ಮಥುರಾ(ಉತ್ತರ ಪ್ರದೇಶ): 21 ವರ್ಷದ ಯುವತಿಯೋರ್ವಳ ಮೇಲೆ ಚಲಿಸುತ್ತಿದ್ದ ಕಾರಿನಲ್ಲೇ ಫೇಸ್ಬುಕ್ ಗೆಳೆಯನೋರ್ವ ಅತ್ಯಾಚಾರವೆಸಗಿದ್ದಾನೆ. ಉತ್ತರ ಪ್ರದೇಶದ ಮಥುರಾದಲ್ಲಿ ಈ ಪ್ರಕರಣ ನಡೆದಿದೆ.
ಉತ್ತರ ಪ್ರದೇಶದ ಸಬ್ ಇನ್ಸ್ಪೆಕ್ಟರ್ ನೇಮಕಾತಿ ಪರೀಕ್ಷೆ ಮುಗಿಸಿ ಆಗ್ರಾದಿಂದ ಮಥುರಾಗೆ ಮರಳುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಯುವತಿಯನ್ನು ಕರೆದುಕೊಂಡು ಹೋಗಲು ಫೇಸ್ಬುಕ್ ಸ್ನೇಹಿತನೋರ್ವ ಕಾರ್ ಡ್ರೈವರ್ ಆಗಿ ಆಗಮಿಸಿದ್ದ. ಆಕೆ ಕಾರಿನಲ್ಲಿ ಕುಳಿತುಕೊಂಡ ನಂತರ ಮತ್ತು ಬರುವ ಔಷಧಿ ಸಿಂಪಡನೆ ಮಾಡಿದ್ದಾನೆ. ಹೀಗಾಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಇದರ ಬೆನ್ನಲ್ಲೇ ಆಕೆಯ ಮೇಲೆ ದುಷ್ಕೃತ್ಯವೆಸಗಿ, ಅಲ್ಲಿಂದ ಪರಾರಿಯಾಗಿದ್ದಾನೆ.
ಯುವತಿಗೆ ಪ್ರಜ್ಞೆ ಬಂದಾಗ ದೆಹಲಿ-ಆಗ್ರಾ ರಾಷ್ಟ್ರೀಯ ಹೆದ್ದಾರಿಯಲ್ಲಿರುವುದು ಗೊತ್ತಾಗಿದೆ. ಕೆಲವರ ಸಹಾಯದಿಂದ ಮನೆಗೆ ಬಂದಿರುವ ಯುವತಿ ಘಟನೆಗೆ ಸಂಬಂಧಿಸಿದಂತೆ ಮನೆಯಲ್ಲಿ ಹೇಳಿಕೊಂಡಿದ್ದಾಳೆ. ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಪ್ರಕರಣದ ಮಾಹಿತಿ ನೀಡಿರುವ ಪೊಲೀಸರು, ಹರಿಯಾಣದ ಪಲ್ವಾಲ್ ಎಂಬಾತ ಯುವತಿಗೆ ಸಾಮಾಜಿಕ ಜಾಲತಾಣ ಫೇಸ್ಬುಕ್ ಮೂಲಕ ಸ್ನೇಹಿತನಾಗಿದ್ದನು. ಆಕೆ ಪರೀಕ್ಷೆ ಬರೆಯಲು ಹೋಗಿದ್ದ ವೇಳೆ ಕಾರ್ ಡ್ರೈವರ್ ಆಗಿ ತೆರಳಿದ್ದು, ಮರಳಿ ಬರುವಾಗ ಮತ್ತು ಬರುವ ಔಷಧಿ ಸಿಂಪಡನೆ ಮಾಡಿದ್ದಾನೆ. ಇದರ ಬೆನ್ನಲ್ಲೇ ದುಷ್ಕೃತ್ಯವೆಸಗಿ ಪರಾರಿಯಾಗಿದ್ದಾನೆಂದು ತಿಳಿಸಿದ್ದಾರೆ.
ಯುವತಿ ನೀಡಿರುವ ಹೇಳಿಕೆ ಆಧಾರದ ಮೇಲೆ ಈಗಾಗಲೇ ಎಫ್ಐಆರ್ ದಾಖಲು ಮಾಡಿಕೊಳ್ಳಲಾಗಿದ್ದು, ಸೆಕ್ಷನ್ 376(ರೇಪ್) ಹಾಗೂ ಪೋಕ್ಸೊ ಕಾಯ್ದೆಯಡಿ ದೂರು ದಾಖಲಾಗಿವೆ ಎಂದಿದ್ದಾರೆ. ಯುವತಿಯನ್ನು ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದ್ದು, ವರದಿಗೋಸ್ಕರ ಕಾಯುತ್ತಿದ್ದೇವೆ ಎಂದು ಪೊಲೀಸ್ ವರಿಷ್ಠಾಧಿಕಾರಿ ಶಿರೀಶ್ ಚಂದ್ರ ತಿಳಿಸಿದ್ದಾರೆ.