ನವದೆಹಲಿ: ಭಾರತೀಯ ಕುಸ್ತಿ ಫೆಡರೇಶನ್ ಮಾಜಿ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಅಪ್ರಾಪ್ತ ಮಹಿಳಾ ಕುಸ್ತಿಪಟು ತಮ್ಮ ದೂರನ್ನು ಹಿಂಪಡೆದಿದ್ದಾರೆ ಎಂಬ ವರದಿಯಾಗಿದೆ. ಭಾನುವಾರ ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಚರ್ಚೆ ನಡೆದಿದೆ. ಎರಡು ದಿನಗಳ ಹಿಂದೆ ಅಪ್ರಾಪ್ತರು ತಮ್ಮ ದೂರನ್ನು ಹಿಂಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ದೆಹಲಿ ಪೊಲೀಸರು ಮಾತ್ರ ಇದನ್ನು ಖಚಿತಪಡಿಸಿಲ್ಲ.
ವಿಶೇಷವೆಂದರೆ, ಪೊಲೀಸರ ತನಿಖೆಯಲ್ಲಿ ದೂರು ನೀಡಿದ ಯುವತಿ ವಯಸ್ಕಳಾಗಿರುವುದು ಕಂಡು ಬಂದಿದೆ. ಇದಾದ ನಂತರ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಬಹುದು ಎಂಬ ಆತಂಕ ಇರುವುದರಿಂದಲೇ ದೂರು ಹಿಂಪಡೆಯಲಾಗಿದೆ ಎಂದು ಚರ್ಚೆ ಜೋರಾಗಿ ನಡೆಯುತ್ತಿದೆ. ಆದರೆ, ದೂರು ಹಿಂಪಡೆಯುವ ಮುನ್ನ ಅವರ ಹೇಳಿಕೆಯನ್ನು ಮ್ಯಾಜಿಸ್ಟ್ರೇಟ್ ಮುಂದೆ ದಾಖಲಿಸಲಾಗಿದೆ ಎಂಬ ಅಂಶವೂ ಈಗ ಹೊರ ಬಿದ್ದಿದೆ. ಅಪ್ರಾಪ್ತ ಮಹಿಳಾ ಕುಸ್ತಿಪಟುವಿನ ದೂರಿನ ಮೇರೆಗೆ ಬ್ರಿಜ್‌ಭೂಷಣ್ ಶರಣ್ ಸಿಂಗ್ ವಿರುದ್ಧ ಪೋಕ್ಸೋ ಪ್ರಕರಣದ ಅಡಿ ಎಫ್‌ಐಆರ್ ದಾಖಲಿಸಲಾಗಿದೆ.
ಇದನ್ನು ಓದಿ: ಕಾನ್ಪುರ ಹಿಂಸಾಚಾರ: ಪ್ರಮುಖ ಆರೋಪಿ ಖಾತೆಯಲ್ಲಿ ಕೋಟ್ಯಂತರ ರೂ. ವಹಿವಾಟು..ಬೆಚ್ಚಿಬಿದ್ದ ಅಧಿಕಾರಿಗಳು!
ಇತರ ಆರು ಮಹಿಳಾ ಕುಸ್ತಿಪಟುಗಳ ದೂರಿನ ಮೇರೆಗೆ ಬ್ರಿಜ್ ಭೂಷಣ್ ವಿರುದ್ಧ ಲೈಂಗಿಕ ಕಿರುಕುಳದ ಪ್ರತ್ಯೇಕ ಎಫ್‌ಐಆರ್ ಕೂಡಾ ದಾಖಲಿಸಲಾಗಿದೆ. ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಆರೋಪ ಮಾಡಿರುವ ಮಹಿಳಾ ಕುಸ್ತಿಪಟುಗಳು ಜಂತರ್ ಮಂತರ್ ನಲ್ಲಿ ಸುಮಾರು 35 ದಿನಗಳ ಕಾಲ ಧರಣಿ ನಡೆಸಿದ್ದರು ಎಂಬುದು ಗಮನಾರ್ಹ. ಆದರೆ ಮೇ 28 ರಂದು ಪೊಲೀಸರು ಮತ್ತು ಕುಸ್ತಿಪಟುಗಳ ನಡುವೆ ನಡೆದ ವಾಗ್ಯುದ್ಧ ಹಾಗೂ ಸಂಘರ್ಷದ ಬಳಿಕ ಜಂತರ್ ಮಂತರ್ನಿಂದ ಅವರನ್ನು ಬಂಧಿಸಿ ನಂತರ ಬಿಡುಗಡೆಗೊಳಿಸಲಾಗಿತ್ತು. ಆ ಬಳಿಕ ಜಂತರ್ ಮಂತರ್ನಲ್ಲಿ ಪ್ರತಿಭಟನೆ ಮಾಡುವುದಕ್ಕೆ ದೆಹಲಿ ಪೊಲೀಸರು ಅನುಮತಿ ನೀಡಿರಲಿಲ್ಲ.
ಈ ಘಟನೆ ಬಳಿಕ ಕುಸ್ತಿಪಟುಗಳು ಗಂಗಾನದಿಯಲ್ಲಿ ಪದಕಗಳನ್ನು ಎಸೆಯುವುದಾಗಿ ಘೋಷಣೆ ಮಾಡಿ, ಉತ್ತರಾಖಂಡ್ಗೆ ತೆರಳಿದ್ದರು. ಆದರೆ ಇದಕ್ಕೆ ಗಂಗಾಸಭೆ ವಿರೋಧ ವ್ಯಕ್ತಪಡಿಸಿತ್ತು. ಅಂದು ಕುಸ್ತಿಪಟುಗಳು ಸರ್ಕಾರಕ್ಕೆ ಐದು ದಿನಗಳ ಗಡುವು ನೀಡಿ, ಅಷ್ಟರಲ್ಲಿ ಕುಸ್ತಿ ಫೆಡರೇಷನ್ ಮಾಜಿ ಅಧ್ಯಕ್ಷ ಬ್ರಿಜ್ ಭೂಷಣ್ ಸಿಂಗ್ ಅವರನ್ನು ಬಂಧಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದ್ದರು.
ಈ ನಡುವೆ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳದ ದೂರು ನೀಡಿದ್ದ ಬಾಲಕಿಯರು ತಾವು ನೀಡಿರುವ ದೂರುಗಳನ್ನು ಹಿಂಪಡೆದುಕೊಂಡಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಮಹಿಳಾ ಕುಸ್ತಿಪಟುಗಳ ಹೋರಾಟಕ್ಕೆ ಟ್ವಿಸ್ಟ್ ಸಿಗುವ ಸಾಧ್ಯತೆಗಳಿವೆ.
ಸುಳ್ಳು ಎಂದ ಕುಸ್ತಿಪಟುವಿನ ತಂದೆ: ಭಾರತೀಯ ಕುಸ್ತಿ ಫೆಡರೇಶನ್ ಮುಖ್ಯಸ್ಥ ಬ್ರಿಜ್ ಭೂಷಣ್ ಶರಣ್ ಸಿಂಗ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ 17 ವರ್ಷದ ಕುಸ್ತಿಪಟುವಿನ ತಂದೆ ಈ ಬಗ್ಗೆ ಪ್ರತಿಕ್ರಿಯಿಸಿ, ತಾವು ಮಾಡಿದ ಆರೋಪ ಹಿಂಪಡೆದಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ಪ್ರಸಾರವಾಗುತ್ತಿರುವ ಸುದ್ದಿ ಸುಳ್ಳು ಎಂದು ಹೇಳಿದ್ದಾರೆ.