ನವದೆಹಲಿ: ಮಸೀದಿಗಳಲ್ಲಿ ಮಹಿಳೆಯರಿಗೆ ಪ್ರವೇಶ ಮತ್ತು ಪ್ರಾರ್ಥನೆಗೆ ಅವಕಾಶವಿದೆ. ಆದರೆ, ಪುರುಷರ ಜೊತೆಗೆ ಅವರು ಒಟ್ಟಾಗಿ ಪ್ರಾರ್ಥನೆ ಮಾಡಲು ಸಾಧ್ಯವಿಲ್ಲ. ಇದು ಇಸ್ಲಾಂ ನಿಯಮದಲ್ಲಿಲ್ಲ. ಹೀಗಾಗಿ ಮಹಿಳೆಯರು ಪ್ರತ್ಯೇಕವಾಗಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಎಂದು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. ಮಹಿಳೆಯರು ಮಸೀದಿ ಪ್ರವೇಶಕ್ಕೆ ನಿಷೇಧಿಸಿರುವುದು ಕಾನೂನುಬಾಹಿರ. ಅದನ್ನು ತೆರವು ಮಾಡಲು ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ಬಗ್ಗೆ ಸುಪ್ರೀಂಕೋರ್ಟ್ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಗೆ ತನ್ನ ಅಭಿಪ್ರಾಯ ಸಲ್ಲಿಸಲು ಸೂಚಿಸಿತ್ತು. ಮಂಡಳಿ ಸಲ್ಲಿಸಿದ ಅಫಿಡವಿಟ್ನಲ್ಲಿ ಮಹಿಳೆಯರ ಪ್ರಾರ್ಥನೆಗೆ ಅವಕಾಶವಿದೆ. ಯಾವುದೇ ನಿರ್ಬಂಧವಿಲ್ಲ ಎಂದು ಹೇಳಿದೆ.
ಪ್ರತ್ಯೇಕವಾಗಿ ಮಸೀದಿಯಲ್ಲಿ ಪ್ರಾರ್ಥಿಸಲಿ: "ಇಸ್ಲಾಂನ ಅನುಯಾಯಿಗಳ ಧಾರ್ಮಿಕ ಪಠ್ಯಗಳು, ಸಿದ್ಧಾಂತಗಳು ಮತ್ತು ನಂಬಿಕೆಗಳನ್ನು ಪರಿಗಣಿಸಿ ಮಸೀದಿಗಳಲ್ಲಿ ನಮಾಜ್ ಮಾಡಲು ಮಹಿಳೆಯರ ಪ್ರವೇಶವನ್ನು ಅನುಮತಿಸಲಾಗಿದೆ. ಆದರೆ, ಒಂದೇ ಸಾಲಿನಲ್ಲಿ ಅಥವಾ ಎಲ್ಲರನ್ನೂ ಒಂದೆಡೆ ಸೇರಿಸಿ ನಮಾಜ್ ಮಾಡುವುದಕ್ಕೆ ಇಸ್ಲಾಂನಲ್ಲಿ ಸೂಚಿಸಿಲ್ಲ. ನಿರ್ವಹಣಾ ಸಮಿತಿಯು ಮಸೀದಿ ಆವರಣದೊಳಗೆ ಪುರುಷ- ಮಹಿಳೆಯರನ್ನು ಪ್ರತ್ಯೇಕಿಸಿ ಪ್ರಾರ್ಥನೆ ಸಲ್ಲಿಸಬೇಕು ಎಂದು ಮಂಡಳಿ ತಿಳಿಸಿದೆ.
ಹೊಸ ಮಸೀದಿಗಳನ್ನು ನಿರ್ಮಿಸುವಾಗ ಮಹಿಳೆಯರಿಗೆ ಪ್ರಾರ್ಥನೆಗಾಗಿ ಸೂಕ್ತ ಸ್ಥಳಾವಕಾಶವನ್ನು ನಿಗದಿ ಮಾಡಬೇಕು. ಇದರಿಂದ ಅವರು ಪ್ರತ್ಯೇಕವಾಗಿ ಅಲ್ಲಾಹುವಿನ ಪ್ರಾರ್ಥನೆ ಮಾಡಬಹುದು. ಹೀಗಾಗಿ ನಿರ್ಮಾಣದ ವೇಳೆ ಗಮನಹರಿಸಿ ಎಂದು ಮಂಡಳಿಯು ಮುಸ್ಲಿಂ ಸಮುದಾಯಕ್ಕೆ ಮನವಿ ಮಾಡಿದೆ.
