ಲಖನೌ( ಉತ್ತರ ಪ್ರದೇಶ): ಮಹಿಳೆಯೊಬ್ಬಳು ತನ್ನ ಮೃತ ತಂದೆಯ ಪತ್ನಿ ಎಂದು ಹೇಳಿಕೊಂಡು ಕಳೆದ 10 ವರ್ಷದಿಂದ ಸರ್ಕಾರದಿಂದ ಪಿಂಚಣಿ ಪಡೆಯುತ್ತಿದ್ದ ಆಘಾತಕಾರಿ ಪ್ರಕರಣ ಉತ್ತರ ಪ್ರದೇಶದ ಇಟಾಹ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ಮೊಹ್ಸಿನಾ ಪರ್ವೇಜ್ (36) ಬಂಧಿತ ಆರೋಪಿ. ಈಕೆ ಕಳೆದ 10 ವರ್ಷಗಳಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷ ರೂ. ಪಿಂಚಣಿ ಹಣ ಪಡೆದಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷ ಎಂದರೆ ಈ ಪ್ರಕರಣವನ್ನು ಬಯಲಿಗೆ ತಂದದ್ದು, ಈ ಮಹಿಳೆಯ ಪತಿ. ಆತ ನೀಡಿದ ದೂರಿನ ಮೇರೆಗೆ ಪೊಲೀಸರು ಕಾನೂನು ಕ್ರಮ ಕೈಗೊಂಡಿದ್ದಾರೆ.
ಪ್ರಕರಣದ ಸಂಪೂರ್ಣ ವಿವರ: ಅಲಿಗಂಜ್ ನಗರದ ನಿವಾಸಿ ವಿಜರತ್ ಉಲ್ಲಾ ಖಾನ್ ಅವರು 1987ರಲ್ಲಿ ಲೇಖಪಾಲ್ (ಸರ್ವೇಯರ್) ಹುದ್ದೆಯಿಂದ ನಿವೃತ್ತರಾಗಿದ್ದರು. ಜನವರಿ 2013ರಂದು ನಿಧನರಾದರು. ಅಲ್ಲಿಯವರೆಗೂ ಅವರು ಸರ್ಕಾರದಿಂದ ನಿವೃತ್ತಿ ವೇತನ ಪಡೆದುಕೊಳ್ಳುತ್ತಿದ್ದರು. ಅವರ ಪತ್ನಿ ಸಬಿಯಾ ಬೇಗಂ ಅವರಿಗಿಂತ ಮೊದಲೇ ಮೃತಪಟ್ಟಿದ್ದರು.
ತನ್ನ ತಂದೆಯ ನಿಧನದ ನಂತರ ಮಗಳು ಮೊಹ್ಸಿನಾ ಪರ್ವೇಜ್ ತನ್ನ ಮೃತ ತಂದೆಯ ಹೆಂಡತಿ ಎಂದು ಹೇಳಿಕೊಂಡು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಂದಿನಿಂದ ಪಿಂಚಣಿ ಹಣ ಪಡೆಯಲು ಪ್ರಾರಂಭಿಸಿದರು. ಮೊಹ್ಸಿನಾ ಕಳೆದ 10 ವರ್ಷಗಳ ಅವಧಿಯಲ್ಲಿ ಸರ್ಕಾರದಿಂದ ಬರೋಬ್ಬರಿ 12 ಲಕ್ಷಕ್ಕೂ ಹೆಚ್ಚು ಪಿಂಚಣಿ ಹಣ ಪಡೆದಿದ್ದಾರೆ. ಈ ನಡುವೆ ಮೊಹ್ಸಿನಾ 2017ರಲ್ಲಿ ಫಾರೂಕ್ ಅಲಿ ಎಂಬ ಯುವಕನನ್ನು ವಿವಾಹವಾದರು. ಆದರೆ, ಸ್ವಲ್ಪ ಸಮಯದ ನಂತರ ಅವರ ಸಂಬಂಧ ಹಳಸಿತ್ತು. ಬಳಿಕ ಇಬ್ಬರೂ ವಿಚ್ಛೇದನ ಪಡೆದಿದ್ದರು.
ಇದನ್ನೂ ಓದಿ: ನಕಲಿ ಛಾಪಾ ಕಾಗದ ಸೃಷ್ಟಿಸಿ ಸರ್ಕಾರಕ್ಕೆ ವಂಚನೆ: ಆರೋಪಿಗಳ ಬಂಧನ
'ಮೊಹ್ಸಿನಾ ತನ್ನ ತಂದೆಯ ಪಿಂಚಣಿಯನ್ನು ಮೋಸದಿಂದ ಪಡೆಯುತ್ತಿದ್ದ ಬಗ್ಗೆ ಪತಿ ಫಾರೂಕ್‌ಗೆ ತಿಳಿದಿತ್ತು. ವಿಚ್ಛೇದನದ ನಂತರ ಮಹಿಳೆಯ ಪತಿ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಈ ಕುರಿತು ತನಿಖೆ ನಡೆಸಲಾಗುತ್ತಿದ್ದು, ಆರೋಪಿ ಮಹಿಳೆಯನ್ನು ಬಂಧಿಸಲಾಗಿದೆ' ಎಂದು ಎಎಸ್ಪಿ ಧನಂಜಯ್ ಸಿಂಗ್ ಕುಶ್ವಾಹ ತಿಳಿಸಿದ್ದಾರೆ.
ಅಲಿಗಂಜ್‌ನಲ್ಲಿರುವ ಉಪವಿಭಾಗೀಯ ಮ್ಯಾಜಿಸ್ಟ್ರೇಟ್ ಕಚೇರಿಯ ಪ್ರಾಥಮಿಕ ತನಿಖೆಯಲ್ಲಿ ಮೊಹ್ಸಿನಾ ತನ್ನ ತಾಯಿಯ ಹೆಸರು ಮತ್ತು ಅವರ ಭಾವಚಿತ್ರವನ್ನು ಪಿಂಚಣಿ ಅರ್ಜಿ ನಮೂನೆಯಲ್ಲಿ ಬಳಸಿದ್ದಾರೆ ಎಂದು ತಿಳಿದು ಬಂದಿದೆ. ಈ ಅರ್ಜಿ ನಮೂನೆಯನ್ನು ಸರಿಯಾಗಿ ಪರಿಶೀಲಿಸದ ಕಾರಣ ಅವರ ಪಿಂಚಣಿ ಅರ್ಜಿಯನ್ನು ಇಲಾಖೆ ಅನುಮೋದಿಸಿತ್ತು. ವಿಷಯ ಬೆಳಕಿಗೆ ಬಂದಾಗ ಮೊಹ್ಸಿನಾ ವಿರುದ್ಧ ಅಲಿಗಂಜ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು. ಈ ಬಗ್ಗೆ ಐಪಿಸಿ ಸೆಕ್ಷನ್ 420, 467, 468, 471 ಮತ್ತು 409 ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಇದನ್ನೂ ಓದಿ: ಪಿಂಚಣಿಗಾಗಿ 15 ವರ್ಷ ಕಣ್ಣಿಲ್ಲದಂತೆ ಮಹಿಳೆಯ ನಾಟಕ.. ಸಣ್ಣ ತಪ್ಪಿನಿಂದ ಬಯಲಾಯ್ತು ಕಳ್ಳಾಟ