ಮಧುರೈ(ತಮಿಳುನಾಡು): ಪೊಂಗಲ್ ಹಬ್ಬದ ನಿಮಿತ್ತ ವಿಶ್ವವಿಖ್ಯಾತ ಮಧುರೈ ಜಿಲ್ಲೆ ಅಲಂಕಾನಲ್ಲೂರಿನಲ್ಲಿ ನಡೆಯುತ್ತಿರುವ ಜಲ್ಲಿಕಟ್ಟು ಸ್ಪರ್ಧೆಗೆ ಇಂದು ರಾಜ್ಯದ ಕ್ರೀಡಾ ಸಚಿವ ಉದಯನಿಧಿ ಸ್ಟಾಲಿನ್ ಚಾಲನೆ ನೀಡಿದರು. ಇದಕ್ಕೂ ಮುನ್ನ ಉದಯನಿಧಿ ಸ್ಟಾಲಿನ್ ಸಮ್ಮುಖದಲ್ಲಿ ಸ್ಪರ್ಧಿಗಳು ಪ್ರಮಾಣ ವಚನ ಸ್ವೀಕರಿಸಿದರು. ಶಿಕ್ಷಣ ಸಚಿವ ಅನ್ಪಿಲ್ ಮಹೇಶ್ ಪೊಯ್ಯಮೊಳಿ ಮತ್ತು ಹಣಕಾಸು ಸಚಿವ ಪಳನಿವೇಲ್ ತ್ಯಾಗರಾಜನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
1,000 ಹೋರಿಗಳನ್ನು ಪಳಗಿಸುವ ಸ್ಪರ್ಧೆಯಲ್ಲಿ 350 ಪುರುಷರು ಭಾಗವಹಿಸುತ್ತಿದ್ದಾರೆ. ಪ್ರತಿ ಸುತ್ತಿನಲ್ಲಿ 25 ರಿಂದ 40 ಆಟಗಾರರಿಗೆ ಅವಕಾಶ ನೀಡಲಾಗುತ್ತದೆ. ಒಟ್ಟು 10 ಸುತ್ತುಗಳಲ್ಲಿ ಸ್ಪರ್ಧೆ ನಡೆಯಲಿದೆ. ಅದೇ ರೀತಿ ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲ ಹೋರಿಗಳಿಗೂ ಚಿನ್ನದ ನಾಣ್ಯಗಳನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ವಿಜೇತರಾದ ಯುವಕರಿಗೆ ಬಹುಮಾನವಾಗಿ ಕಾರು ಮತ್ತು ವಿಜೇತ ಗೂಳಿಗೂ ಕೂಡ ಕಾರನ್ನು ನೀಡಲಾಗುತ್ತದೆ.
ಪಂದ್ಯಾವಳಿಯಲ್ಲಿ ಭದ್ರತೆಗಾಗಿ 2,000 ಪೊಲೀಸರನ್ನು ನಿಯೋಜಿಸಲಾಗಿದೆ. ಅಲ್ಲದೇ 160 ವೈದ್ಯರು, ದಾದಿಯರು ಮತ್ತು 60 ಪಶುವೈದ್ಯರನ್ನು ಒಳಗೊಂಡ ವೈದ್ಯಕೀಯ ತಂಡವನ್ನು ನೇಮಿಸಲಾಗಿದೆ. ಈ ಪಂದ್ಯವನ್ನು ವೀಕ್ಷಿಸಲು ಸಾವಿರಾರು ಜನರು ಸೇರಿದ್ದಾರೆ. ವಿದೇಶಿ ಮತ್ತು ಹೊರ ರಾಜ್ಯಗಳ ಪ್ರವಾಸಿಗರಿಗೆ ಪ್ರತ್ಯೇಕ ಸಂದರ್ಶಕರ ಸ್ಥಳವನ್ನು ಕಾಯ್ದಿರಿಸಲಾಗಿದೆ.
