ಕೊಲ್ಲಾಪುರ(ಮಹಾರಾಷ್ಟ್ರ): ದೇಶದಲ್ಲಿ ಹಣದುಬ್ಬರ ಮಟ್ಟ ಹೆಚ್ಚಾಗುತ್ತಿದೆ. ದಿನ ಬಳಕೆಯ ವಸ್ತುಗಳು, ಸಿಲಿಂಡರ್ ದರ ಗಗನಕ್ಕೇರಿದೆ. ಇದನ್ನು ವಿರೋಧಿಸಿ ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಮಹಿಳೆಯರು ಗ್ಯಾಸ್ ಸಿಲಿಂಡರ್ಗಳನ್ನು ನದಿಗೆ ಎಸೆದು ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ, ಅದೇ ನದಿ ದಡದ ಮೇಲೆ ಒಲೆ ಹಚ್ಚಿ ಅಡುಗೆ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಗ್ಯಾಸ್ ಸಿಲಿಂಡರ್ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ ಪ್ರತಿಭಟನಾನಿರತ ಮಹಿಳೆಯರು ಸಿಲಿಂಡರ್ಗಳನ್ನು ಪಂಚಗಂಗಾ ನದಿಗೆ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇಶದಲ್ಲಿ ಹಣದುಬ್ಬರವನ್ನು ನಿಯಂತ್ರಣಕ್ಕೆ ತರಬೇಕು. ಇಲ್ಲದಿದ್ದರೆ ಭವಿಷ್ಯದಲ್ಲಿ ಗ್ಯಾಸ್ ಸಿಲಿಂಡರ್ಗಳು ನದಿಯಲ್ಲಿ ತೇಲುತ್ತಿರುತ್ತವೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಹಣದುಬ್ಬರವನ್ನು ತಗ್ಗಿಸುವುದಲ್ಲದೇ, ಹಿಂದಿನಂತೆಯೇ ಸಿಲಿಂಡರ್ ದರವನ್ನು ನಿಗದಿಪಡಿಸಬೇಕು. ಒಂದೆಡೆ ಉಚಿತ ಆಹಾರಧಾನ್ಯ ನೀಡಿ ಮತ್ತೊಂದೆಡೆ ಗ್ಯಾಸ್ ಬೆಲೆ ಹೆಚ್ಚಿಸಿದ್ದಾರೆ. ನಮಗೆ ಉಚಿತ ಧಾನ್ಯ ಸಿಕ್ಕರೂ ಅದನ್ನು ಬೇಯಿಸಿಕೊಂಡು ತಿನ್ನುವುದು ಹೇಗೆ ಎಂಬ ಪ್ರಶ್ನೆಯನ್ನು ಮಹಿಳೆಯರು ಕೇಂದ್ರ ಸರ್ಕಾರಕ್ಕೆ ಕೇಳಿದ್ದಾರೆ.
ಒಲೆಯ ಮೇಲೆ ಅಡುಗೆ ಮಾಡಿದ್ರು: ಗ್ಯಾಸ್ ಸಿಲಿಂಡರ್ಗಳನ್ನು ಪಂಚಗಂಗಾ ನದಿಗೆ ಬಿಸಾಡಿದ ಬಳಿಕ ನದಿ ದಂಡೆಯ ಮೇಲೆಯೇ ಕಟ್ಟಿಗೆಯನ್ನು ಬಳಸಿ ಒಲೆಯ ಮೇಲೆ ಅಡುಗೆ ಮಾಡುವ ಮೂಲಕವೂ ಪ್ರತಿಭಟನೆ ಮಾಡಲಾಯಿತು. ಕಟ್ಟಿಗೆಯ ತುಂಡುಗಳನ್ನು ಹೊತ್ತು ತಂದ ಪ್ರತಿಭಟನಾಕಾರರು ನದಿ ದಡದ ಮೇಲೆ ಒಲೆ ಹಚ್ಚಿ ರೊಟ್ಟಿಯನ್ನು ಬೇಯಿಸಿದರು. 'ಕಟ್ಟಿಗೆಯನ್ನು ಬಳಸುವುದರಿಂದ ಅರಣ್ಯ ನಾಶವಾಗುವ ಸಾಧ್ಯತೆ ಇರುತ್ತದೆ. ಮರಗಳನ್ನು ಉಳಿಸಲು ಗ್ಯಾಸ್ ಸಿಲಿಂಡರ್ ದರವನ್ನು ಇಳಿಸಬೇಕು ಎಂದು ಒತ್ತಾಯಿಸಿದರು.
ಓದಿ: ಮೌಢ್ಯಕ್ಕೆ ಕೊಕ್ಕೆ.. ವಿಧವೆ ಕುಂಕುಮ, ಬಳೆ, ಮಾಂಗಲ್ಯ ತೆಗೆಯಬೇಕಿಲ್ಲ.. ಮಹಾ ಗ್ರಾಪಂ ಕ್ರಾಂತಿಕಾರಿ ನಿರ್ಣಯ..