ಮಸೀದಿ ಪ್ರವೇಶಕ್ಕೆ ಮಹಿಳೆ ಸ್ವತಂತ್ರಳು: ಮುಸ್ಲಿಂ ಮಹಿಳೆಯು ಪ್ರಾರ್ಥನೆಗಾಗಿ ಮಸೀದಿಯನ್ನು ಪ್ರವೇಶಿಸಲು ಸ್ವತಂತ್ರಳಾಗಿದ್ದಾಳೆ. ಮಸೀದಿಯಲ್ಲಿ ಪ್ರಾರ್ಥನೆಗಾಗಿ ತನ್ನ ಹಕ್ಕನ್ನು ಚಲಾಯಿಸುವುದು ಅವಳ ಆಯ್ಕೆಯಾಗಿದೆ. ಧಾರ್ಮಿಕ ನಂಬಿಕೆಗಳನ್ನು ತಡೆಯಲು ಸಾಧ್ಯವಿಲ್ಲ. ಇಸ್ಲಾಂನ ನಿಯಮಾನುಸಾರವಾಗಿ ಎಲ್ಲರೂ ಮಸೀದಿಗೆ ಆಗಮಿಸಿ ಪ್ರಾರ್ಥನೆ ಸಲ್ಲಿಸಬಹುದು ಎಂದು ಅದು ಹೇಳಿದೆ.
ಪ್ರಕರಣವೇನು?: ಫರ್ಹಾ ಅನ್ವರ್ ಹುಸೇನ್ ಶೇಖ್ ಎಂಬುವವರು 2020 ರಲ್ಲಿ ಸುಪ್ರೀಂಕೋರ್ಟ್‌ಗೆ ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಭಾರತದಲ್ಲಿ ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶ ನಿಷೇಧ ಕಾನೂನುಬಾಹಿರ ಮತ್ತು ಅಸಂವಿಧಾನಿಕವಾಗಿದೆ. ಪೂಜಾ ಸ್ಥಳಗಳವಾದ ಮಸೀದಿಯಲ್ಲಿ ಧರ್ಮಗುರುಗಳು ಸಂಪೂರ್ಣವಾಗಿ ಹಿಡಿತ ಸಾಧಿಸಿದ್ದಾರೆ. ಇದನ್ನು ತೆರವು ಮಾಡಿ ಪ್ರವೇಶಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು.
ಮಾರ್ಚ್‌ನಲ್ಲಿ ಸುಪ್ರೀಂಕೋರ್ಟ್ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದ್ದು, ಇದಕ್ಕೂ ಮೊದಲು ಇಸ್ಲಾಂ ಧರ್ಮವನ್ನು ಪ್ರತಿನಿಧಿಸುವ ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅಭಿಪ್ರಾಯವನ್ನು ಸಲ್ಲಿಸಲು ಸೂಚಿಸಿತ್ತು. ಇಸ್ಲಾಂ ಧರ್ಮದಲ್ಲಿ ಮುಸ್ಲಿಂ ಮಹಿಳೆಯರು ಪ್ರತಿದಿನ 5 ಬಾರಿ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುವುದನ್ನು ಕಡ್ಡಾಯಗೊಳಿಸಿಲ್ಲ.
ಹಿಂದು ಮಹಾಸಭಾ ಅರ್ಜಿ ವಜಾ: 2019 ರಲ್ಲಿ ಅಖಿಲ ಭಾರತ ಹಿಂದೂ ಮಹಾಸಭಾ ಮುಸ್ಲಿಂ ಮಹಿಳೆಯರಿಗೆ ಮಸೀದಿ ಪ್ರವೇಶಕ್ಕೆ ಅವಕಾಶ ನೀಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ಮುಸ್ಲಿಂ ಮಹಿಳೆಯರೇ ಈ ಬಗ್ಗೆ ಪ್ರಶ್ನೆ ಮಾಡಲಿ. ಆಗ ಪರಿಗಣಿಸುತ್ತೇವೆ ಎಂದು ಕೋರ್ಟ್ ಹೇಳಿತ್ತು.
ಕೇರಳದ ಹಿಂದೂ ಮಹಾಸಭಾದ ಅಧ್ಯಕ್ಷ ಸ್ವಾಮಿ ದತ್ತಾತ್ರೇಯ ಸಾಯಿ ಸ್ವರೂಪ್ ನಾಥ್ ಅವರು ಈ ಬಗ್ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯನ್ನು ಕೇರಳ ಹೈಕೋರ್ಟ್ ರದ್ದು ಮಾಡಿದ್ದರಿಂದ ಸುಪ್ರೀಂ ಮೆಟ್ಟಿಲು ಹತ್ತಿದ್ದರು. ಮೇಲ್ಮನವಿ ವಿಚಾರಣೆ ನಡೆಸಿದ್ದ ಸುಪ್ರೀಂ, ಕೇರಳ ಹೈಕೋರ್ಟ್ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವ ಅಗತ್ಯತೆ ಇಲ್ಲ ಎಂದಿತ್ತು.
ಓದಿ: ಮೃತಪಟ್ಟ ಹುಲಿ ಕೊರಳು, ಕಾಲಲ್ಲಿ ತಂತಿ: ವ್ಯಾಘ್ರನ ಕೊಂದರೇ ಹುಲಿ ಹಂತಕರು?