ಮಥುರಾ (ಉತ್ತರ ಪ್ರದೇಶ): ಮದುವೆಯಾದ 15 ದಿನಗಳಲ್ಲೇ ಪತ್ನಿಯೊಬ್ಬಳು ತನ್ನ ಪತಿಯನ್ನು ಕರೆಂಟ್ ಶಾಕ್ ಕೊಟ್ಟು ಸಾಯಿಸಿರುವ ಘಟನೆ ಉತ್ತರ ಪ್ರದೇಶದ ಮಥುರಾ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದೀಗ ಹಂತಕಿ ಪತ್ನಿ ಹಾಗೂ ಈ ಕೊಲೆ ಸಂಚು ರೂಪಿಸಿದ್ದ ಆಕೆಯ ಪ್ರಿಯಕನನ್ನು ಪೊಲೀಸರು ಬಂಧಿಸಿದ್ದಾರೆ.
ಇಲ್ಲಿನ ಬಲ್ದೇವ್ ಪೊಲೀಸ್ ಠಾಣೆ ವ್ಯಾಪ್ತಿಯ ಸೆಲ್ಖೇಡಾ ಗ್ರಾಮದ ನಿವಾಸಿ ಮನ್ವೇಂದ್ರ ಎಂಬಾತ ಮಾರ್ಚ್ 26ರಂದು ಮದುವೆಯಾಗಿದ್ದರು. ಇದಾದ ನಂತರ 15 ದಿನಗಳಲ್ಲೇ ಅಂದರೆ ಏಪ್ರಿಲ್ 9ರ ರಾತ್ರಿ ಪತಿಗೆ ವಿದ್ಯುತ್ ಸ್ಪರ್ಶವಾಗಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದಾರೆ ಎಂದು ಕುಟುಂಬಸ್ಥರಿಗೆ ಪತ್ನಿ ಮಾಹಿತಿ ನೀಡಿದ್ದರು.
ಅಂತೆಯೇ, ಮನ್ವೇಂದ್ರ ತಂದೆ ಸುಬೇದಾರ್ ಸಿಂಗ್ ಹಾಗೂ ಇತರರು ಆಗಮಿಸಿ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮನ್ವೇಂದ್ರನನ್ನು ಆಸ್ಪತ್ರೆಗೆ ರವಾನಿಸಿದ್ದರು. ಆಸ್ಪತ್ರೆಗೆ ಸಾಗಿಸುವಷ್ಟರಲ್ಲೇ ಮನ್ವೇಂದ್ರ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದರು. ಅಲ್ಲದೇ, ಬಲಗಾಲಿನ ಮೇಲೆ ವಿದ್ಯುತ್ ತಂತಿಯಿಂದಾದ ಸುಟ್ಟ ಗಾಯಗಳ ಗುರುತುಗಳಿದ್ದವು. ಹೀಗಾಗಿಯೇ ಇದು ಆಕಸ್ಮಿಕ ಸಾವು ಎಂದು ಪರಿಗಣಿಸಿ ಅಲ್ಲಿಗೆ ಇತ್ಯರ್ಥ ಪಡಿಸಲಾಗಿತ್ತು.
ಫೋನ್ ಕರೆಗಳಿಂದ ಸಿಕ್ಕ ಬಿದ್ದ ಪತ್ನಿ: ಮನ್ವೇಂದ್ರ ಮದುವೆಯಾದ ಕೆಲವು ದಿನಗಳ ನಂತರ ಹೆಂಡತಿ ತನ್ನ ತಾಯಿಯ ಸಂಬಂಧಿಕರೊಂದಿಗೆ ಮಾತನಾಡುವ ನೆಪದಲ್ಲಿ ಆಗಾಗ್ಗೆ ಗಂಡನ ಫೋನ್ ಬಳಸುತ್ತಿದ್ದರು. ಆದರೆ, ಮನ್ವೇಂದ್ರನ ಸಾವಿನ ನಂತರವೂ ಆತನ ಫೋನ್‌ಗೆ ನಿರಂತರವಾಗಿ ಕರೆಗಳು ಬರುತ್ತಿದ್ದವು. ಇದರಿಂದಾಗಿ ತಂದೆ ಸುಬೇದಾರ್ ಸಿಂಗ್ ಆ ಫೋನ್ ಅನ್ನು ಪೆಟ್ಟಿಗೆಯಲ್ಲಿ ಇಟ್ಟಿದ್ದರು.
