ ರಾಜ್ ಕುಂದ್ರಾ ಹಾಗೂ ಹಡಗಿನಲ್ಲಿ ಡ್ರಗ್ಸ್ ಪಾರ್ಟಿ ಮಾಡಿದಕ್ಕಾಗಿ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರನ್ನ ಬಂಧಿಸಲಾಗಿತ್ತು. 2021ರಲ್ಲಿ ಈ ಸುದ್ದಿ ಹೆಚ್ಚು ಚರ್ಚೆಗೆ ಗ್ರಾಸವಾಯಿತು. 2020ರಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬಳಿಕ ಎಚ್ಚೆತ್ತುಕೊಂಡಿದ್ದ ಎನ್ಸಿಬಿ ಡ್ರಗ್ಸ್ ವಿಚಾರವಾಗಿ ಅನೇಕರನ್ನ ವಿಚಾರಣೆಗೊಳಪಡಿಸಿತು. ಈ ವೇಳೆ ನಟಿ ದೀಪಿಕಾ ಪಡುಕೋಣೆ, ಶ್ರದ್ಧಾ ಕಪೂರ್ ಸೇರಿದಂತೆ ಅನೇಕರು ವಿಚಾರಣೆ ಎದುರಿಸಿದ್ದಾರೆ.
17. ಭಾರತೀಯ ಚಿತ್ರರಂಗದಲ್ಲಿ ಅಗಲಿದ ಅನೇಕ ನಕ್ಷತ್ರಗಳು..
2021ರಲ್ಲಿ ಅನೇಕ ನಟರು ನಮ್ಮನ್ನು ಅಗಲಿದರು. ಹಿಂದಿ ಚಿತ್ರರಂಗದ ಪ್ರಮುಖ ನಟ ದಿಲೀಪ್ ಕುಮಾರ್, ಬಿಗ್ ಬಾಸ್ ಖ್ಯಾತಿಯ ಸಿದ್ಧಾರ್ಥ್ ಶುಕ್ಲಾ, ಕನ್ನಡ ಚಿತ್ರರಂಗದ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್, ಸುರೇಖಾ ಸಿಕ್ರಿ, ಅನುಪಮ್ ಶ್ಯಾಮ್, ರಾಜ್ ಕೌಶಲ್,ಅಮಿತ್ ಮಿಸ್ತ್ರಿ , ರಾಜೀವ್ ಕಪೂರ್ ಸೇರಿದಂತೆ ಅನೇಕರು ಇಹಲೋಕ ತ್ಯಜಿಸಿದರು.
18. ಕೃಷಿ ಕಾಯ್ದೆ ಹಿಂಪಡೆದುಕೊಂಡ ಕೇಂದ್ರ ಸರ್ಕಾರ
ಅನ್ನದಾತರ ಸತತ ಹೋರಾಟಕ್ಕೆ ಮಣಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೃಷಿ ಕಾಯ್ದೆ ಹಿಂಪಡೆದುಕೊಳ್ಳಬೇಕಾಯಿತು. ಚಳಿಗಾಲದ ಅಧಿವೇಶನ ಆರಂಭಗೊಳ್ಳುವುದಕ್ಕೂ ಎರಡು ದಿನ ಮುಂಚಿತವಾಗಿ ದೇಶವನ್ನುದ್ದೇಶಿಸಿ ಮಾತನಾಡಿದ ನಮೋ, ಕೃಷಿ ಕಾನೂನು ಹಿಂಪಡೆದುಕೊಳ್ಳುತ್ತಿರುವುದಾಗಿ ಘೋಷಿಸಿದರು. ಈ ಮೂಲಕ ಕಳೆದ ಒಂದು ವರ್ಷದಿಂದ ಹೋರಾಟ ನಡೆಸಿದ್ದ ರೈತರಿಗೆ ಯಶಸ್ಸು ಸಿಕ್ಕಿತು.
19. ಸಿಡಿಎಸ್ ಬಿಪಿನ್ ರಾವತ್ ಸೇರಿ 13 ಸೇನಾ ಸಿಬ್ಬಂದಿ ಹುತಾತ್ಮ..
ಡಿಸೆಂಬರ್ 8ರಂದು ಭಾರತೀಯ ವಾಯುಪಡೆಯ ಹೆಲಿಕಾಪ್ಟರ್ನಲ್ಲಿ ಕುಟುಂಬ ಹಾಗೂ ಸೇನಾ ಸಿಬ್ಬಂದಿ ಜೊತೆ ತಮಿಳುನಾಡಿನ ಕನೂರಿಗೆ ಪ್ರಯಾಣಿಸುತ್ತಿದ್ದ ಬಿಪಿನ್ ರಾವತ್ ದುರಂತ ಸಾವು ಕಂಡರು. ಸೇನಾ ಹೆಲಿಕಾಪ್ಟರ್ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ರಾವತ್ ಅವರ ಪತ್ನಿ ಸೇರಿದಂತೆ ಹೆಲಿಕಾಪ್ಟರ್ನಲ್ಲಿದ್ದ 13 ಜನರು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಗಾಯಗೊಂಡಿದ್ದ ಗ್ರೂಪ್ ಕ್ಯಾಪ್ಟನ್ ವರುಣ್ ಸಿಂಗ್ ಒಂದು ವಾರದ ಬಳಿಕ ಬೆಂಗಳೂರಿನ ಮಿಲಿಟರಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.
20. ವಿಕ್ಕಿ ಕೌಶಲ್- ಕತ್ರಿನಾ ಕೈಫ್ ಅದ್ಧೂರಿ ಮದುವೆ
ಬಾಲಿವುಡ್ ನಟ ವಿಕ್ಕಿ ಕೌಶಲ್ ಮತ್ತು ನಟಿ ಕತ್ರಿನಾ ಕೈಫ್ ಡಿಸೆಂಬರ್ 9ರಂದು ರಾಜಸ್ಥಾನದಲ್ಲಿ ಅದ್ಧೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವರ್ಷವಿಡೀ ನಿಶ್ಚಿತಾರ್ಥ, ಮದುವೆ ಸುದ್ದಿಯ ಉಹಾಪೋಹಕ್ಕೆ ಈ ಜೋಡಿ ಕೊನೆಗೂ ಪೂರ್ಣ ವಿರಾಮ ಇಟ್ಟಿತು.
21. ವಿಶ್ವ ಸುಂದರಿಯಾದ ಹರ್ನಾಜ್ ಸಂಧು
ಡಿಸೆಂಬರ್ ತಿಂಗಳಲ್ಲಿ ನಡೆದ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತದ 21ರ ಹರ್ನಾಜ್ ಸಂದು ಮಿಸ್ ಯೂನಿವರ್ಸ್ ಆಗಿ ಹೊರಹೊಮ್ಮಿದರು. ಇಸ್ರೇಲ್ನಲ್ಲಿ ನಡೆದ 70ನೇ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತಕ್ಕೆ 21 ವರ್ಷಗಳ ನಂತರ ಈ ಪ್ರಶಸ್ತಿ ತಂದುಕೊಟ್ಟರು. ಈ ಹಿಂದೆ ಸುಶ್ಮಿತಾ ಸೇನ್(1994) ಹಾಗೂ 2000 ರಲ್ಲಿ ಲಾರಾ ದತ್ತ ಈ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದರು.