ಹನುಮಕೊಂಡ, ತೆಲಂಗಾಣ: ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಆತ ಕೈತುಂಬಾ ಸಂಬಳ ಪಡೆಯುತ್ತಿದ್ದ. ಕೆಲ ತಿಂಗಳ ಹಿಂದೆ ಮದುವೆಯಾದ ಈತ ಸುಖವಾಗಿಯೇ ಜೀವನ ನಡೆಸುತ್ತಿದ್ದ. ಆದರೆ, ಕೆಲ ಸಾಫ್ಟ್‌ವೇರ್ ಕಂಪನಿಗಳು ಕೋವಿಡ್ನಿಂದಾಗಿ ವರ್ಕ್ ಫ್ರಂ ಹೋಮ್ ಅನ್ನು ಇನ್ನೂ ಮುಂದುವರಿಸಿವೆ. ಹೀಗಾಗಿ ಈ ಸಾಫ್ಟ್‌ವೇರ್ ಇಂಜಿನಿಯರ್ ಮನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.
ಮನೆಯಲಿದ್ದ ವೇಳೆ ಕೌಟುಂಬಿಕ ಕಲಹಗಳು ಹೆಚ್ಚಾಗಿದ್ದು, ಕೊನೆಗೆ ಇಂಜಿನಿಯರ್ ಬಲಿಯಾಗಿದ್ದಾನೆ. ಅತ್ತೆ ಮತ್ತು ಪತ್ನಿ ಕಿರುಕುಳದಿಂದ ಸಾಫ್ಟ್‌ವೇರ್ ಉದ್ಯೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ಜಿಲ್ಲೆಯ ಸಾಯಂಪೇಟ ಮಂಡಲದ ರಾಜುಪಲ್ಲಿ ಗ್ರಾಮದ ಕೊಂಡ ರಾಕೇಶ್ (28) ಹೈದರಾಬಾದ್‌ನ ಎಚ್‌ಸಿಎಲ್‌ನಲ್ಲಿ ಸಾಫ್ಟ್‌ವೇರ್ ಉದ್ಯೋಗಿಯಾಗಿ ಕೆಲಸ ಮಾಡುತ್ತಿದ್ದರು. ಫೆಬ್ರವರಿಯಲ್ಲಿ ಅವರು ವರಂಗಲ್ ಜಿಲ್ಲೆಯ ಸಂಗೆಂ ಮಂಡಲದ ಏಳುಕುರ್ತಿ ಹವೇಲಿಯ ದೇವುಲಪಲ್ಲಿ ನಿಹಾರಿಕಾಳನ್ನು (24) ವಿವಾಹವಾದರು. ಕೆಲ ತಿಂಗಳುಗಳ ಕಾಲ ಸುಸೂತ್ರವಾಗಿ ನಡೆಯುತ್ತಿದ್ದ ಇವರ ದಾಂಪತ್ಯಕ್ಕೆ ವರ್ಕ್ ಫ್ರಂ ಹೋಮ್ ಕೆಲಸಕ್ಕೆ ಅಡ್ಡಿಯಾಗಿದೆ.
ಹೌದು, ಹೆಂಡತಿ ನಿಹಾರಿಕಾ ಹಳ್ಳಿಯಲ್ಲಿ ಇರಲು ಇಷ್ಟಪಡದೇ ತನ್ನ ಪತಿಯನ್ನು ಹೈದರಾಬಾದ್‌ಗೆ ಹೋಗಿ ಜೀವನ ನಡೆಸೋಣ ಎಂದು ಕೇಳಿಕೊಂಡಿದ್ದಾಳೆ. ವರ್ಕ್ ಫ್ರಂ ಹೋಮ್ ನಿಯಮ ಮುಗಿದ ಬಳಿಕ ಹೋಗೋಣ ಎಂದು ತನ್ನ ಪತ್ನಿಗೆ ಹೇಳಿದ್ದಾನೆ. ಈ ವಿಚಾರದಲ್ಲಿ ಜಗಳವಾದ ಕಾರಣ ನಿಹಾರಿಕಾ ತವರು ಮನೆಗೆ ಹೋಗಿದ್ದಾಳೆ. ಗರ್ಭಿಣಿಯಾಗಿದ್ದ ನಿಹಾರಿಕಾಗೆ ಕೆಲ ದಿನಗಳ ಹಿಂದೆ ವಿಡಿಯೋ ಕಾಲ್ ಮಾಡಿದ ವೇಳೆ ಮತ್ತೆ ಜಗಳವಾಗಿದೆ.
ಇನ್ನು ಪತ್ನಿ ಆಡಿದ ಮಾತಿನಿಂದ ತೀವ್ರ ಮನನೊಂದ ರಾಕೇಶ್ ಕ್ರಿಮಿನಾಶಕ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವ ಮುನ್ನ ಸೂಸೈಡ್ ನೋಟ್ ಬರೆದಿಟ್ಟುಕೊಂಡಿದ್ದ ಆತ, ‘ನನ್ನ ಹೆಂಡತಿ ಮತ್ತು ಅತ್ತೆಯ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಉಲ್ಲೇಖಿಸಿದ್ದಾರೆ. ಈ ಘಟನೆ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಓದಿ: ಚಾಮರಾಜನಗರ: RIP ME ಎಂದು ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕಿ ರೈಲಿಗೆ ತಲೆಕೊಟ್ಟ ಯುವಕ