ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರು ಸಂಸತ್ತಿನ ಚಳಿಗಾಲದ ಅಧಿವೇಶನದ ಎರಡನೇ ದಿನವಾದ ಇಂದು ಲೋಕಸಭೆಯಲ್ಲಿ ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ (ನಿಯಂತ್ರಣ) ಮಸೂದೆ -2020 ಮಂಡಿಸಲಿದ್ದಾರೆ.
ಸಂತಾನೋತ್ಪತ್ತಿ ನೆರವಿನ ತಂತ್ರಜ್ಞಾನ ಮಸೂದೆ ಮೂಲಕ ಸಂತಾನೋತ್ಪತ್ತಿಗೆ ಚಿಕಿತ್ಸೆ ನೀಡುವ ಚಿಕಿತ್ಸಾಲಯಗಳ ನಿಯಂತ್ರಣ ಮತ್ತು ಮೇಲ್ವಿಚಾರಣೆ ಮಾಡಲಾಗುತ್ತದೆ. ಚಿಕಿತ್ಸಾಲಯಗಳ ದುರುಪಯೋಗ ತಡೆಗಟ್ಟುವುದು, ಚಿಕಿತ್ಸಾಲಯಗಳಲ್ಲಿ ಸೇವೆಗಳ ಸುರಕ್ಷಿತ ಮತ್ತು ನೈತಿಕ ಅಭ್ಯಾಸಗಳನ್ನು ರೂಢಿಸಿಕೊಳ್ಳುವ ವಿಚಾರಗಳಿಗೆ ಸಂಬಂಧಿಸಿದಂತೆ ಕೆಲವು ನಿಯಮಗಳನ್ನು ರೂಪಿಸಲಾಗುತ್ತದೆ.
ಈ ಮಸೂದೆ ಮಾತ್ರವಲ್ಲದೇ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಅವರು ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟ್ ನ್ಯಾಯಾಧೀಶರ (ವೇತನ ಮತ್ತು ಸೇವಾ ಷರತ್ತುಗಳು) ತಿದ್ದುಪಡಿ ಮಸೂದೆ- 2021 ಅನ್ನು ಮಂಡಿಸಲು ನಿರ್ಧಾರ ಮಾಡಿದ್ದಾರೆ.
ಈ ಮಸೂದೆಯ ಮೂಲಕ ಹೈಕೋರ್ಟ್ ನ್ಯಾಯಾಧೀಶರ (ಸಂಬಳ ಮತ್ತು ಸೇವಾ ಷರತ್ತುಗಳು) ಕಾಯ್ದೆ- 1954 ಮತ್ತು ಸುಪ್ರೀಂಕೋರ್ಟ್ ನ್ಯಾಯಾಧೀಶರ (ಸೇವೆಯ ವೇತನಗಳು ಮತ್ತು ಷರತ್ತುಗಳು) -1958 ಕಾಯ್ದೆಗಳಿಗೆ ತಿದ್ದುಪಡಿ ಮಾಡಲು ಅನುವು ಮಾಡಿಕೊಡುತ್ತದೆ.
ಅಧಿವೇಶನಕ್ಕೆ ಬಹಿಷ್ಕಾರ ಸಾಧ್ಯತೆ: ಸಂಸತ್ತಿನ ಚಳಿಗಾಲದ ಅಧಿವೇಶನ ಸೋಮವಾರ ಆರಂಭವಾಗಿದ್ದು, ಕೃಷಿ ಕಾನೂನುಗಳ ರದ್ದತಿ ಮಸೂದೆ ಅಂಗೀಕರಿಸಲಾಗಿದೆ. ಚಳಿಗಾಲದ ಅಧಿವೇಶನದ ಮೊದಲ ದಿನವೇ ಪ್ರತಿಪಕ್ಷಗಳ ಗದ್ದಲದಿಂದಾಗಿ ಲೋಕಸಭೆಯನ್ನು ಮೂರು ಬಾರಿ ಮುಂದೂಡಲಾಗಿದ್ದು, ಇಂದು ವಿರೋಧ ಪಕ್ಷಗಳು ಅಧಿವೇಶನವನ್ನು ಬಾಯ್ಕಾಟ್ ಮಾಡುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಇದನ್ನೂ ಓದಿ: 2020ನೇ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಶೇಕಡಾ 7ಕ್ಕಿಂತ ಹೆಚ್ಚು ಜಿಡಿಪಿ ನಿರೀಕ್ಷೆ