ಕೋಲ್ಕತ್ತಾ(ಪಶ್ಚಿಮ ಬಂಗಾಳ) : ರಾಜ್‌ಕುಮಾರ್ ಹಿರಾನಿ ನಿರ್ದೇಶನದ 2009ರ '3 ಈಡಿಯಟ್ಸ್' ಸಿನಿಮಾ 13 ವರ್ಷಗಳ ನಂತರ ಮುನ್ನೆಲೆಗೆ ಬಂದಿದೆ.! ಅಮೀರ್ ಖಾನ್ ಅಭಿನಯದ ಈ ಸಿನಿಮಾದಲ್ಲಿ ಸ್ಟಾಪ್ ಗ್ಯಾಪ್ ವೈದ್ಯರ ಮೂಲಕ ಹೆರಿಗೆ ಮಾಡಿಸುವ ರೋಚಕ ದೃಶ್ಯ ಪ್ರೇಕ್ಷಕರನ್ನು ಚಕಿತಗೊಳಿಸಿತ್ತು. ಇಂಥದ್ದೇ, ಕೊಂಚ ವಿಭಿನ್ನ ಎನ್ನಬಹುದಾದ ಘಟನೆಯೊಂದು ಕೋಲ್ಕತ್ತಾದ ಬೀದಿಯಲ್ಲಿ ನಡೆದಿದೆ. ಆಲಿಯಾ ಬೀಬಿ ಎಂಬ ಗರ್ಭಿಣಿ ರಸ್ತೆಯಲ್ಲಿ ನಡೆದು ಸಾಗುತ್ತಿದ್ದಾಗ ಹೆರಿಗೆ ನೋವು ಕಾಣಿಸಿಕೊಂಡು ಒದ್ದಾಡಿದ್ದಾರೆ. ಆಗ ಅವರ ನೆರವಿಗೆ ಮಹಿಳೆಯೊಬ್ಬರು ಧಾವಿಸಿ ಬಂದಿದ್ದಾರೆ. ಮುಂದೇನಾಯ್ತು ನೋಡೋಣ?.
ನಗರದ ಬೀದಿಯಲ್ಲಿ ಜನಿಸಿದ ಕಂದ: ಗರ್ಭಿಣಿ ಹೆರಿಗೆ ನೋವು ತಾಳಲಾರದೇ ಜೋರಾಗಿ ಅಳುತ್ತಿದ್ದರು. ಇದನ್ನರಿತ ಪತಿ ರಿಕ್ಷಾದಲ್ಲಿ ಕರೆದುಕೊಂಡು ಎಂಆರ್ ಬಂಗೂರ್ ಆಸ್ಪತ್ರೆಗೆ ಹೊರಟಿದ್ದಾರೆ. ಮಾರ್ಗಮಧ್ಯೆದಲ್ಲಿ ಹೆರಿಗೆ ನೋವು ಸಹಿಸಲಾಗದಷ್ಟು ಜೋರಾಗಿದೆ. ಅಲಿಯಾ ಅವರು ಹೆರಿಗೆ ನೋವು ತಾಳಲಾರದೇ ಜೋರಾಗಿ ಕೂಗಾಡುತ್ತಿದ್ದರು. ಆಕೆಯ ಪರಿಸ್ಥಿತಿ ಅರಿತ ಪತಿ ರಿಕ್ಷಾ ನಿಲ್ಲಿಸಿ ‘ದಯವಿಟ್ಟು ಯಾರಾದರೂ ನಮಗೆ ಸಹಾಯ ಮಾಡಿ’ ಎಂದು ಬೇಡಿಕೊಳ್ಳುತ್ತಿದ್ದರು. ಈ ಮೊರೆ ಕೇಳಿದ ಅಕ್ಕಪಕ್ಕದವರೆಲ್ಲ ಗರ್ಭಿಣಿಯ ಪರಿಸ್ಥಿತಿ ನೋಡಿ ಬೆಚ್ಚಿಬಿದ್ದಿದ್ದಾರೆ. ಯಾರೂ ಮುಂದೆ ಬರಲು ಮನಸ್ಸು ಮಾಡಲಿಲ್ಲ. ಈ ಸಂದರ್ಭದಲ್ಲಿ ಗಟ್ಟಿ ಮನಸ್ಸು ಮಾಡಿ ಸಹಾಯಕ್ಕೆ ಧಾವಿಸಿದವರು ಅನಿತಾ ವರ್ಧನ್ ಅಲಿಯಾಳ ಎಂಬ ಮಹಿಳೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿದ ಪುರುಷರು, ಮಹಿಳೆಯರು ಸಹಾಯ ಮಾಡಿದ್ದಾರೆ. ಹೀಗೆ, ಚಳಿಗಾಲದ ಮುಂಜಾನೆ ನಗರದ ಬೀದಿಯೊಂದರಲ್ಲಿ ಗಂಡು ಮಗ ಜನಿಸಿತು. ದಕ್ಷಿಣ ಕೋಲ್ಕತ್ತಾದ ಪ್ರಿನ್ಸ್ ಭಕ್ತಿಯಾರ್ ಶಾ ರಸ್ತೆಯಲ್ಲಿ ಇಂಥದ್ದೊಂದು ಘಟನೆ ನಡೆಯಿತು.
