ನವದೆಹಲಿ: ಲಿಂಗ ತಾರತಮ್ಯ ನೀತಿ ತೊಡೆದು ಹಾಕಲು ಭಾರತೀಯ ಸೇನೆ ದಿಟ್ಟ ಹೆಜ್ಜೆ ಇಟ್ಟಿದೆ. ಈ ನಿಟ್ಟಿನಲ್ಲಿ ವಿಶೇಷ ಆಯ್ಕೆ ಮಂಡಳಿಯು ಮಹಿಳಾ ಅಧಿಕಾರಿಗಳನ್ನು ಲೆಫ್ಟಿನೆಂಟ್ ಕರ್ನಲ್ ಹುದ್ದೆಯಿಂದ ಕರ್ನಲ್ ಹುದ್ದೆಗೇರಿಸಲು ಮುಂದಾಗಿದೆ. ಈ ಮೂಲಕ ಭಾರತೀಯ ಸೇನೆಯಲ್ಲಿ ಪುರುಷ ಸಹವರ್ತಿಗಳಿಗೆ ಸಮನಾಗಿ ಮಹಿಳೆಯರನ್ನೂ ತರಲು ಸೇನೆ ಮುಂದಾಗಿದೆ. ಇದೇ ಜನವರಿ 9 ರಿಂದ 22 ರವರೆಗೆ ಈ ಬಡ್ತಿ ಪ್ರಕ್ರಿಯೆ ನಡೆಯಲಿದೆ.
ಖಾಲಿ ಇರುವ 108 ಬಡ್ತಿ ಹುದ್ದೆಗಳಿಗೆ 244 ಮಹಿಳಾ ಅಧಿಕಾರಿಗಳನ್ನು ಪರಿಗಣಿಸಲಾಗುವುದು. ಸೇನೆಯ ವಿವಿಧ ಶಸ್ತ್ರಾಸ್ತ್ರ ಮತ್ತು ಸೇವೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ (ಇಂಜಿನಿಯರಿಂಗ್, ಸಿಗ್ನಲ್, ವಾಯು ರಕ್ಷಣಾ, ಗುಪ್ತಚರ ಕೋರ್, ಸೇನಾ ಸೇವಾ ಕೋರ್, ಸೇನಾ ಆರ್ಡಿನ್ಸ್ ಕೋರ್ ಮತ್ತು ಎಲೆಕ್ಟ್ರಾನಿಕ್ ಮತ್ತು ಮೆಕ್ಯಾನಿಕಲ್ ಇಂಜಿನಿಯರ್) 1992ರಿಂದ 2006 ಬ್ಯಾಚ್ನ ಅಧಿಕಾರಿಗಳನ್ನು ಸೇನೆ ಪರಿಗಣನೆಗೆ ತೆಗೆದುಕೊಳ್ಳಲಿದೆ.
108 ಹುದ್ದೆಗಳಿಗೆ ಬಡ್ತಿ: ಬಡ್ತಿ ಪಡೆಯುತ್ತಿರುವ 108 ಅಧಿಕಾರಿಗಳು ಸಂಪೂರ್ಣವಾಗಿ ಸದೃಢವಾಗಿದ್ದು, ವಿವಿಧ ಕಮಾಂಡ್ ಕಾರ್ಯಕ್ರಮದ ಕಾರ್ಯನಿರ್ವಹಣೆಯನ್ನು ಪರಿಗಣನೆಗೆ ಪಡೆದು ಈ ಆಯ್ಕೆ ಮಾಡಲಾಗುವುದು. ಇದೇ ಜನವರಿ ಅಂತ್ಯದ ಮೊದಲ ಹಂತದ ಪೋಸ್ಟಿಂಗ್‌ಗಳನ್ನು ವಿತರಿಸಲಾಗುವುದು ಎಂದು ಭಾರತೀಯ ಸೇನಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಶಾಶ್ವತ ಆಯೋಗದಿಂದ ಅಧಿಕಾರ: ಮಹಿಳೆಯರಿಗೆ ಸಮಾನ ಅವಕಾಶಗಳನ್ನು ಒದಗಿಸುವ ಉದ್ದೇಶದಿಂದ ಭಾರತೀಯ ಸೇನೆಯು ಮಹಿಳಾ ಅಧಿಕಾರಿಗಳಿಗೆ ಅವರ ಪುರುಷ ಸಹವರ್ತಿಗಳಿಗೆ ಸಮಾನವಾದ ಅಧಿಕಾರ ಹೊಂದಲು ಶಾಶ್ವತ ಆಯೋಗವನ್ನು (ಪಿಸಿ) ನೀಡಿದೆ. ಪಿಸಿ ಅನುದಾನದೊಂದಿಗೆ ಮಹಿಳಾ ಅಧಿಕಾರಿಗಳು ಹೆಚ್ಚಿನ ಕಾರ್ಯನಿರ್ವಹಣೆ ಮತ್ತು ಉನ್ನತ ಶ್ರೇಣಿಗಳಲ್ಲಿ ಜವಾಬ್ದಾರಿ ಹೊರಲು ಸಾಧ್ಯವಾಗಲಿದೆ.
ಇದನ್ನೂ ಓದಿ: ರಾಮಸೇತು ರಾಷ್ಟ್ರೀಯ ಪಾರಂಪರಿಕ ಸ್ಮಾರಕವಾಗಿ ಘೋಷಿಸಲು ಪರಿಶೀಲನೆ: ಕೇಂದ್ರ ಸರ್ಕಾರ