ಜಮುಯಿ (ಬಿಹಾರ): ಫೆಬ್ರವರಿ 14ರಂದು ಎಲ್ಲೆಡೆ ಪ್ರೇಮಿಗಳ ದಿನವನ್ನು ಆಚರಿಸಲಾಗಿದೆ. ಆದರೆ, ಇದೇ ದಿನ ಬಿಹಾರದ ಜಮುಯಿ ಜಿಲ್ಲೆಯಲ್ಲಿ ದುರಂತವೊಂದು ನಡೆದಿದೆ. ಪ್ರೇಮ ವಿವಾಹವಾದ ಮರು ದಿನವೇ ಎಂದರೆ, ಪ್ರೇಮಿಗಳ ದಿನವೇ ಯುವತಿಯೊಬ್ಬರು ಬಾವಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಇದು ಸಹಜ ಸಾವಲ್ಲ, ಗಂಡನ ಮನೆಯವರು ಯುವತಿಯನ್ನು ಕೊಲೆ ಮಾಡಿದ್ದಾರೆ ಎಂದು ಮೃತರ ಕುಟುಂಬಸ್ಥರು ಆರೋಪಿಸಿದ್ದಾರೆ.
ಇದನ್ನೂ ಓದಿ: ವರನ ಸ್ವಾಗತಿಸಲು ನಿಂತಿದ್ದ ವಧುವಿನ ಕುಟುಂಬದ ಮೇಲೆ ಹರಿದ ವಾಹನ: ಮೂವರ ಸಾವು
ಇಲ್ಲಿನ ಗಿಡ್ದೌರ್ ಪೊಲೀಸ್ ಠಾಣೆ ವ್ಯಾಪ್ತಿಯ ಮೌರಾ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತ ನವವಿವಾಹಿತೆಯನ್ನು ಮಂಜೂರ್ ಆಲಂ ಅನ್ಸಾರಿ ಅವರ ಪುತ್ರಿ ಸಲ್ಮಾ ಎಂದು ಗುರುತಿಸಲಾಗಿದೆ. ಸಲ್ಮಾ ಸಾವಿಗೆ ಒಂದು ದಿನ ಮುನ್ನವಷ್ಟೇ ಖಾತೂನ್ ಗ್ರಾಮದ ಸನಾವುಲ್ ಅನ್ಸಾರಿ ಎಂಬಾತನೊಂದಿಗೆ ಪ್ರೇಮ ವಿವಾಹವಾಗಿದ್ದರು ಎಂದು ತಿಳಿದು ಬಂದಿದೆ.
ಮದುವೆಯ ಬೆನ್ನಲ್ಲೇ ಕಲಹ: ಸನಾವುಲ್ ಅನ್ಸಾರಿ ಮತ್ತು ಸಲ್ಮಾ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ನಂತರ ಕುಟುಂಬದವರೊಂದಿಗೆ ಮಾತನಾಡಿ ಮದುವೆಗೆ ಒಪ್ಪಿಸಿದ್ದರು. ಅಂತೆಯೇ, ಫೆಬ್ರವರಿ 13ರಂದು ನ್ಯಾಯಾಲಯದಲ್ಲಿ ಸನಾವುಲ್ ಮತ್ತು ಸಲ್ಮಾ ಇಬ್ಬರೂ ವಿವಾಹವಾಗಿದ್ದರು. ಆದರೆ, ವಿವಾಹವಾದ ಬೆನ್ನಲ್ಲೇ ಪತಿ - ಪತ್ನಿಯರ ಮಧ್ಯೆ ಕೋರ್ಟ್ ಪೇಪರ್ಗಳ ವಿಚಾರವಾಗಿ ಜಗಳ ಶುರುವಾಗಿತ್ತು ಎಂದು ಮೃತ ಸಲ್ಮಾ ಸಂಬಂಧಿಕರು ಆರೋಪಿಸಿದ್ದಾರೆ.
