ಎರ್ನಾಕುಲಂ (ಕೇರಳ): ಕೊಚ್ಚಿಯ ಫ್ಲ್ಯಾಟ್‌ನಲ್ಲಿ ಬೀಗ ಹಾಕಿ ಮಹಿಳೆಗೆ ಚಿತ್ರಹಿಂಸೆ ನೀಡಿದ ಪ್ರಕರಣದ ಆರೋಪಿಗಳನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಕೊಚ್ಚಿ ಡಿಸಿಪಿ ಐಶ್ವರ್ಯಾ ಡೋಗ್ರೆ ತಿಳಿಸಿದ್ದಾರೆ.
ತನಿಖಾ ತಂಡವು ಎರಡು ಬಾರಿ ತ್ರಿಶೂರ್‌ಗೆ ಭೇಟಿ ನೀಡಿದರೂ ಆರೋಪಿ ಮಾರ್ಟಿನ್ ಜಾಡು ಕಂಡುಹಿಡಿಯಲಾಗಿಲ್ಲ. ಆದರೆ, ತನಿಖೆಯಲ್ಲಿ ಯಾವುದೇ ವಿಳಂಬವಿಲ್ಲ ಮತ್ತು ಆರೋಪಿಗೆ ನೋಟಿಸ್ ಕೂಡ ನೀಡಲಾಗಿದೆ ಎಂದು ಡಿಸಿಪಿ ಹೇಳಿದ್ದಾರೆ.
ಎರಡು ತಿಂಗಳ ಹಿಂದೆ ಎರ್ನಾಕುಲಂ ಕೇಂದ್ರ ಪೊಲೀಸರಿಗೆ ದೂರು ನೀಡಿದ್ದರೂ ಈವರೆಗೂ ಆರೋಪಿಯನ್ನು ಬಂಧಿಸಿಲ್ಲ. ಇನ್ನೊಂದೆಡೆ ಆರೋಪಿ ಪರ ವಕೀಲರು ಜಾಮೀನುಗಾಗಿ ಹೈಕೋರ್ಟ್ ಅನ್ನು ಸಂಪರ್ಕಿಸಿದ್ದಾರೆ ಎಂದು ಸಂತ್ರಸ್ತ ಮಹಿಳೆ ಆರೋಪಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಮಹಿಳೆ ಪೊಲೀಸರಿಗೆ ನೀಡಿದ ದೂರಿನ ಪ್ರಕಾರ, ಕಣ್ಣೂರು ಮೂಲದ ಆರೋಪಿ ಮಾರ್ಟಿನ್ ಮತ್ತು ಮಹಿಳೆ ಸುಮಾರು ಒಂದು ವರ್ಷದಿಂದ ಕೊಚ್ಚಿಯಲ್ಲಿ ಒಟ್ಟಿಗೆ ವಾಸಿಸುತ್ತಿದ್ದರು. ಆರೋಪಿ ಮಾರ್ಕೆಟಿಂಗ್ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದು, ಮಹಿಳೆ ಮಾಡಲಿಂಗ್ ಕ್ಷೇತ್ರದಲ್ಲಿದ್ದಳು. ಈ ಮಧ್ಯೆ ಇಬ್ಬರಿಗೂ ಹಣಕಾಸಿನ ವಿಚಾರವಾಗಿ ಜಗಳವಾಗಿದೆ.
ಹೀಗಾಗಿ ಫ್ಲ್ಯಾಟ್‌ನಿಂದ ಹೊರಹೋಗಲು ಮಹಿಳೆ ಮುಂದಾಗಿದ್ದಳು. ಇದಕ್ಕೆ ನಿರಾಕರಿಸಿದ ಆರೋಪಿ ಆಕೆಯನ್ನು ಕೋಣೆಯಲ್ಲಿ ಬಂಧಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮಹಿಳೆಯ ನಗ್ನ ಚಿತ್ರಗಳನ್ನಿಟ್ಟುಕೊಂಡು ಬ್ಲ್ಯಾಕ್ಮೇಲ್ ಮಾಡಿ ಚಿತ್ರಹಿಂಸೆ ನೀಡಿದ್ದಾನೆ ಎನ್ನಲಾಗಿದೆ.
ಕೆಲ ದಿನಗಳ ಬಳಿಕ ಫ್ಲ್ಯಾಟ್‌ನಿಂದ ಹೊರಬಂದ ಮಹಿಳೆ, ಘಟನೆ ಬಗ್ಗೆ ಪೋಷಕರಿಗೆ ಮಾಹಿತಿ ನೀಡಿ ಪೊಲೀಸರಿಗೆ ದೂರು ನೀಡಿದ್ದಾಳೆ. ವಿಷಯ ತಿಳಿದ ಆರೋಪಿ ಮಾರ್ಟಿನ್ ತಲೆಮರೆಸಿಕೊಂಡಿದ್ದು, ಪೊಲೀಸರು ಹುಡುಕಾಟ ನಡೆಸಿದ್ದಾರೆ.