ನವದೆಹಲಿ: ಭಾರತದ ಅಧ್ಯಕ್ಷತೆಯಲ್ಲಿ ಐತಿಹಾಸಿಕ ಜಿ-20 ಶೃಂಗಸಭೆ ನವದೆಹಲಿಯಲ್ಲಿ ನಾಳೆಯಿಂದ 2 ದಿನ ನಡೆಯಲಿದೆ. ರಾಜಧಾನಿಯಲ್ಲಿ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. 19 ದೇಶಗಳು ಮತ್ತು ಯುರೋಪಿಯನ್ ಒಕ್ಕೂಟವನ್ನು ಒಳಗೊಂಡಿರುವ ಜಾಗತಿಕ ವೇದಿಕೆಯೇ ಜಿ20. ಇದರಲ್ಲಿ ಆಫ್ರಿಕನ್ ಒಕ್ಕೂಟದ 55 ರಾಷ್ಟ್ರಗಳನ್ನೂ ಸದಸ್ಯರನ್ನಾಗಿ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ಜಿ-20 ಸದಸ್ಯ ರಾಷ್ಟ್ರಗಳ ಎಲ್ಲಾ ನಾಯಕರಿಗೆ ಪತ್ರ ಬರೆದಿದ್ದಾರೆ. ನವದೆಹಲಿ ಶೃಂಗಕ್ಕೆ ಮೂರು ತಿಂಗಳಿರುವಾಗ ಮೋದಿ ಮನವಿ ಮಾಡಿದ್ದರು.
ಮನೋಹರ್ ಪರಿಕ್ಕರ್ ಇನ್‌ಸ್ಟಿಟ್ಯೂಟ್ ಫಾರ್ ಡಿಫೆನ್ಸ್ ಸ್ಟಡೀಸ್ ಮತ್ತು ಅನಾಲಿಸಿಸ್‌ನ ಸಲಹೆಗಾರ್ತಿ ರುಚಿತಾ ಬೇರಿ ಈ ಕುರಿತು ಮಾತನಾಡಿ, ಭಾರತದ ಜಿ-20 ಅಧ್ಯಕ್ಷ ಸ್ಥಾನವು ಜಾಗತಿಕ ದಕ್ಷಿಣ ದೇಶಗಳ ಧ್ವನಿಯಾಗಲಿದೆ. ಆಫ್ರಿಕಾವು ಜಾಗತಿಕ ದಕ್ಷಿಣದ ಹೃದಯಭಾಗ. ಹಾಗಾಗಿ ಆಫ್ರಿಕಾವನ್ನು ಬಹುಪಕ್ಷೀಯ ವೇದಿಕೆಯಲ್ಲಿ ಮುಂಚೂಣಿಗೆ ತರಲು ಭಾರತ ಬಯಸುತ್ತದೆ ಎಂದು ಅಭಿಪ್ರಾಯಪಟ್ಟರು.
ಇಥಿಯೋಪಿಯಾ ಮತ್ತು ಆಫ್ರಿಕನ್ ಯೂನಿಯನ್ನ ಮಾಜಿ ರಾಯಭಾರಿ ಗುರ್ಜಿತ್ ಸಿಂಗ್ ಅವರು, ಭಾರತದ ಜಿ20 ಅಧ್ಯಕ್ಷ ಸ್ಥಾನವು ಭಾರತದ ಆಫ್ರಿಕಾ ನೀತಿಗೆ ಮತ್ತಷ್ಟು ಶಕ್ತಿ ತುಂಬುವ ಸಾಮರ್ಥ್ಯ ಹೊಂದಿದೆ. ಕೋವಿಡ್-19 ಸಾಂಕ್ರಾಮಿಕ ಮತ್ತು ಉಕ್ರೇನ್ ಸಂಘರ್ಷದ ಪರಿಣಾಮಗಳಿಂದ ಆಫ್ರಿಕಾ ಬಳಲುತ್ತಿದೆ. ಈ ನಿಟ್ಟಿನಲ್ಲಿ ಭಾರತವು ನಿರ್ದಿಷ್ಟವಾಗಿ ಆಫ್ರಿಕಾದ ಪರವಾಗಿ ಮಾತನಾಡುವುದು ಮುಖ್ಯ ಎಂದು ಹೇಳಿದರು.
ಭಾರತವು ಜಿ20 ಅಧ್ಯಕ್ಷ ಸ್ಥಾನ ವಹಿಸಿಕೊಂಡ ನಂತರ, ಜನವರಿಯಲ್ಲಿ ವಾಯ್ಸ್ ಆಫ್ ದಿ ಗ್ಲೋಬಲ್ ಸೌತ್‌ನ (VoGS) ವರ್ಚುವಲ್ ಶೃಂಗಸಭೆ ಆಯೋಜಿಸಿತ್ತು. ಈ ಸಭೆಯಲ್ಲಿ ಸುಮಾರು 120 ದೇಶಗಳು ಭಾಗಿಯಾಗಿದ್ದವು. ಶೃಂಗಸಭೆ ಉದ್ದೇಶಿಸಿ ಮಾತನಾಡಿದ್ದ ಮೋದಿ, ಜಾಗತಿಕ ದಕ್ಷಿಣ ಭಾಗದ ದೇಶಗಳು ಮುಂದಿನ ದಿನಗಳಲ್ಲಿ ಜಾಗತಿಕ ಅಭಿವೃದ್ಧಿಯಲ್ಲಿ ದೊಡ್ಡ ಪಾಲು ಹೊಂದಲಿದೆ ಎಂದು ಹೇಳಿದ್ದರು.
ಇದನ್ನೂ ಓದಿ : ಐತಿಹಾಸಿಕ ಜಿ-20 ಶೃಂಗಸಭೆ: ವಿವಿಧ ರಾಷ್ಟ್ರಗಳ ಮುಖ್ಯಸ್ಥರನ್ನು ಸ್ವಾಗತಿಸಲು ಸಜ್ಜಾದ ನವದೆಹಲಿ