ಪುಣೆ (ಮಹಾರಾಷ್ಟ್ರ): ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿವಾದಿತ ಹೇಳಿಕೆ ನೀಡಿದ್ದಾರೆ. ನೆರೆಯ ಕರ್ನಾಟಕದ ಗಡಿ ಪ್ರದೇಶಗಳಲ್ಲಿ ನೆಲೆಸಿರುವ ಮರಾಠಿ ಮಾತನಾಡುವ ಜನರು ತಮ್ಮ ಸ್ಥಳಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುವ ಹೋರಾಟವನ್ನು ಬೆಂಬಲಿಸುವುದಾಗಿ ಹೇಳಿದ್ದಾರೆ.
ಮಹಾರಾಷ್ಟ್ರದ ಸಂಸ್ಥಾಪನಾ ದಿನದ ಅಂಗವಾಗಿ ಪುಣೆಯಲ್ಲಿ ರವಿವಾರ ನಡೆದ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿರುವ ಅವರು, ಮಹಾರಾಷ್ಟ್ರ ರಚನೆಯಾಗಿ 62ನೇ ವರ್ಷಾಚರಣೆ ಮಾಡುತ್ತಿದ್ದೇವೆ. ಆದರೆ, ಕರ್ನಾಟಕದ ಬೀದರ್, ಭಾಲ್ಕಿ, ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಇತರ ಸ್ಥಳಗಳ ಮರಾಠಿ ಭಾಷಿಕ ಗ್ರಾಮಗಳನ್ನು ಮಹಾರಾಷ್ಟ್ರದೊಂದಿಗೆ ವಿಲೀನಗೊಳಿಸಲು ಸಾಧ್ಯವಾಗದ ಬಗ್ಗೆ ವಿಷಾದಿಸುತ್ತಿದ್ದೇವೆ ಎಂದು ಹೇಳಿಕೆ ಕೊಟ್ಟಿದ್ದಾರೆ.
ಅಲ್ಲದೇ, ಮರಾಠಿ ಭಾಷಿಕರು ಇರುವ ಸ್ಥಳಗಳು ಮಹಾರಾಷ್ಟ್ರದ ಭಾಗವಾಗಲು ನಡೆಸುವ ಹೋರಾಟವನ್ನು ಮಹಾರಾಷ್ಟ್ರ ಸರ್ಕಾರ ತನ್ನ ಬೆಂಬಲವನ್ನು ಮುಂದುವರೆಸಲಿದೆ. ಅಷ್ಟೇ ಅಲ್ಲ, ಈ ಗ್ರಾಮಗಳು ಮಹಾರಾಷ್ಟ್ರದ ಭಾಗವಾಗುವವರೆಗೆ ಆ ಪ್ರದೇಶದ ಜನರ ಹೋರಾಟವನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ. ಮಹಾರಾಷ್ಟ್ರ ಮತ್ತು ಕರ್ನಾಟಕ ಗಡಿ ವಿವಾದವು ಸುಪ್ರೀಂಕೋರ್ಟ್ ಮುಂದೆ ಇದ್ದರೂ, ಇಂತಹ ವಿವಾದಿತ ಹೇಳಿಕೆಯನ್ನು ಡಿಸಿಎಂ ಅಜಿತ್ ಪವಾರ್ ನೀಡಿದ್ದಾರೆ.
ಇದನ್ನೂ ಓದಿ: ಕರ್ನಾಟಕ-ಮಹಾರಾಷ್ಟ್ರ ಗಡಿ ವಿವಾದ: ಗಡಿ ಉಸ್ತುವಾರಿ ಸಚಿವರ ನೇಮಕ ಮರೆತ ರಾಜ್ಯ ಸರ್ಕಾರ