ನವದೆಹಲಿ : ಕೆನಡಾದಲ್ಲಿ ಖಲಿಸ್ತಾನಿ ಪ್ರತ್ಯೇಕತಾವಾದಿಗಳನ್ನು ಅಪರಿಚಿತರು ಗುಂಡಿಕ್ಕಿ ಹತ್ಯೆಗೈದ ಬಳಿಕ ಭಾರತ ಮತ್ತು ಕೆನಡಾದ ರಾಜತಾಂತ್ರಿಕ ಸಂಬಂಧ ತೀವ್ರ ಹದಗೆಟ್ಟಿದೆ. ಈ ರಾಜತಾಂತ್ರಿಕ ಬಿಕ್ಕಟ್ಟು ಭಾರತದ ಬೆನ್ನೆಲುಬಾಗಿರುವ ಕೃಷಿ ವಲಯದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಉಂಟು ಮಾಡಬಹುದು. ಅಲ್ಲದೆ ಭಾರತದ ಆರ್ಥಿಕತೆಗೆ ಹೆಚ್ಚಿನ ಹೊಡೆತವನ್ನು ನೀಡಬಹುದು ಎಂದು ಹೇಳಲಾಗಿದೆ.
ಖಲಿಸ್ತಾನಿ ಉಗ್ರಗಾಮಿಗಳ ಹತ್ಯೆ ಸಂಬಂಧ ಭಾರತದ ವಿರುದ್ಧ ಆರೋಪಗಳ ಸುರಿಮಳೆಗೈಯುತ್ತಿರುವ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೋ ಖಲಿಸ್ತಾನಿ ಉಗ್ರರ ಹತ್ಯೆ ಹಿಂದೆ ಭಾರತದ ಕೈವಾಡ ಇದೆ ಎಂದು ಆರೋಪಿಸಿದ್ದರು. ಅಲ್ಲದೆ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಕೆನಡಾ ಉಚ್ಚಾಟನೆ ಮಾಡಿತ್ತು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದ ಭಾರತ, ಖಲಿಸ್ತಾನಿಗಳ ಹತ್ಯೆಯಲ್ಲಿ ಭಾರತದ ಕೈವಾಡ ಇಲ್ಲ. ಈ ಆರೋಪಗಳು ಅಸಂಬದ್ಧ ಎಂದು ತಿರುಗೇಟು ನೀಡಿತ್ತು. ಜೊತೆಗೆ ಭಾರತವು ಕೆನಡಿಯನ್ನರಿಗೆ ವೀಸಾ ಸೇವೆಯನ್ನು ಸ್ಥಗಿತಗೊಳಿಸಿದ್ದಲ್ಲದೆ, ವಿವಿಧ ರಾಜತಾಂತ್ರಿಕ ಕ್ರಮಗಳನ್ನು ಭಾರತ ಕೈಗೊಂಡಿತ್ತು. ಈ ಕ್ರಮಗಳಿಂದಾಗಿ ಸಂಭಾವ್ಯ ಸುಂಕಗಳು, ವ್ಯಾಪಾರ ವಹಿವಾಟುಗಳಲ್ಲಿ ಕೆಲ ಅಡಚಣೆಗಳು ಉಂಟಾಗುವ ಸಾಧ್ಯತೆ ಇದೆ.
ಕೃಷಿ ವಲಯಕ್ಕೆ ಆಗಬಹುದಾಗ ತೊಂದರೆಗಳು : ರಷ್ಯಾ ಮತ್ತು ಉಕ್ರೇನ್ ಸಂಘರ್ಷ ಹಿನ್ನೆಲೆ ಈಗಾಗಲೇ ರಸಗೊಬ್ಬರದ ಬೆಲೆಗಳು ಗಗನಕ್ಕೇರಿವೆ. ಇದರಿಂದಾಗಿ ಡಿ-ಅಮೋನಿಯಂ ಫಾಸ್ಫೇಟ್ (ಡಿಎಪಿ) ರಸಗೊಬ್ಬರದ ಬೆಲೆ ಶೇ. 25ರಷ್ಟು ಹೆಚ್ಚಳವಾಗಿದೆ. ಇದರ ಜೊತೆಗೆ ಸಾರಜನಕ, ರಂಜಕ ಮತ್ತು ಪೊಟ್ಯಾಸಿಯಮ್ ರಸಗೊಬ್ಬರಗಳ ಬೆಲೆಗಳೂ ಹೆಚ್ಚಳವಾಗಿದೆ. ಕೆನಡಾವು ವಿಶ್ವದಲ್ಲೇ ಅತಿದೊಡ್ಡ ಪೊಟ್ಯಾಶ್ ನಿಕ್ಷೇಪಗಳನ್ನು ಹೊಂದಿದೆ. ಜಾಗತಿಕ ಪೊಟ್ಯಾಶ್ ನಿಕ್ಷೇಪಗಳಲ್ಲಿ ಶೇ.30ಕ್ಕೂ ಹೆಚ್ಚು ರಸಗೊಬ್ಬರ ಉತ್ಪಾದನೆ ಕೆನಡಾದಲ್ಲಿ ಆಗುತ್ತಿದೆ. ಕಳೆದ ವರ್ಷ ಕೆನಡಾ ಪ್ರಮುಖ ಪೊಟ್ಯಾಶ್ ಪೂರೈಕೆದಾರ ದೇಶವಾಗಿತ್ತು.
