ಬಾಲಸೋರ್ (ಒಡಿಶಾ): ಸಾವನ್ನಪ್ಪಿರುವ ಪತಿಯ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲು ಹಣಕ್ಕಾಗಿ ಮನೆ ಮನೆಗೆ ತೆರಳಿ ಮಹಿಳೆಯೊಬ್ಬರು ನೆರವು ಕೇಳಿದ ಮನಕಲಕುವ ಘಟನೆ ಬಾಲಸೋರ್ ಜಿಲ್ಲೆಯ ಬಸ್ತಾ ಬ್ಲಾಕ್ನ ಸಸನ್ ಹಳ್ಳಿಯ ತಡಾಡಾ ಪಂಚಾಯಿತಿ ವ್ಯಾಪ್ತಿಯಲ್ಲಿ ನಡೆದಿದೆ.
ಮಾಹಿತಿ ಪ್ರಕಾರ ಜಗು ಸೊರೆನ್ ಎನ್ನುವ ವ್ಯಕ್ತಿ ಅಕ್ಟೋಬರ್ 21 ರಂದು ಸಾವನ್ನಪ್ಪಿದ್ದರು. ಮನೆಯಲ್ಲಿ ಸಂಪಾದಿಸುತ್ತಿದ್ದ ಏಕೈಕ ವ್ಯಕ್ತಿ ಅವರಾಗಿದ್ದರು. ಜಗು ಕುಟುಂಬದಲ್ಲಿ ಪತ್ನಿ ಸುಮಿತಾ, ಹನ್ನೊಂದು ವರ್ಷದ ಮಗಳು ಸುನಿ, ಆರು ವರ್ಷದ ಮಗ ಮಾಧ ಮೂರು ವರ್ಷದ ಸುಶೀಲ್ ಸೇರಿ ಐದು ಜನರಿದ್ದರು. ಜಗು ಒಬ್ಬರೇ ದುಡಿದು ಇಡೀ ಸಂಸಾರ ನಡೆಸುತ್ತಿದ್ದರು. ಆದರೆ, ಅಕ್ಟೋಬರ್ 21ರಂದು ಜಗು ಮಲಗಿದ್ದಾಗಲೇ ಕೊನೆಯುಸಿರೆಳೆದಿದ್ದರು. ಇಡೀ ಮನೆಗೆ ಆಧಾರ ಸ್ತಂಭವಾಗಿದ್ದ ಜಗು ಅವರನ್ನು ಕಳೆದುಕೊಂಡು ಇದೀಗ ಇಡೀ ಕುಟುಂಬ ಅಕ್ಷರಶಃ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದೆ. ಜಗು ಅವರ ಅಂತಿಮ ಸಂಸ್ಕಾರಕ್ಕೂ ಹಣವಿಲ್ಲದೇ ಪತ್ನಿ ಮನೆ ಮನೆಗೆ ತೆರಳಿ ಬೇಡಿದ್ದರು. ಇದೀಗ ಇಡೀ ದಿನ ಹಸಿವಿನಿಂದಲೇ ಕಳೆಯುತ್ತಿರುವ ಕುಟುಂಬ, ಹೊಟ್ಟೆ ತುಂಬಿಸಿಕೊಳ್ಳಲು ಮನೆ ಮನೆಗೆ ಬೇಡಲು ಹೋಗುತ್ತಿದೆ.