ಆದರೆ, ಇದೇ ಸೆಪ್ಟೆಂಬರ್ 3ರಂದು ಕುಟುಂಬಸ್ಥರೊಬ್ಬರು ಪೆಟ್ಟಿಗೆಯಿಂದ ಆ ಫೋನ್ ಅನ್ನು ಹೊರತೆಗೆದಿದ್ದಾರೆ. ಆಗ ಮೊಬೈಲ್ನ್ನು ಪರಿಶೀಲಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಕೆಲವು ಅನುಮಾನಾಸ್ಪದ ಕಾಲ್ ರೆಕಾರ್ಡಿಂಗ್‌ಗಳು ಪತ್ತೆಯಾಗಿದೆ. ಇದರಲ್ಲಿನ ಕಾಲ್ ರೆಕಾರ್ಡಿಂಗ್ನಿಂದ ಸಾವಿನ ಸತ್ಯ ಬಹಿರಂಗವಾಗಿದೆ.
ಪ್ರಿಯಕರನ ಜೊತೆ ಸೇರಿ ಪತಿಯ ಕೊಲೆಗೆ ಸಂಚು: 'ನಿಮ್ಮ ಸೂಚನೆಯಂತೆ 10 ನಿಮಿಷ ಕರೆಂಟ್ ಶಾಕ್ ಕೊಟ್ಟಿದ್ದೇನೆ ಎಂದು ಮನ್ವೇಂದ್ರನ ಪತ್ನಿ ಹೇಳಿರುವುದು ದಾಖಲಾಗಿದೆ. ಅಲ್ಲದೇ, ಈಗ 10 ನಿಮಿಷಗಳ ಕರೆಂಟ್ ಶಾಕ್ನಿಂದ ಸಾಯುತ್ತಾನೆ ಅಲ್ವಾ ಎಂದು ಕೇಳಿದ್ದಾರೆ. ಆಗ ಮತ್ತೊಂದು ಕರೆಯಿಂದ ಮಾತನಾಡುತ್ತಿದ್ದ ಪುರುಷನ ಧ್ವನಿಯು ಖಂಡಿತ ಸಾಯುತ್ತಾರೆ ಎಂದು ಹೇಳುವುದೂ ಕಾಲ್ ರೆಕಾರ್ಡಿಂಗ್ನಲ್ಲಿ ದಾಖಲಾಗಿದೆ.
ಇಷ್ಟೇ ಅಲ್ಲ, ರಾತ್ರಿ 11 ಗಂಟೆಗೆ ಬಂದು ಭೇಟಿಯಾಗುತ್ತೇನೆ ಎಂದು ಮಾತು ಕೊಟ್ಟಿದ್ದೆ.. ಯಾಕೆ ಬರಲಿಲ್ಲ ಎಂಬುವುದೂ ರಿಕಾರ್ಡ್ ಆಗಿದೆ. ಆದ್ದರಿಂದ ಅನುಮಾನಗೊಂಡ ಸಂಬಂಧಿಕರು ಆ ಕಾಲ್ ರೆಕಾರ್ಡ್ಗಳನ್ನು ಪೊಲೀಸರಿಗೆ ನೀಡಿದ್ದಾರೆ. ಇದರಿಂದ ಪೊಲೀಸರು ಮನ್ವೇಂದ್ರನ ಪತ್ನಿಯನ್ನು ವಿಚಾರಣೆಗೆ ಒಳಪಡಿಸಿದ್ದು, ಆಕೆ ತನ್ನ ಪ್ರಿಯಕರ ಅತೇಂದ್ರ ಎಂಬಾತನೊಂದಿಗೆ ಮಾತನಾಡುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.
ಹೀಗಾಗಿಯೇ ಸದ್ಯ ಪೊಲೀಸರು ಮನ್ವೇಂದ್ರನ ಪತ್ನಿ ಹಾಗೂ ಆಕೆಯ ಪ್ರಿಯಕರ ಅತೇಂದ್ರನನ್ನು ಬಂಧಿಸಿದ್ದಾರೆ. ಅಲ್ಲದೇ, ಮೊದಲು ಪತಿಗೆ ಮತ್ತು ಬರುವ ವಸ್ತು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಕಾರೆಂಟ್ ಶಾಕ್ ಕೊಟ್ಟು ಕೊಲೆ ಮಾಡಿರುವುದಾಗಿ ಮನ್ವೇಂದ್ರನ ಪತ್ನಿ ಪೊಲೀಸ್ ವಿಚಾರಣೆಯಲ್ಲಿ ಬಾಯ್ಬಿಟ್ಟಿದ್ದಾರೆ.
ಇದನ್ನೂ ಓದಿ: ನನ್ನನ್ನು ಮುಟ್ಟಬೇಡಿ, ನಾನು ಸಲಿಂಗಕಾಮಿ.. ಸುವೇಂದು ಅಧಿಕಾರಿ ಸ್ವಗ್ರಾಮದಲ್ಲಿ ಅವಹೇಳನಕಾರಿ ಪೋಸ್ಟರ್