ಅನುಭವವಿಲ್ಲದೇ ಹೆರಿಗೆ ಮಾಡಿಸಿದ ಸಾಮಾನ್ಯ ಮಹಿಳೆ!: 'ಮೊದಲಿಗೆ ಮಗು ಅಳಲಿಲ್ಲ. ಹೀಗಾಗಿ ನಾನು ನಿಜವಾಗಿಯೂ ಹೆದರಿದ್ದೆ. ಏಕೆಂದರೆ ನಾನೂ ಸಹ ಓರ್ವ ತಾಯಿ. ಈ ಸಮಯದಲ್ಲಿ ಏನಾಗುತ್ತದೆ ಎಂದು ನನಗೆ ತಿಳಿದಿದೆ. ನನಗೆ ಹೆರಿಗೆಯಾದ ಸಮಯ ನೆನಪಾಯಿತು. ಆ ಸಂದರ್ಭದಲ್ಲಿ ನನ್ನ ಮಗು ಕೂಡ ಮೊದಲಿಗೆ ಅತ್ತಿರಲಿಲ್ಲ. ವೈದ್ಯರು ನನ್ನ ಮಗುವಿನ ಬೆನ್ನು ತಟ್ಟಿದ್ದರು. ನನ್ನ ಮಗು ಅಳಲು ಶುರು ಮಾಡಿದಳು. ಈ ಅನುಭವ ನನ್ನನ್ನು ಜಾಗೃತಗೊಳಿಸಿತು. ನನ್ನ ಪ್ರಯತ್ನದಲ್ಲಿಯೂ ಯಶಸ್ವಿಯಾಗಿದೆ' ಎಂದು ಅನಿತಾ ವರ್ಧನ್ ಈಟಿವಿ ಭಾರತ್‌ಗೆ ತಿಳಿಸಿದರು.
'ನಾನು ಮಗುವಿನ ಮೇಲಿದ್ದ ರಕ್ತವನ್ನು ಬಿಸಿನೀರಿನ ಬಟ್ಟೆಯಿಂದ ಸ್ವಚ್ಛಗೊಳಿಸಿ ಹೆರಿಗೆಯ ನಂತರ ಉಳಿದ ಕೆಲಸ ಮಾಡಿದೆ. ತಾಯಿ ಅಲಿಯಾ ನಿಧಾನವಾಗಿ ನಿದ್ರೆಗೆ ಜಾರುತ್ತಿರುವುದನ್ನು ಕಂಡೆ. ನನ್ನ ಬಟ್ಟೆಯನ್ನು ಆಕೆಗೆ ಕೊಟ್ಟು ಆಸ್ಪತ್ರೆಗೆ ಕಳುಹಿಸಿದ್ದೆವು' ಎಂದು ಅನಿತಾ ವಿವರಿಸಿದರು. ಕುಟುಂಬದ ಮೂಲಗಳ ಪ್ರಕಾರ, ತಾಯಿಯನ್ನು ಎಂಆರ್ ಬಂಗೂರ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ತಾಯಿ ಹಾಗೂ ನವಜಾತ ಶಿಶು ಇಬ್ಬರೂ ಆರೋಗ್ಯವಾಗಿದ್ದಾರೆ.
ತಾಯಿ-ಮಗುವಿನ ಪ್ರಾಣ ಉಳಿಸಿದ ಸಾಮಾನ್ಯ ಮಹಿಳೆ: ಅನಿತಾ ಮಧ್ಯಮ ವರ್ಗದ ಕುಟುಂಬದ ಗೃಹಿಣಿ. ಕಷ್ಟದಲ್ಲಿದ್ದ ಮಹಿಳೆಯ ಸಹಾಯಕ್ಕೆ ದೌಡಾಯಿಸಿ ಪ್ರಾಣ ಉಳಿಸಿದ್ದಾರೆ. ಗರ್ಭಿಣಿಯ ನೋವು ಅವರಿಗೆ ತನ್ನದೇ ಹಿಂದಿನ ಅನುಭವವನ್ನು ನೆನಪಿಸಿದೆ. ಈ ಅನುಭವದಿಂದಲೇ ಮಹಿಳೆಗೆ ಹೆರಿಗೆ ಮಾಡಿಸಿ ತಾಯಿ ಮತ್ತು ಮಗುವಿನ ಪ್ರಾಣ ಉಳಿಸಿ ಮಾನವೀಯತೆ ಮೆರೆದಿದ್ದಾರೆ.
ಇದನ್ನೂ ಓದಿ: ನೀಲಿ ಡ್ರಮ್ನಲ್ಲಿ ಮಹಿಳೆ ಶವ ಪತ್ತೆ ಪ್ರಕರಣ: ಪೋಸ್ಟ್ ಮಾರ್ಟಮ್ ವರದಿಯಲ್ಲಿ ಏನಿದೆ?