ಜಗು ಅವರನ್ನು ಕಳೆದುಕೊಂಡು ದುಃಖದಲ್ಲಿ ಮುಳುಗಿದ್ದ ಕುಟುಂಬ: ಹಠಾತ್ತಾಗಿ ಜಗು ಅವರ ಮಲಗಿದ್ದಾಗಲೇ ಸಾವನ್ನಪ್ಪಿದ್ದರಿಂದ ಕುಟುಂಬ ದುಃಖದಲ್ಲಿ ಮುಳುಗಿತ್ತು. ಕುಟುಂಬದಲ್ಲಿ ಹಣ ಸಂಪಾದಿಸುತ್ತಿದ್ದ ಒಬ್ಬರೇ ವ್ಯಕ್ತಿ ಇನ್ನಿಲ್ಲವಾಗಿದ್ದು, ಕುಟುಂಬಕ್ಕೆ ಜೀವನ ನಿರ್ವಹಣೆಯೇ ಕಷ್ಟವಾಗಿದೆ. ಅವರ ಸಮುದಾಯದ ಸಂಪ್ರದಾಯದ ಪ್ರಕಾರ ಜಗು ಅವರ ಅಂತಿಮ ಸಂಸ್ಕಾರ ನಡೆಸಬೇಕಾಗಿತ್ತು. ಆದರೆ, ಪತ್ನಿ ಸಮಿತಾ ಅವರಿಗೆ ಅವುಗಳನ್ನೆಲ್ಲ ನೆರವೇರಿಸಲು ಹಣವಿರಲಿಲ್ಲ. ಬೇರೆ ದಾರಿ ಇಲ್ಲದೇ ಹಣಕ್ಕಾಗಿ ಅವರು ನೆರೆಹೊರೆಯ ಮನೆ - ಮನೆಗಳಿಗೆ ತೆರಳಿ ಅಕ್ಷರಶಃ ಭಿಕ್ಷೆ ಬೇಡಿ ಅಂತಿಮ ವಿಧಿ ವಿಧಾನಗಳನ್ನು ನೆರವೇರಿಸಿದ್ದರು.
ಸಹಾಯಕ್ಕೆ ಬಂದ ಜಿಲ್ಲಾಡಳಿತ, ಸ್ವಯಂ ಸೇವಾ ಸಂಸ್ಥೆಗಳು: ಇದೀಗ ಕುಟುಂಬದ ಕಷ್ಟಕ್ಕೆ ಜಿಲ್ಲಾಡಳಿತ ಸ್ಪಂದಿಸಿದ್ದು, ಹೆಚ್ಚುವರಿ ಜಿಲ್ಲಾಧಿಕಾರಿ ಸುಧಾಕರ ನಾಯ್ಕ್ ಅವರು, ರೆಡ್ ಕ್ಯಾಸ್ನಿಂದ ಕುಟುಂಬಕ್ಕೆ ಆರ್ಥಿಕ ನೆರವು ಒದಗಿಸುವಂತೆ ಬಿಡಿಒ ಮೋಹಿನಿ ನಾಯ್ಕ್ ಅವರಿಗೆ ಸೂಚಿಸಿದ್ದಾರೆ. ಜೊತೆಗೆ ಕುಟುಂಬಕ್ಕೆ ಸರ್ಕಾರಿ ವಸತಿ ಹಾಗೂ ಭತ್ಯೆ ನೀಡಬೇಕು ಎಂದು ಸ್ಥಳೀಯ ಸರಪಂಚ್ ಪಂಗಮಕುಮಾರ್ ದಾಸ್ ಒತ್ತಾಯಿಸಿದ್ದಾರೆ.
ಈ ಸುದ್ದಿ ಎಲ್ಲೆಡೆ ಸದ್ದು ಮಾಡುತ್ತಿದ್ದಂತೆ, ಜಲೇಶ್ವರ ಮತ್ತು ಬಸ್ತಾ ಪ್ರದೇಶದ ವಿವಿಧ ಸ್ವಯಂಸೇವಾ ಸಂಸ್ಥೆಗಳು ಅಸಹಾಯಕ ಕುಟುಂಬದ ನೆರವಿಗೆ ಬಂದಿವೆ. ಬಸ್ತಾ ಬಿಡಿಒ ಮೋಹಿನಿ ನಾಯ್ಕ್, ಪಿಡಿಒ ಅಂಜನ್ ಅವರು, ಮಣಿಗರಹಿ ಘಮ ಗ್ರಾಮದ ಸುಮಿತಾ ಅವರ ಮನೆಗೆ ತೆರಳಿ, ರೆಡ್ ಕ್ರಾಸ್ ನಿಧಿಯಿಂದ 10 ಸಾವಿರ ರೂ ಆರ್ಥಿಕ ಸಹಾಯ ಹಾಗೂ ವಿಧವಾ ಭತ್ಯೆ ಹಾಗೂ ವಸತಿ ಯೋಜನೆಯಡಿ ಶೀಘ್ರವೇ ಮನೆ ನಿರ್ಮಾಣ ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ.
ಇದನ್ನೂ ಓದಿ : ಗದಗದಲ್ಲಿ ವಿಧವೆಗೆ ಥಳಿಸಿದ ಆರೋಪ: ದೂರು ಸ್ವೀಕರಿಸದ ಪೊಲೀಸರ ವಿರುದ್ಧ ಅಸಮಾಧಾನ