ಬರಿಪಾಡ (ಒಡಿಶಾ) : ಮೂವರನ್ನು ಹತ್ಯೆಗೈದ ಆರೋಪದ ಮೇಲೆ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಮಯೂರ್‌ಭಂಜ್ ಜಿಲ್ಲೆಯ ಜಶಿಪುರ್ ಪ್ರದೇಶದ ವ್ಯಕ್ತಿಯೊಬ್ಬ 19 ವರ್ಷಗಳ ಜೈಲು ಶಿಕ್ಷೆ ಅನುಭವಿಸಿದ ಬಳಿಕ ಬಿಡುಗಡೆಗೊಂಡಿದ್ದಾನೆ.
ವರದಿಯ ಪ್ರಕಾರ, ಜಿಲ್ಲೆಯ ಜಶಿಪುರ್ ಪೊಲೀಸ್ ವ್ಯಾಪ್ತಿಯ ಬಲರಾಮ್‌ಪುರ ಗ್ರಾಮದ ಹಬಿಲ್ ಸಿಂಧು 2003ರ ಜ.3 ರಂದು 2 ವರ್ಷದ ಮಗು ಸೇರಿದಂತೆ ಮೂವರನ್ನು ಕೊಲೆ ಮಾಡಿದ ಆರೋಪ ಹೊತ್ತಿದ್ದರು.
ಸಿಂಧು ಮಾಟ ಮಂತ್ರಕ್ಕಾಗಿ ತನ್ನ ನೆರೆಹೊರೆಯ ಇಬ್ಬರು ವ್ಯಕ್ತಿಗಳು ಮತ್ತು ಮಗುವನ್ನು ಕೊಂದಿದ್ದಾರೆ ಎಂದು ಶಂಕಿಸಲಾಗಿತ್ತು. ತ್ರಿವಳಿ ಕೊಲೆ ಪ್ರಕರಣದಲ್ಲಿ ಮಾಟ ಮಂತ್ರದ ಶಂಕೆಯ ಮೇರೆಗೆ ಪೊಲೀಸರು ತನಿಖೆ ಆರಂಭಿಸಿದ್ದರು. ಈ ಸಂಬಂಧ ಜಶಿಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಹಬಿಲ್‌ನನ್ನು ಬಂಧಿಸಲಾಗಿತ್ತು.
2005ರಲ್ಲಿ ಅಂದಿನ ಹೆಚ್ಚುವರಿ ಜಿಲ್ಲಾ ಕಮ್ ಸೆಷನ್ಸ್ ನ್ಯಾಯಾಧೀಶ ಬರಿಪಾಡ ಅವರು ಹಬಿಲ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರು. ಅದನ್ನು ಪ್ರಶ್ನಿಸಿ, ಹಬಿಲ್ ಒಡಿಶಾ ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ಮಧ್ಯಪ್ರವೇಶಿಸಿ ಪ್ರಕರಣವನ್ನು ಮರುಪರಿಶೀಲಿಸುವಂತೆ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಮಯೂರ್ ಭಂಜ್‌ಗೆ ಆದೇಶಿಸಿತು. ಜತೆಗೆ ಉಚಿತ ಕಾನೂನು ನೆರವು ನೀಡುವಂತೆ ಸರ್ಕಾರ ಆದೇಶಿಸಿತ್ತು.
11 ಸಾಕ್ಷಿ ಮತ್ತು 32 ತನಿಖಾ ವರದಿಗಳನ್ನು ಪರಿಶೀಲಿಸಿದ ನಂತರ, ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಮಯೂರ್ ಭಂಜ್, ಸಾಕ್ಷ್ಯಾಧಾರಗಳ ಕೊರತೆಯಿಂದ ಹಬಿಲ್ ಅವರನ್ನು ಖುಲಾಸೆಗೊಳಿಸಿದರು.
ಇದನ್ನೂ ಓದಿ: ಡ್ರಗ್ಸ್ ಕೇಸ್ : ವಿಚಾರಣೆಗೆ ಹಾಜರಾಗುವಂತೆ ಪ್ರೆಸ್ಟೀಜ್ ಕಂಪನಿ ಸಿಇಒಗೆ ನೋಟಿಸ್