ಇದನ್ನೂ ಓದಿ: ತಮಿಳುನಾಡಿನಲ್ಲಿ ಪೊಂಗಲ್ ಸಡಗರ: ಪ್ರಸಿದ್ಧ ಜಲ್ಲಿಕಟ್ಟು ಸ್ಪರ್ಧೆ ಪ್ರಾರಂಭ- ವಿಡಿಯೋ
'ಜಲ್ಲಿಕಟ್ಟು' ಸ್ಪರ್ಧೆಯ ವಿಶೇಷತೆ: ಕನ್ನಡದಲ್ಲಿ ಗೂಳಿ ಕಾಳಗ ಎಂದು ಕರೆಸಿಕೊಳ್ಳುವ ಜಲ್ಲಿಕಟ್ಟು ತಮಿಳುನಾಡಿನ ಬಹುಮುಖ್ಯ ಗ್ರಾಮೀಣ ಕ್ರೀಡೆ. ಇದು ಕ್ರೀಡೆಯಷ್ಟೇ ಅಲ್ಲ, ತಮಿಳುನಾಡಿನಲ್ಲಿ ಸಂಕ್ರಾಂತಿ ಹಬ್ಬದ ಒಂದು ಸಾಂಸ್ಕೃತಿಕ ಆಚರಣೆಯೂ ಆಗಿದೆ. ಜಲ್ಲಿಕಟ್ಟನ್ನು ಹೆಚ್ಚಾಗಿ ದಕ್ಷಿಣ, ಕಾವೇರಿ ಡೆಲ್ಟಾ ಮತ್ತು ಕೆಲವು ಪಾಶ್ಚಾತ್ಯ ದೇಶಗಳಲ್ಲಿ ಆಯೋಜಿಸಲಾಗುತ್ತದೆ. ಈ ಸಾಂಪ್ರದಾಯಿಕ ಹೋರಿ ಬೆದರಿಸುವ ಸ್ಪರ್ಧೆಯಲ್ಲಿ ಯುವಕರು ಅತ್ಯುತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಅಲ್ಲಿ ಎತ್ತುಗಳು 'ವಾಡಿ ವಾಸಲ್' ಎಂದು ಕರೆಯಲ್ಪಡುವ ಪ್ರವೇಶದ್ವಾರದ ಮೂಲಕ ಅಖಾಡಕ್ಕೆ ಪ್ರವೇಶಿಸುತ್ತವೆ. ಹೋರಿಯ ಮೇಲೆರಗುವ ಉತ್ಸಾಹಿ ತರುಣರು ಅದರ ಭುಜ ಹಿಡಿದುಕೊಂಡು ಹೋರಿಯನ್ನು ಒಂದು ಕಡೆ ನಿಲ್ಲಿಸಬೇಕು. ಹಾಗೆ ನಿಲ್ಲಿಸುವಲ್ಲಿ ಯಾರು ಸಫಲರಾಗುತ್ತಾರೋ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅವರಿಗೆ ಇನ್ನಿಲ್ಲದ ಮನ್ನಣೆ, ಗೌರವ ಸಿಗುತ್ತದೆ.
ಮೊಟ್ಟಮೊದಲ ಬಾರಿಗೆ ಚೆನ್ನೈನಲ್ಲಿ ಜಲ್ಲಿಕಟ್ಟು: ತಮಿಳುನಾಡಿನ ಸಾಂಪ್ರದಾಯಿಕ ಕ್ರೀಡೆ ಜಲಿಕಟ್ಟು ಮೊಟ್ಟ ಮೊದಲ ಬಾರಿಗೆ ಚೆನ್ನೈನಲ್ಲಿ ನಡೆಯಲಿದೆ. ಮಾರ್ಚ್ 5 ರಿಂದ ದಕ್ಷಿಣ ತಮಿಳುನಾಡಿನಲ್ಲಿ ಪ್ರಸಿದ್ಧವಾಗಿರುವ ಜಲ್ಲಿಕಟ್ಟು ಸ್ಪರ್ಧೆಗಳು ಮಧುರೈ ಬಿಟ್ಟು ಚೆನ್ನೈಗೆ ಸ್ಥಳಾಂತರಗೊಂಡಿದೆ. ಡಿಎಂಕೆ ಮುಖ್ಯಸ್ಥ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಎಂ ಕೆ ಸ್ಟಾಲಿನ್ ಅವರ ಜನ್ಮದಿನದ ಅಂಗವಾಗಿ ಜಲ್ಲಿಕಟ್ಟು ಸ್ಪರ್ಧೆ ಚೆನ್ನೈನಲ್ಲಿ ನಡೆಯಲಿದೆ. ಈ ವರ್ಷದ ಮಾರ್ಚ್ 5 ರಂದು ಚೆನ್ನೈನಲ್ಲಿ ಗೂಳಿಗಳು ಅಬ್ಬರಿಸಲು ಸಜ್ಜಾಗಿದ್ದು, ಗೂಳಿಗಳನ್ನು ಹಿಡಿಯಲು ಯುವಕರು ಉತ್ಸುಕರಾಗಿದ್ದಾರೆ.
ಇದನ್ನೂ ಓದಿ: ಹೈದರಾಬಾದಿನ ಕೊನೆಯ ನಿಜಾಮ್ ಮುಕರಮ್ ಜಾಹ್ ಟರ್ಕಿಯಲ್ಲಿ ನಿಧನ: ಬುಧವಾರ ಭಾರತದಲ್ಲಿ ಅಂತ್ಯಕ್ರಿಯೆ