ತಿರುವನಂತಪುರಂ(ಕೇರಳ): ಕೇವಲ ಎರಡು ತಿಂಗಳ ಹಿಂದಷ್ಟೇ ಮದುವೆಯಾಗಿದ್ದ ಯುವತಿಯೋರ್ವಳು ದುರ್ಮರಣಕ್ಕೀಡಾಗಿದ್ದಾಳೆ. ಕಟ್ಟಿಕೊಂಡ ಗಂಡ ಆಕೆಯ ಶೀಲದ ಮೇಲೆ ಶಂಕೆ ವ್ಯಕ್ತಪಡಿಸಿ ವಿದ್ಯುತ್ ಲ್ಯಾಂಪ್ನಿಂದ ಹೊಡೆದಿದ್ದಾನೆ. ಪರಿಣಾಮ, ತಲೆಯ ಭಾಗಕ್ಕೆ ಬಲವಾದ ಪೆಟ್ಟು ಬಿದ್ದು ಗಂಭೀರವಾಗಿ ಗಾಯಗೊಂಡ ಆಕೆ ಪ್ರಾಣ ತೆತ್ತಿದ್ದಾಳೆ.
ದಕ್ಷಿಣ ಕೇರಳದ ವರ್ಕಲಾದಲ್ಲಿಂದು ಬೆಳಗ್ಗೆ ಘಟನೆ ನಡೆದಿದೆ. 25 ವರ್ಷದ ಯುವತಿ 35ರ ಹರೆಯದ ವ್ಯಕ್ತಿಯೊಂದಿಗೆ ದಾಂಪತ್ಯ ಜೀವನಕ್ಕೆ ಅಡಿ ಇಟ್ಟಿದ್ದಳು. ಉದ್ಯೋಗ ನಿಮಿತ್ತ ಇಬ್ಬರೂ ಗಲ್ಫ್ ರಾಷ್ಟ್ರಕ್ಕೆ ತೆರಳಿದ್ದರು. ಕಳೆದ ಕೆಲ ದಿನಗಳ ಹಿಂದೆ ಚಿಕಿತ್ಸೆಗೋಸ್ಕರ ಸ್ವದೇಶಕ್ಕೆ ಮರಳಿದ್ದಾರೆ. ಈ ಸಂದರ್ಭದಲ್ಲಿ ಪತ್ನಿಯ ಚಾರಿತ್ರ್ಯದ ಮೇಲೆ ಅನುಮಾನ ವ್ಯಕ್ತಪಡಿಸಿರುವ ಆತ ಜಗಳವಾಡಿದ್ದಾನೆ. ಈ ಜಗಳ ತಾರಕಕ್ಕೇರಿದಾಗ ವಿದ್ಯುತ್ ಲ್ಯಾಂಪ್ನಿಂದ ಹಲ್ಲೆ ನಡೆಸಿದ್ದಾನೆ. ಗಂಭೀರವಾಗಿ ಗಾಯಗೊಂಡಿದ್ದ ಯುವತಿಯನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ: ಓದುವ ವಯಸ್ಸಲ್ಲೇ ಅಮ್ಮನಾದ ಬಾಲಕಿ: ಶಾಲೆ ಶೌಚಾಲಯದಲ್ಲೇ ಮಗು ಹೆತ್ತು ಪೊದೆಗೆಸೆದಳು!
ಆರೋಪಿ ಗಂಡನನ್ನು ಬಂಧಿಸಿರುವ ಪೊಲೀಸರು ಐಪಿಸಿ ಸೆಕ್ಷನ್ 302 ಅಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.