ಪಾಣಿಪತ್ (ಹರಿಯಾಣ): ಪತಿ-ಪತ್ನಿಯರ ಮಧ್ಯೆ ಏನೇನೋ ಕಾರಣಕ್ಕೆ ಜಗಳಗಳು ನಡೆಯುತ್ತವೆ. ಆದರೆ, ಇಲ್ಲೊಂದು ವಿಚಿತ್ರ ಪ್ರಕರಣ ಕೋರ್ಟ್ ಮೆಟ್ಟಿಲೇರಿದೆ. ಪತಿಗೆ ಹೆಚ್ಐವಿ ಸೋಂಕು ತಗುಲಿದೆ. ಆದರೂ, ಆತ ತನ್ನೊಂದಿಗೆ ಇರಲು ಬಯಸುತ್ತಿದ್ದಾನೆ. ದಿನವೂ ಹಲ್ಲೆ ಮಾಡುತ್ತಾನೆ. ಈತನಿಂದ ನನ್ನನ್ನು ರಕ್ಷಿಸಿ ಎಂದು ಆರೋಪಿಸಿ ಮಹಿಳೆ ಗಂಡನ ವಿರುದ್ಧ ದೂರು ನೀಡಿದ್ದಾರೆ.
ಮಹಿಳೆಯ ದೂರಿನ ವಿವರ: "2009ರಲ್ಲಿ ನನಗೆ ಪ್ರೇಮ ವಿವಾಹವಾಗಿದೆ. ಅಂಬಾಲದಲ್ಲಿ ಓದುತ್ತಿದ್ದು ಅಲ್ಲಿಯೇ ಇದ್ದ ಮೊಬೈಲ್ ಅಂಗಡಿಯ ನಿರ್ವಾಹಕನ ಜೊತೆ ಸ್ನೇಹ ಬೆಳೆಸಿಕೊಂಡೆ. ಬಳಿಕ ಇಬ್ಬರೂ ಮದುವೆಯಾದೆವು. ಮದುವೆಯ ನಂತರ, ಪತಿ ಫಿಟ್ನೆಸ್ ಕೇಂದ್ರವನ್ನು ತೆರೆದರು. ನಾನು ಆಸ್ಪತ್ರೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದೆ. 2018 ರಲ್ಲಿ ಪತಿ ನಿರಂತರವಾಗಿ ದುರ್ಬಲವಾಗುತ್ತಾ ಸಾಗಿದ. ಆಸ್ಪತ್ರೆಯಲ್ಲಿ ತಪಾಸಣೆ ಮಾಡಿಸಲಾಯಿತು. ವರದಿಯಲ್ಲಿ ಬೆಚ್ಚಿಬೀಳಿಸುವ ಸಂಗತಿ ಇತ್ತು."
"ಫಿಟ್ನೆಸ್ ಕೇಂದ್ರ ನಡೆಸುತ್ತಿರುವ ಆತನಿಗೆ ಮಾರಕ ಹೆಚ್ಐವಿ ಸೋಂಕು ಹರಡಿದೆ. ಇದರಿಂದ ದೈಹಿಕವಾಗಿ ಕೃಶನಾಗಿದ್ದಾನೆ. ತಪಾಸಣಾ ವರದಿಯಲ್ಲಿ ಪಾಸಿಟಿವ್ ಬಂದಿದೆ. ಇದಾದ ಬಳಿಕ ಇಬ್ಬರೂ ದೂರವಿದ್ದೇವೆ. ಆದರೆ, ಕಾಲಕ್ರಮೇಣ ನನ್ನ ಮೇಲೆ ಅನುಮಾನಪಡುತ್ತಿದ್ದಾನೆ. ಪದೇ ಪದೇ ದೈಹಿಕ ಸಂಬಂಧ ಹೊಂದುವಂತೆ ಒತ್ತಾಯಿಸುತ್ತಿದ್ದಾನೆ. ಹೆಚ್ಐವಿ ಸೋಂಕನ್ನು ನನಗೆ ಹರಡಿಸುವುದಾಗಿ ಬೆದರಿಕೆ ಹಾಕುತ್ತಿದ್ದಾನೆ."
"ನಿತ್ಯವೂ ತನ್ನ ಮೇಲೆ ಹಲ್ಲೆ ಮಾಡುತ್ತಾನೆ. ಇದೇ ಕಾರಣಕ್ಕಾಗಿ ಈ ಹಿಂದೆ ಪಂಚಾಯ್ತಿ ನಡೆಸಲಾಗಿತ್ತು. ಆತ ತನ್ನ ತಪ್ಪನ್ನು ಅರಿತು ಕ್ಷಮೆಯಾಚಿಸಿದ್ದ. ಆದರೆ, ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದು, ಹಲ್ಲೆ ನಡೆಸುತ್ತಿದ್ದಾನೆ. ದಿನನಿತ್ಯವೂ ಹೊಡೆಯುತ್ತಾನೆ. ನನಗೆ ಆತನಿಂದ ರಕ್ಷಣೆ ಕೊಡಿ" ಎಂದು ಮನವಿ ಮಾಡಿದ್ದಾರೆ.