ಅಲ್ಲದೇ, ಮದುವೆಗೆ ಮುನ್ನ ಸಲ್ಮಾ ಕುಟುಂಬದಿಂದ ಒಂದು ಲಕ್ಷ ರೂಪಾಯಿ ವರದಕ್ಷಿಣೆಗೆ ಸನಾವುಲ್ ಬೇಡಿಕೆಯಿಟ್ಟಿದ್ದ. ಆತನ ಬೇಡಿಕೆಯಂತೆ ವರದಕ್ಷಿಣೆಯಾಗಿ ಸನಾವುಲ್ಗೆ ಒಂದು ಲಕ್ಷ ರೂ. ಹಣ ನೀಡಲಾಗಿತ್ತು. ಆದರೆ, ಮದುವೆಯಾದ ಮರು ದಿನವೇ ಸಲ್ಮಾ ಶವವಾಗಿ ಪತ್ತೆಯಾಗಿದ್ದಾರೆ. ಇದಕ್ಕೆ ಗಂಡನ ಮನೆಯವರೇ ಕಾರಣ. ಕೋರ್ಟ್ ಪೇಪರ್ ವಿಚಾರವಾಗಿ ಕಲಹ ಉಂಟಾದ ಬಳಿಕ ಪತಿ ಮತ್ತು ಅತ್ತೆ, ಮಾವ ಸೇರಿಕೊಂಡು ಕೊಲೆ ಮಾಡಿದ್ದಾರೆ ಎಂದು ಆಕೆಯ ಕುಟುಂಬಸ್ಥರು ದೂರಿದ್ದಾರೆ.
ಬಾವಿಯಲ್ಲಿ ಯುವತಿ ಶವ ಪತ್ತೆ: ಸೋಮವಾರ ಮದುವೆಯಾದ ಮರು ದಿನವೇ ಎಂದರೆ ಮಂಗಳವಾರ ರಾತ್ರಿ ಸಲ್ಮಾರನ್ನು ಗಂಡನ ಮನೆಯವರು ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ. ನಂತರ ಮೃತದೇಹವನ್ನು ಬಾಯಿ ಎಸೆದಿದ್ದಾರೆ ಎಂದು ಆರೋಪಿಸಿರುವ ಕುಟುಂಬಸ್ಥರು, ಬುಧವಾರ ಬೆಳಗ್ಗೆ ಬಾವಿಯಲ್ಲಿ ಸಲ್ಮಾರ ಶವ ಪತ್ತೆಯಾಗಿದೆ. ಬಾವಿಯಲ್ಲಿ ಶವ ಬಿದ್ದಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬಾವಿಯಲ್ಲಿ ಶವ ಪತ್ತೆಯಾದ ನಂತರ ಗ್ರಾಮಸ್ಥರು ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಂತೆಯೇ, ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಶವವನ್ನು ಮೇಲಕ್ಕೆತ್ತಿದ್ದಾರೆ. ನಂತರ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದು, ವೈದ್ಯರು ಮರಣೋತ್ತರ ಪರೀಕ್ಷೆಯನ್ನು ಪೂರ್ಣಗೊಳಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಿದ್ದಾರೆ.
ಹಲವರ ವಿರುದ್ಧ ಕುಟುಂಬಸ್ಥರ ದೂರು: ಸಲ್ಮಾ ಸಾವಿಗೆ ಸಂಬಂಧಿಸಿದಂತೆ ಕುಟುಂಬಸ್ಥರು ಗಂಡನ ಮನೆಯವರ ವಿರುದ್ಧ ದೂರು ನೀಡಿದ್ದಾರೆ. ಪತಿ ಸನಾವುಲ್ ಅನ್ಸಾರಿ, ಮಾವ ವಕೀಲ ಅನ್ಸಾರಿ, ಅತ್ತೆ ಮುನ್ನಿ ಖಾತೂನ್ ಹಾಗೂ ಮೂವರು ಸೊಸೆಯರು ಮತ್ತು ಇತರರು ಸಲ್ಮಾರನ್ನು ಕೊಂದು ಶವವನ್ನು ಬಾವಿಗೆ ಎಸೆದು ಪರಾರಿಯಾಗಿದ್ದಾರೆ ಎಂದು ತಮ್ಮ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಸದ್ಯ ಈ ಘಟನೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ: ಟೈರ್ ಸ್ಫೋಟಗೊಂಡು ಲಾರಿಗೆ ಗುದ್ದಿದ ಜೀಪ್: ನಾಲ್ವರು ಮಹಿಳೆಯರು ಸೇರಿ ಆರು ಮಂದಿ ದುರ್ಮರಣ