ಆಗ್ರಾ( ಉತ್ತರ ಪ್ರದೇಶ): ಮೂರು ಸೇನೆಗಳ ಮುಖ್ಯಸ್ಥ(CDS) ಬಿಪಿನ್ ರಾವತ್ ಸೇರಿದಂತೆ ವಿವಿಧ ಭದ್ರತಾ ಸಿಬ್ಬಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತಮಿಳುನಾಡಿನ ಕೂನೂರಿನಲ್ಲಿ ಅಪಘಾತಕ್ಕೀಡಾಗಿ 13 ಮಂದಿ ಸಾವನ್ನಪ್ಪಿದ್ದಾರೆ. ಇದರಲ್ಲಿ ಆಗ್ರಾ ಮೂಲದ ವಿಂಗ್ ಕಮಾಂಡರ್ ಪೃಥ್ವಿ ಸಿಂಗ್ ಚೌಹಾಣ್ ಕೂಡ ಸೇರಿದ್ದಾರೆ.
ಮೂಲತಃ ಮಧ್ಯಪ್ರದೇಶದವರಾದ ಪೃಥ್ವಿ ಸಿಂಗ್ ಚೌಹಾಣ್ ಕುಟುಂಬ ಉತ್ತರ ಪ್ರದೇಶದ ಆಗ್ರಾದಲ್ಲಿ ವಾಸವಾಗಿದೆ. ವಿಂಗ್ ಕಮಾಂಡರ್ ಚೌಹಾಣ್ ಅವರು ಐವರು ಮಕ್ಕಳಲ್ಲಿ ಕೊನೆಯವರು. ಅವರು ನಾಲ್ವರು ಅಕ್ಕಂದಿರು ಪ್ರೀತಿಯಿಂದ ಚೌಹಾಣ್ ಅವರನ್ನು ಬೆಳೆಸಿದ್ದರು.
ಮಧ್ಯಪ್ರದೇಶದ ರೇವಾದಲ್ಲಿನ ಸೈನಿಕ ಶಾಲೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬಳಿಕ 2006ರಲ್ಲಿ ವಾಯುಪಡೆಗೆ ಸೇರ್ಪಡೆಯಾದ ಬಳಿಕ 2007ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ವಿಎಸ್ ಚೌಹಾಣ್ ಅವರು ಪತ್ನಿ, 12 ವರ್ಷದ ಮಗಳು ಮತ್ತು 9 ವರ್ಷದ ಮಗನನ್ನು ಅಗಲಿದ್ದಾರೆ. ಚೌಹಾಣ್ ಪ್ರಸ್ತುತ ಕೊಯಮತ್ತೂರು ಏರ್ ಫೋರ್ಸ್ ಸ್ಟೇಷನ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು.
ವಿಂಗ್ ಕಮಾಂಡರ್ ಒಬ್ಬ ಸಮರ್ಥ ಪೈಲಟ್ ಆಗಿದ್ದರು. ಅವರು ಸುಡಾನ್‌ನಲ್ಲಿ ವಿಶೇಷ ತರಬೇತಿ ಪಡೆದಿದ್ದರು. ಯುದ್ಧ ಕೌಶಲ್ಯದ ಬಗ್ಗೆ ಐಎಎಫ್‌ನ ಅಧಿಕಾರಿಗಳು ಹೆಚ್ಚು ಮೆಚ್ಚಿಕೊಂಡಿದ್ದಾರೆ ಕೂಡಾ. ಐಎಎಫ್‌ಗೆ ಸೇರಿದ ನಂತರ ಚೌಹಾಣ್ ಹೈದರಾಬಾದಿಗೆ ನಿಯೋಜನೆಗೊಂಡಿದ್ದರು. ಬಳಿಕ ಗೋರಖ್‌ಪುರ, ಗುವಾಹಟಿ, ಉಧಮ್ ಸಿಂಗ್ ನಗರ, ಜಾಮ್‌ನಗರ, ಅಂಡಮಾನ್ ನಿಕೋಬಾರ್ ಸೇರಿದಂತೆ ವಿವಿಧಡೆ ಕೆಲಸ ಮಾಡಿದ್ದರು ಎಂದು ಚೌಹಾಣ್ ತಂದೆ ಸುರೇಂದ್ರ ಸಿಂಗ್ ಚೌಹಾಣ್ ಮಗನ ನೆನಪು ಮಾಡಿಕೊಂಡು ದುಃಖ ತಪ್ತರಾದರು.
ಚೌಹಾಣ್ ಸೇರಿದಂತೆ ಎಲ್ಲ ಅಧಿಕಾರಿಗಳ ಸಾವಿಗೆ ಇಡೀ ರಾಷ್ಟ್ರವೇ ಸಂತಾಪ ವ್ಯಕ್ತಪಡಿಸುತ್ತಿದೆ. ತಮ್ಮ ಕೈಚಳಕದಿಂದ ಶತ್ರುಗಳ ಫೈಟರ್ ಜೆಟ್‌ಗಳನ್ನು ಹೊಡೆದುರುಳಿಸಿದ ಪೈಲಟ್, ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾಗಿದ್ದಾರೆ ಎಂಬುದನ್ನು ಅರಗಿಸಿಕೊಳ್ಳಲು ಕುಟುಂಬಕ್ಕೆ ಸಾಧ್ಯವಾಗುತ್ತಿಲ್ಲ.
ಇದನ್ನೂ ಓದಿ: ಹೆಲಿಕಾಪ್ಟರ್ ದುರಂತದಲ್ಲಿ ಬದುಕುಳಿದ ಕ್ಯಾ. ವರುಣ್ ಸಿಂಗ್.. ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಸ್ಥಳಾಂತರ