ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘವನ್ನು ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.
ಒಂದು ಪರಿವಾರದಲ್ಲಿ ಮಹಿಳೆಯರು ಮತ್ತು ವೃದ್ಧರನ್ನು ಗೌರವಿಸಲಾಗುತ್ತದೆ. ಆದರೆ ಇದು ಆರ್‌ಎಸ್‌ಎಸ್‌ನಲ್ಲಿಲ್ಲ. ಹೀಗಾಗಿ ನಾನು ಅದನ್ನು ಈ ರೀತಿ ಕರೆಯುವುದಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.
ಒಂದು ಕುಟುಂಬ ಅಂದಮೇಲೆ ಅಲ್ಲಿ ಹೆಣ್ಣು ಮಕ್ಕಳಿರುತ್ತಾರೆ, ಹಿರಿಯ ಸದಸ್ಯರನ್ನು ಗೌರವಿಸಲಾಗುತ್ತದೆ. ಸಹಾನುಭೂತಿ ಮತ್ತು ಪ್ರೀತಿಯ ಭಾವನೆ ಇರುತ್ತದೆ. ಅದು ಆರ್‌ಎಸ್‌ಎಸ್‌ನಲ್ಲಿ ಇಲ್ಲ. ನಾನು ಆರ್ಎಸ್ಎಸ್ಅನ್ನು ಎಂದೂ ಕೂಡ ಸಂಘ ಪರಿವಾರ ಎಂದು ಕರೆಯುವುದಿಲ್ಲ ಎಂದಿದ್ದಾರೆ.
ಇದೆಲ್ಲಾ ಸಂಘ ಪರಿವಾರ ನಡೆಸುತ್ತಿರುವ ಕೆಟ್ಟ ಪ್ರಚಾರದ ಪರಿಣಾಮವಾಗಿದೆ. ಕೇರಳದ ಸನ್ಯಾಸಿಗಳ ಮೇಲೆ ಯುಪಿಯಲ್ಲಿ ನಡೆದ ದಾಳಿಯು ಒಂದು ಸಮುದಾಯವನ್ನು ಮತ್ತೊಂದು ಸಮುದಾಯಕ್ಕೆ ವಿರುದ್ಧವಾಗಿ ಎತ್ತಿ ಕಟ್ಟುವ ಗುಣ ಎಂದಿದ್ದಾರೆ.
ಬಹುಜನ ಸಮಾಜ ಪಕ್ಷದ ಮುಖ್ಯಸ್ಥೆ ಮಾಯಾವತಿ ಕೂಡ ಈ ಘಟನೆಯನ್ನು ಖಂಡಿಸಿದ್ದಾರೆ. ವಿಶೇಷವಾಗಿ ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದ ಭೀಕರ ಅಪರಾಧಗಳು ಉತ್ತರ ಪ್ರದೇಶದಲ್ಲಿ ನಿಲ್ಲುತ್ತಿಲ್ಲ. ಇದು ಕಳವಳದ ವಿಷಯವಾಗಿದೆ ಎಂದು ಹೇಳಿದ್ದಾರೆ.
ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಈ ಸಂಬಂಧ ಪತ್ರ ಬರೆದಿದ್ದು, ನಾಲ್ಕು ಸನ್ಯಾಸಿಗಳು ಪ್ರಯಾಣಿಸುತ್ತಿದ್ದಾಗ ಕಿರುಕುಳ ನೀಡಿದ ಬಜರಂಗದಳದ ಸದಸ್ಯರು ಮತ್ತು ಝಾನ್ಸಿಯ ಪೊಲೀಸ್ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಮನವಿ ಮಾಡಿದ್ದಾರೆ.