ಥಾಣೆ (ಮಹಾರಾಷ್ಟ್ರ): ಮಹಿಳೆಯರ ಬಗ್ಗೆ ಯೋಗ ಗುರು ಖ್ಯಾತಿಯ ಬಾಬಾ ರಾಮ್‌ದೇವ್ ವಿವಾದಿತ ಹೇಳಿಕೆ ನೀಡಿದ್ದಾರೆ. ಮಹಿಳೆಯರು ಸೀರೆಯಲ್ಲಿ ಚೆನ್ನಾಗಿ ಕಾಣುತ್ತಾರೆ. ಅವರು ಸಲ್ವಾರ್ ಸೂಟ್‌ನಲ್ಲೂ ಉತ್ತಮವಾಗಿ ಕಾಣುತ್ತಾರೆ ಮತ್ತು ನನ್ನ ದೃಷ್ಟಿಯಲ್ಲಿ ಅವರು ಏನನ್ನೂ ಧರಿಸದಿದ್ದರೂ ಸಹ ಚೆನ್ನಾಗಿ ಕಾಣುತ್ತಾರೆ ಎಂದು ಬಾಬಾ ರಾಮ್‌ದೇವ್ ಹೇಳಿದ್ದಾರೆ.
ಮಹಾರಾಷ್ಟ್ರದ ಥಾಣೆಯಲ್ಲಿ ಪತಂಜಲಿ ಯೋಗ ಪೀಠ ಮತ್ತು ಮುಂಬೈ ಮಹಿಳಾ ಪತಂಜಲಿ ಯೋಗ ಸಮಿತಿಯಿಂದ ಯೋಗ ವಿಜ್ಞಾನ ಶಿಬಿರ ಮತ್ತು ಮಹಿಳಾ ಸಭೆಯನ್ನು ಆಯೋಜಿಸಲಾಗಿತ್ತು. ಬೆಳಗ್ಗೆ ಯೋಗ ವಿಜ್ಞಾನ ಶಿಬಿರ ಮುಗಿದ ತಕ್ಷಣವೇ ಮಹಿಳೆಯರ ಸಭೆಯನ್ನು ನಡೆಸಿ, ರಾಮ್‌ದೇವ್ ಸಂವಾದ ನಡೆಸಿದರು.
ಯೋಗಾಭ್ಯಾಸದಲ್ಲಿ ಭಾಗವಹಿಸಿದ್ದ ಮಹಿಳೆಯರು ನಂತರ ನಡೆದ ಸಭೆಗೆ ಯೋಗ ಧರಿಸಿನಲ್ಲೇ ಆಗಮಿಸಿದ್ದರು. ಬಹುತೇಕರಿಗೆ ತಮ್ಮ ಉಡುಪು ಬದಲಾಯಿಸಲು ಸಾಧ್ಯವಾಗಿರಲಿಲ್ಲ. ಸಂವಾದದ ವೇಳೆ ಇದನ್ನೇ ಉಲ್ಲೇಖಿಸಿ ಮಾತನಾಡುವಾಗ ರಾಮ್‌ದೇವ್ ಈ ವಿವಾದಿತ ಹೇಳಿಕೆ ನೀಡಿದ್ದಾರೆ.
ಮಹಿಳೆಯರಿಗೆ ಸೀರೆ ಉಡಲು ಸಮಯ ಸಿಕ್ಕಿಲ್ಲ. ಆದರೂ, ತೊಂದರೆ ಇಲ್ಲ. ಈಗ ಮನೆಗೆ ಹೋಗಿ ಸೀರೆ ತೊಡಿ. ಮಹಿಳೆಯರು ಸೀರೆ ಉಟ್ಟರೆ ಚಂದ. ಸಲ್ವಾರ್ ಸೂಟ್‌ನಲ್ಲಿಯೂ ಮಹಿಳೆಯರು ಚೆನ್ನಾಗಿ ಕಾಣುತ್ತಾರೆ. ನನ್ನ ಪ್ರಕಾರ ಏನೂ ಇಲ್ಲದೆಯೂ ಚೆನ್ನಾಗಿ ಕಾಣುತ್ತಾರೆ ಎಂದು ರಾಮದೇವ್ ಹೇಳಿದ್ದಾರೆ.
ರಾಮ್‌ದೇವ್ ಈ ಹೇಳಿಕೆ ನೀಡುವಾಗ ಪಕ್ಷದಲ್ಲಿ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರ ಪುತ್ರರಾದ ಥಾಣೆಯ ಸಂಸದ ಶ್ರೀಕಾಂತ್ ಶಿಂಧೆ, ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಪತ್ನಿ, ಗಾಯಕಿ ಅಮೃತಾ ಫಡ್ನವಿಸ್ ಹಾಗೂ ಪ್ರಮುಖರು ಕುಳಿತಿದ್ದರು.
ಇದನ್ನೂ ಓದಿ: ಪೆರೋಲ್ ಅಂತ್ಯ: 40 ದಿನದ ಬಳಿಕ ಸುನಾರಿಯಾ ಜೈಲಿಗೆ ಮರಳಿದ ರಾಮ್ ರಹೀಮ್