ಸೀಮಿತ ಪೂರೈಕೆದಾರರನ್ನು ಹೊಂದಿರುವ ಭಾರತ : ಸಂಘರ್ಷ ಹಿನ್ನೆಲೆ ರಷ್ಯಾವು ತನ್ನ ರಸಗೊಬ್ಬರ ಪೂರೈಕೆಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಹಾಗಾಗಿ ಭಾರತವು ಸೀಮಿತ ರಸಗೊಬ್ಬರ ಪೂರೈಕೆದಾರರನ್ನು ಹೊಂದಿದೆ. ಚೀನಾ ಮತ್ತು ಕೆನಡಾ ದೇಶಗಳು ಪ್ರಮುಖ ಪೊಟ್ಯಾಶ್ ರಸಗೊಬ್ಬರ ಉತ್ಪಾದಕರಾಗಿದ್ದು, ಭಾರತದ ಕೃಷಿ ಚಟುವಟಿಕೆಗಳನ್ನು ಗಮನಿಸುತ್ತಾ ಬಂದಿದೆ. ಒಂದು ವೇಳೆ ಕೆನಡಾ ರಾಜತಾಂತ್ರಿಕ ಬಿಕ್ಕಟ್ಟು ಬಿಗಡಾಯಿಸಿದರೆ, ಭಾರತಕ್ಕೆ ರಿಯಾಯಿತಿಯಲ್ಲಿ ನೀಡುತ್ತಿರುವ ಪೊಟ್ಯಾಶ್ ಮೇಲೆ ನಿಯಂತ್ರಣ ಹೇರಬಹುದು, ಇಲ್ಲವೇ ಭಾರತಕ್ಕೆ ರಫ್ತು ಮಾಡುವುದನ್ನು ಸಂಪೂರ್ಣ ನಿಷೇಧಿಸಬಹುದು. ಇದು ಭಾರತದಲ್ಲಿ ಆಹಾರ ಭದ್ರತೆ ಮತ್ತು ಆಹಾರ ಉತ್ಪಾದನೆಗೆ ಅಡ್ಡಿ ಉಂಟು ಮಾಡಬಹುದು.
ಇದನ್ನು ಮನಗೊಂಡಿರುವ ಭಾರತ, ತಡೆರಹಿತ ಪೊಟಾಶ್ ಗೊಬ್ಬರವನ್ನು ಪೂರೈಕೆ ಮಾಡಬೇಕೆಂದು ಕೆನಡಾ ಬಳಿ ಮನವಿ ಮಾಡಿದೆ. ಇದರ ನಡುವೆಯೇ ಭಾರತವು ರಷ್ಯಾ ಮತ್ತು ಬೆಲಾರಸ್ನಿಂದಲೂ ನಿರೀಕ್ಷಿತ ಪ್ರಮಾಣದಲ್ಲಿ ರಸಗೊಬ್ಬರವನ್ನು ಆಮದು ಮಾಡಿಕೊಳ್ಳದಿದ್ದರೆ ಕೊರತೆ ಎದುರಾಗುವ ಸಾಧ್ಯತೆಗಳೂ ಇವೆ. ಇದು ಹಿಂಗಾರು ಬೆಳೆಗಳ ಮೇಲೆ ಪರಿಣಾಮ ಬೀಳಲಿದೆ.