ಹಲ್ಲೆಯಿಂದ ತೊಂದರೆಗೀಡಾದ ಮಹಿಳೆ 2022 ರಲ್ಲಿ ನ್ಯಾಯಾಲಯದಲ್ಲಿ ಕೌಟುಂಬಿಕ ಹಿಂಸೆಯ ಪ್ರಕರಣ ದಾಖಲಿಸಿದ್ದಳು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಮತ್ತು ಪಾಣಿಪತ್ ಜಿಲ್ಲಾಧಿಕಾರಿ ರಜನಿ ಗುಪ್ತಾ ಅವರಿಗೆ ಈ ಸಮಸ್ಯೆ ಪರಿಹಾರಕ್ಕೆ ಸೂಚಿಸಿದ್ದರು. ಅಧಿಕಾರಿ ಇಬ್ಬರೊಂದಿಗೆ ಸಮಾಲೋಚನೆ ನಡೆಸಿ ಒಪ್ಪಂದ ಮಾಡಿಸಿದ್ದರು. ಅದರಂತೆ ಪತ್ನಿ ಮನೆಯಲ್ಲಿಯೇ ಇರುತ್ತಾಳೆ. ಆದರೆ, ಗಂಡನೊಂದಿಗೆ ಸಂಪರ್ಕ ಹೊಂದಬಾರದು ಎಂದು ನಿರ್ಧರಿಸಲಾಗಿತ್ತು.
ಪುತ್ರನಿಗಾಗಿ ಮನೆಯಲ್ಲೇ ವಾಸ: ಜಿಲ್ಲಾಧಿಕಾರಿ ನಡೆಸಿದ ಸಂಧಾನದಂತೆ ಮಹಿಳೆ ತನ್ನ 10 ವರ್ಷದ ಪುತ್ರನಿಗಾಗಿ ಗಂಡನ ಮನೆಯಲ್ಲೇ ಉಳಿದುಕೊಳ್ಳಲು ಒಪ್ಪಿಗೆ ಸೂಚಿಸಿದ್ದಾಳೆ. ಮಹಿಳೆಯ ಅತ್ತೆ ಮೊಮ್ಮಗ ಮತ್ತು ಸೊಸೆ ಪ್ರತ್ಯೇಕವಾಗಿ ವಾಸಿಸಲು ಮನೆಯಲ್ಲಿ ಪ್ರತ್ಯೇಕ ಕೊಠಡಿಗಳನ್ನು ನೇಮಿಸಿದ್ದಾರೆ. ಆದರೆ, ಪತಿ ಮಾತ್ರ ಆಕೆಯನ್ನು ಹಿಂಸಿಸುವುದನ್ನು ನಿಲ್ಲಿಸಿಲ್ಲ.
"ನನಗೆ ಗಂಡನ ಜೊತೆ ಬಾಳಲು ಸ್ವಲ್ಪವೂ ಇಷ್ಟವಿಲ್ಲ. ಮಗನ ಭವಿಷ್ಯದ ಹಿತದೃಷ್ಟಿಯಿಂದ ಅದೇ ಮನೆಯಲ್ಲಿ ಇರಲು ಒಪ್ಪಿಕೊಂಡೆ. ಗಂಡನಿಗೆ ಹೆಚ್ಐವಿ ಸೋಂಕು ಇರುವ ಕಾರಣ ಪ್ರತ್ಯೇಕವಾಗಿ ಇರಲು ಒಪ್ಪಿಕೊಂಡರೂ, ದೈಹಿಕ ಸಂಪರ್ಕಕ್ಕಾಗಿ ಪತಿ ಒತ್ತಾಯ ಮಾಡುತ್ತಿದ್ದಾನೆ. ನನಗೆ ಸೋಂಕು ಹರಡಲಿದೆ. ಆತನ ಬೆದರಿಕೆಗಳಿಂದ ಬೇಸತ್ತಿದ್ದೇನೆ. ಹೀಗಾಗಿ ನನ್ನನ್ನು ಗಂಡನಿಂದ ರಕ್ಷಿಸಬೇಕು" ಎಂದು ಮಹಿಳೆ ಪಾಣಿಪತ್ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.
ಇದನ್ನೂ ಓದಿ: 60 ಅಡಿ ಆಳದ ಬೋರ್ವೆಲ್ಗೆ ಬಿದ್ದ 8 ವರ್ಷದ ಬಾಲಕ: ಸಮರೋಪಾದಿಯಲ್ಲಿ ರಕ್ಷಣಾ ಕಾರ್ಯ