ಖಂಡ್ವಾ(ಮಧ್ಯ ಪ್ರದೇಶ): ಆಕೆ ಐದು ತಿಂಗಳ ಗರ್ಭಿಣಿ. ಮಧ್ಯಪ್ರದೇಶದ ಭೀಂದ್ ಜಿಲ್ಲೆಯಲ್ಲಿರುವ ಪತಿಯ ಮನೆಯಿಂದ ಯಾದಗಿರಿಗೆ ತೆರಳಲು ಕರ್ನಾಟಕ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣ ಬೆಳೆಸಿದ್ದಳು. ತನ್ನ ತವರು ಮನೆಗೆ ತಲುಪುತ್ತಿದ್ದೇನೆ ಎಂಬ ಖುಷಿಯಲ್ಲಿದ್ದ ಆಕೆಗೆ ಅಲ್ಲಿ ಆಗಿದ್ದೇ ಬೇರೆ. ರೈಲಿನಲ್ಲಿ ಏಕಾಏಕಿ ಕುಸಿದು ಬಿದ್ದು ನೂರ್ ಜಹಾನ್‌ಗೆ ಪ್ರಜ್ಞೆ ತಪ್ಪಿ ಇನ್ನೆಂದೂ ಬಾರದ ಲೋಕಕ್ಕೆ ಪ್ರಯಾಣಿಸಿದ್ದಾರೆ.
ನೂರ್ ಜಹಾನ್ ಜೊತೆಗೆ ಇದ್ದ ಇಬ್ಬರು ಮುಗ್ಧ ಕಂದಮ್ಮಗಳು ತಾಯಿಯ ಸಾವಿನ ಬಗ್ಗೆ ಅರಿವಿಲ್ಲದೆ ಮೃತದೇಹದ ಬಳಿಯೇ ಅನಾಥರಾಗಿ ಕುಳಿತಿದ್ದವು. ಅದರಲ್ಲೂ 4 ವರ್ಷದ ಕಿರಿಯ ಪುತ್ರಿ ಮೃತದೇಹದ ಪಕ್ಕದಲ್ಲೇ ಆಟವಾಡುತ್ತಿದ್ದ ದೃಶ್ಯ ಕರಳು ಹಿಂಡುವಂತಿತ್ತು.
ಮಧ್ಯಪ್ರದೇಶ ಖಂಡ್ವಾ ಜಿಲ್ಲೆಯ ಹರ್ಡಾ ರೈಲ್ವೆ ನಿಲ್ದಾಣ ಈ ಹೃದಯ ವಿದ್ರಾವಕ ಘಟನೆಗೆ ಸಾಕ್ಷಿಯಾಗಿದೆ. ಪತಿ ಜಮಾಲುದ್ದೀನ್ ತನ್ನ ಪತ್ನಿಯನ್ನು ಕರ್ನಾಟಕದ ಯಾದಗಿರಿಯಲ್ಲಿರುವ ಅತ್ತೆ ಮನೆಯಲ್ಲಿ ಬಿಡಲು ಹೊರಟಿದ್ದ. ಗುರುವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಹರ್ಡಾ ರೈಲ್ವೆ ನಿಲ್ದಾಣ ಬಳಿ ನೂರ್ ಜಹಾನ್‌ಗೆ ವಾಂತಿ ಶುರುವಾಗಿದೆ. ನಂತರ ವಾಶ್ ರೂಂಗೆ ಹೋಗಿ ಅಲ್ಲಿ ಏಕಾಏಕಿ ತಲೆ ತಿರುಗಿ ಬಿದ್ದು ಪ್ರಜ್ಞೆ ತಪ್ಪಿದ್ದಾಳೆ. ರೈಲಿನಲ್ಲಿದ್ದ ಅಕ್ಕಪಕ್ಕದ ಪ್ರಯಾಣಿಕರು ನೀರು ಕುಡಿಸಲು ಯತ್ನಿಸಿದ್ರೂ ಪ್ರಜ್ಞೆ ಬಂದಿಲ್ಲ. ಆ ವೇಳೆಗಾಗಲೇ ದೇಹದಲ್ಲಿ ಯಾವುದೇ ಚಲನೆ ಇರಲಿಲ್ಲ. ರೈಲು ಖಂಡ್ವಾ ನಿಲ್ದಾಣಕ್ಕೆ ಬರುತ್ತಿದ್ದಂತೆ ಪತಿ ಜಮಾಲುದ್ದೀನ್ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾನೆ. ಸ್ಥಳಕ್ಕೆ ಬಂದ ಪೊಲೀಸರು, ಕುಸಿದು ಬಿದ್ದಿದ್ದ ಗರ್ಭಿಣಿಯನ್ನು ಪ್ರಾಥಮಿಕ ಪರೀಕ್ಷೆಗೆ ಒಳಪಡಿಸಿದಾಗ ಆಕೆ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.
ಇದನ್ನೂ ಓದಿ: ರುಂಡ - ಮುಂಡ ಬೇರ್ಪಡಿಸಿ ವ್ಯಕ್ತಿಯ ಹತ್ಯೆ ಪ್ರಕರಣ: ‘ಛೋಟಾ ಬಾಂಬೆ’ ನಟಿ ಅರೆಸ್ಟ್..!
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ರೈಲ್ವೆ ನಿಲ್ದಾಣದಲ್ಲೇ ಇರಿಸಿದ್ದರು. ಈ ವೇಳೆ ತನ್ನ ತಾಯಿ ಮೃತಪಟ್ಟಿದ್ದಾಳಾ? ಇಲ್ಲ ನಿದ್ರೆಗೆ ಜಾರಿದ್ದಾಳಾ? ಇದ್ಯಾವುದರ ಪರಿವೇ ಇಲ್ಲದ ಇಬ್ಬರು ಹೆಣ್ಣು ಮಕ್ಕಳು ಶವದ ಮುಂದೆ ಏನೂ ಅರಿಯದವರಂತೆ ಕುಳಿತ್ತಿದ್ದರು. ಆದ್ರೆ ಕಿರಿಯ ಪುತ್ರಿ ಮಾತ್ರ ತನ್ನಮ್ಮನಿಗೆ ಏನೂ ಆಗಿಲ್ಲ ಎಂಬಂತೆ ಮುಗ್ಧತೆಯಿಂದ ಮೃತದೇಹದ ಮುಂದೆ ಆಟವಾಡುತ್ತಿದ್ದ ದೃಶ್ಯ ಮಾತ್ರ ಕಣ್ಣಲ್ಲಿ ನೀರು ತರಿಸುವಂತಿತ್ತು. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಮಹಿಳೆ ಯಾವ ಕಾರಣಕ್ಕೆ ಮೃತಪಟ್ಟಿದ್ದಾಳೆ ಎಂಬುದರ ಬಗ್ಗೆ ತನಿಖೆ ಕೈಗೊಂಡಿದ್ದಾರೆ ಎನ್ನಲಾಗಿದೆ.