ಕೆನಡಾ ಭಾರತದ ಪ್ರಮುಖ ಪೂರೈಕೆದಾರ ದೇಶ : ರಸಗೊಬ್ಬರದಿಂದ ಹಿಡಿದು ಆಹಾರ ವಸ್ತುಗಳವರೆಗೆ ಕೆನಡಾವು ಭಾರತಕ್ಕೆ ಪ್ರಮುಖ ಪೂರೈಕೆದಾರನಾಗಿದೆ. ಕೆನಡಾದಿಂದ ಭಾರತಕ್ಕೆ ಮಸೂರ, ಎಣ್ಣೆಬೀಜಗಳು, ಕ್ಯಾನೋಲಾ ಎಣ್ಣೆ ಮತ್ತು ಫೀಡ್ ಆಯಿಲ್ ಕೇಕ್ ಸೇರಿದಂತೆ ಪ್ರಮುಖ ಕೃಷಿ ಸರಕುಗಳು ಪೂರೈಕೆಯಾಗುತ್ತಿವೆ. ಕೆನಡಾದ ರಫ್ತಿನ ಶೇ.95ರಷ್ಟು ಬೇಳೆಕಾಳುಗಳು, ಮಸ್ರೂರ್ ಬೇಳೆ ಭಾರತಕ್ಕೆ ರಫ್ತಾಗುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕೆನಡಾವು ಭಾರತಕ್ಕೆ ಕೆಂಪು ಬೇಳೆಗಳ ಪ್ರಮುಖ ಪೂರೈಕೆದಾರನಾಗಿದ್ದು, ಬೇಳೆಗಳ ಬೆಲೆಯನ್ನು ಸ್ಥಿರಗೊಳಿಸುವಲ್ಲಿ ಪಾತ್ರವಹಿಸುತ್ತಿದೆ. ಜೊತೆಗೆ ಕಡಲೆ, ಬಿಳಿ/ಹಳದಿ ಅವರೆಕಾಳುಗಳನ್ನು ಕೆನಡಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
ಈಗಾಗಲೇ ಭಾರತದಲ್ಲಿ ಬೇಳೆ ಕಾಳು ಮತ್ತು ಎಣ್ಣೆಕಾಳುಗಳ ಉತ್ಪಾದನೆ ಗಣನೀಯ ಇಳಿಕೆಯಾಗಿದೆ. ದೇಶೀಯ ಸರಬರಾಜು ಕುಂಠಿತಗೊಂಡಿದೆ. ಮುಂಬರುವ ಅನಿಶ್ಚಿತ ಕೊಯ್ಲುಗಳನ್ನು ಗಮನಿಸಿದರೆ ಭಾರತವು ಎಣ್ಣೆಕಾಳುಗಳ ಆಮದಿಗೆ ಗಮನಹರಿಸಬೇಕು. ಒಂದು ವೇಳೆ ಕಾಳುಗಳ ಪೂರೈಕೆಯನ್ನು ಕೊರತೆ ಕಂಡುಬಂದರೆ ಇತರ ದೇಶಗಳ ಪೂರೈಕೆದಾರರ ಜೊತೆ ಭಾರತ ಒಪ್ಪಂದ ಮಾಡಿಕೊಳ್ಳಬೇಕು.
ಭಾರತದಿಂದ ಕೆನಡಾಗೆ ರಫ್ತು : ವಿಶ್ವಸಂಸ್ಥೆಯ COMTRADE ಅಂಕಿ ಅಂಶಗಳ ಪ್ರಕಾರ, 2022ರಲ್ಲಿ ಭಾರತವು ದಾಖಲೆಯ ಸುಮಾರು 4.25 ಶತಕೋಟಿ ಯುಎಸ್ ಡಾಲರ್ನಷ್ಟು ರಫ್ತು ಮಾಡಿದೆ ಎಂದು ಹೇಳಿದೆ. ಒಂದು ವೇಳೆ ಎರಡು ದೇಶಗಳ ನಡುವೆ ಬಿಕ್ಕಟ್ಟು ಬಗೆಹರಿಯದಿದ್ದರೆ ಎರಡು ದೇಶಗಳ ರಫ್ತು ಮತ್ತು ಆಮದಿನ ಮೇಲೆ ಪರಿಣಾಮ ಬೀರಬಹುದು. ಕೃಷಿಯನ್ನು ನಿರ್ಲಕ್ಷಿಸುವುದು ಎರಡೂ ದೇಶದ ಸರ್ಕಾರ ಮಾತ್ರವಲ್ಲದೆ, ರೈತರು ಮತ್ತು ಗ್ರಾಹಕರ ಮೇಲೂ ನೇರ ಪರಿಣಾಮ ಬೀರಲಿದೆ.
ಇದನ್ನೂ ಓದಿ : ಕೆನಡಾದಲ್ಲಿ ಮತ್ತೊಬ್ಬ ಖಲಿಸ್ತಾನ ಉಗ್ರನ ಹತ್ಯೆ: ದುಷ್ಕರ್ಮಿಗಳ ಗುಂಡೇಟಿಗೆ ಸುಖ್ದೂಲ್ ಸಿಂಗ್ ಬಲಿ