ಹರಿದ್ವಾರ: ಮೂರನೇ ವ್ಯಕ್ತಿಯೊಬ್ಬನೊಂದಿಗೆ ತನ್ನ ಪತಿಯು ಸ್ಕೂಟರ್‌ನಲ್ಲಿ ಹೋಗುತ್ತಿರುವುದನ್ನು ನೋಡಿದ ಮಹಿಳೆಯೊಬ್ಬರು ಭಾರಿ ಹಂಗಾಮಾ ಸೃಷ್ಟಿಸಿದ ಘಟನೆ ಇಲ್ಲಿಗೆ ಸಮೀಪದ ಕೋತವಾಲಿ ರಾನಿಪುರ ಕ್ಷೇತ್ರದ ಶಿವಲೋಕ ಕಾಲನಿಯಲ್ಲಿ ನಡೆದಿದೆ. ಸ್ಕೂಟರ್ ಅಡ್ಡಗಟ್ಟಿದ ಪತ್ನಿ ರಸ್ತೆ ಮಧ್ಯದಲ್ಲೇ ಪತಿಗೆ ಚಪ್ಪಲಿ ಏಟು ಕೂಡ ನೀಡಿದ್ದಾರೆ. ಅದು ಹೇಗೋ ಮಾಡಿ ಆ ನಪುಂಸಕ ವ್ಯಕ್ತಿಯು ಮಹಿಳೆಯಿಂದ ಅವರ ಪತಿಯನ್ನು ರಕ್ಷಿಸಿ ಮತ್ತೆ ಸ್ಕೂಟರ್ ಹತ್ತಿಸಿಕೊಂಡು ಸ್ಥಳದಿಂದ ಕಾಲ್ಕಿತ್ತನು. ಏಟು ತಿಂದ ಪತಿ ಹಾಗೂ ಆತನ ಪತ್ನಿ ಇಬ್ಬರೂ ಸುಮಾರು ಒಂದು ವರ್ಷದ ಹಿಂದೆ ವಿವಾಹವಾಗಿದ್ದರಂತೆ. ಆದರೆ, ಸಂಸಾರದಲ್ಲಿ ಅನ್ಯೋನ್ಯತೆ ಇರಲಿಲ್ಲ ಎನ್ನಲಾಗಿದೆ.
ಏನಿದು ಘಟನೆ: ಲಭ್ಯ ಮಾಹಿತಿಯ ಪ್ರಕಾರ, ಭಗತ್ ಸಿಂಗ್ ಚೌಕ್ ನಿಂದ ಬಿಎಚ್ಇಎಲ್ ಗೆ ಹೋಗುವ ರಸ್ತೆಯಲ್ಲಿ ಮಹಿಳೆಯೊಬ್ಬರು ಏಕಾಏಕಿ ವ್ಯಕ್ತಿಯೊಬ್ಬನನ್ನು ಚಪ್ಪಲಿಯಿಂದ ಥಳಿಸಲಾರಂಭಿಸಿದ್ದಾರೆ. ಆ ವ್ಯಕ್ತಿಯೊಂದಿಗೆ ಸ್ಕೂಟರ್‌ನಲ್ಲಿ ಓರ್ವ ನಪುಂಸಕನೂ ಕುಳಿತಿದ್ದ. ರಸ್ತೆಯಲ್ಲಿಯೇ ಎಲ್ಲ ಹೈಡ್ರಾಮಾ ನಡೆಯುತ್ತಿದ್ದುದರಿಂದ ಜನರು ಕೂಡ ಸ್ಥಳದಲ್ಲಿ ಜಮಾಯಿಸಿದರು. ವಿಚಾರಣೆ ನಡೆಸಿದಾಗ ಇಬ್ಬರೂ ಗಂಡ-ಹೆಂಡತಿ ಎಂಬುದು ಗೊತ್ತಾಯಿತು.
ಮಹಿಳೆ ಮತ್ತು ಅವರ ಪತಿ ಕಂಖಾಲ್ ಪೊಲೀಸ್ ಠಾಣೆ ವ್ಯಾಪ್ತಿಯ ಜಗಜಿತ್‌ಪುರ ನಿವಾಸಿಗಳು ಎಂದು ಹೇಳಲಾಗುತ್ತಿದೆ. ಸಂಜೆ ಪತಿ ಮೂರನೇ ವ್ಯಕ್ತಿಯೊಂದಿಗೆ ಸ್ಕೂಟರ್‌ನಲ್ಲಿ ಹೋಗುತ್ತಿದ್ದುದನ್ನು ಪತ್ನಿ ನೋಡಿದ್ದಾರೆ. ಅಷ್ಟೇ ಅಲ್ಲದೆ ಸ್ಕೂಟರ್ ನಿಲ್ಲಿಸಿದ ಪತ್ನಿ ಚಪ್ಪಲಿ ತೆಗೆದು ಪತಿಗೆ ಥಳಿಸಿದ್ದಾರೆ.
ಸದ್ಯ ಠಾಣೆಗೆ ಈ ಕುರಿತಂತೆ ಯಾವುದೇ ದೂರು ಬಂದಿಲ್ಲ ಎಂದು ರಾಣಿಪುರ ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಮರ್ ಚಂದ್ ಶರ್ಮಾ ಹೇಳಿದ್ದಾರೆ.