ಖಗಾರಿಯಾ (ಬಿಹಾರ): ಮಹಿಳೆಯರಿಗೆ ಅನಸ್ತೇಷಿಯಾ ನೀಡದೇ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿದ ಗಂಭೀರ ಆರೋಪ ಪ್ರಕರಣ ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಅಲ್ಲದೇ, ಶಸ್ತ್ರಚಿಕಿತ್ಸೆ ವೇಳೆ ನೋವಿನಿಂದ ಅಳುತ್ತಿದ್ದ ಮಹಿಳೆಯರನ್ನು ನೋಡಿ ಇತರ ಮಹಿಳೆಯರು ಅಲ್ಲಿಂದ ಓಡಿಹೋದರು ಎಂದೂ ಹೇಳಲಾಗಿದೆ.
ಇಲ್ಲಿನ ಅಳೋಲಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆಯು 30 ಮಹಿಳೆಯರಿಗೆ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುವ ಉದ್ದೇಶವೊಂದಿತ್ತು. ಇದರಲ್ಲಿ 23 ಮಹಿಳೆಯರು ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಲು ಆರೋಗ್ಯ ಕೇಂದ್ರಕ್ಕೆ ಬಂದಿದ್ದರು. ವೈದ್ಯಕೀಯ ನಿಯಮಗಳ ಪ್ರಕಾರ ಶಸ್ತ್ರಚಿಕಿತ್ಸೆ ನೆರವೇರಿಸದೇ ವೈದ್ಯರು ಮತ್ತು ಸಿಬ್ಬಂದಿ, ಮಹಿಳೆಯರೊಂದಿಗೆ ಅಮಾನುಷವಾಗಿ ನಡೆದುಕೊಂಡಿದ್ದಾರೆ. ಅರಿವಳಿಕೆ ಮದ್ದು (ಅನಸ್ತೇಷಿಯಾ) ನೀಡದೇ 23 ಮಹಿಳೆಯರಿಗೆ ಆಪರೇಷನ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವೈದ್ಯರು ಕ್ರೂರಿ ವರ್ತನೆ ಮತ್ತು ಆಪರೇಷನ್ ವೇಳೆ ಮಹಿಳೆಯರು ನೋವಿನಿಂದ ಗೋಳಾಡಲು ಶುರು ಮಾಡಿದ್ದರು. ನೋವಿನಿಂದ ಅಳುತ್ತಿದ್ದ ಮಹಿಳೆಯರನ್ನು ನೋಡಿ ಇತರ ಏಳು ಮಹಿಳೆಯರು ಅಲ್ಲಿಂದ ಓಡಿಹೋದರು ಎಂದು ತಿಳಿದು ಬಂದಿದೆ. ಮಹಿಳೆಯರು ನೋವಿನಿಂದ ಅಳುತ್ತಿದ್ದರೂ ಕೂಡ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿ ದಿವ್ಯ ನಿರ್ಲಕ್ಷ್ಯ ವಹಿಸಿದ್ದರು. ಎಲ್ಲ ಮಹಿಳೆಯರನ್ನು ಬಲವಂತವಾಗಿ ಆಪರೇಷನ್ ಥಿಯೇಟರ್‌ಗೆ ಕರೆದೊಯ್ದು ಶಸ್ತ್ರಚಿಕಿತ್ಸೆ ಮಾಡಲಾಯಿತು ಎಂದೂ ಹೇಳಲಾಗಿದೆ.
ಈ ಬಗ್ಗೆ ಸರ್ಜನ್ ಅಮರಕಾಂತ್ ಝಾ ಪ್ರತಿಕ್ರಿಯಿಸಿದ್ದು, ಸಂತಾನಹರಣ ಶಸ್ತ್ರಚಿಕಿತ್ಸೆ ಸಮಯದಲ್ಲಿ ರೋಗಿಗೆ ಅನಸ್ತೇಷಿಯಾ ನೀಡಬೇಕು. ಅನಸ್ತೇಷಿಯಾ ನೀಡದೇ ಶಸ್ತ್ರಚಿಕಿತ್ಸೆ ಮಾಡದಿದ್ದರೆ, ಈ ಬಗ್ಗೆ ತನಿಖೆ ಮಾಡಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಅಷ್ಟಿಷ್ಟಲ್ಲ ಫುಟ್ಬಾಲ್ ಗಾತ್ರದ ಮೂತ್ರಪಿಂಡದ ಗಡ್ಡೆ ಹೊರತೆಗೆದ ವೈದ್ಯರು