ನವದೆಹಲಿ: ದೇಶದ ಹಳೆಯ ಪಕ್ಷವಾದ ಕಾಂಗ್ರೆಸ್ನಲ್ಲಿಆಂತರಿಕ ಕಲಹವು ಬೂದಿ ಮುಚ್ಚಿದ ಕೆಂಡ ಇರುವಂತೆ ಇದೆ. ಪಕ್ಷದ ಹಲವು ರಾಜ್ಯ ಘಟಕಗಳಲ್ಲಿ ಹಿರಿಯರು ಮತ್ತು ಕಿರಿಯರ ನಡುವೆ ಸರಿಯಾದ ಹೊಂದಾಣಿಕೆ ಇಲ್ಲ. ಹಿರಿಯರ ವರ್ತನೆಯಿಂದ ಸ್ವಪಕ್ಷದ ಕಿರಿಯರು ಮತ್ತು ಅನೇಕ ಸಂದರ್ಭಗಳಲ್ಲಿ 'ಕೈ' ಹಿಡಿದಿದ್ದ ಯುವ ನಾಯಕರು ಅತೃಪ್ತರಾಗಿದ್ಧಾರೆ. ಯಾಕೆಂದರೆ, ಗುಜರಾತ್ ಪ್ರಭಾವಿ ಸಮುದಾಯದ ಯುವ ನಾಯಕ ಹಾರ್ದಿಕ್ ಪಟೇಲ್ ಈಗ ಪಕ್ಷ ಬಿಡುವ ಮನ್ಸೂಚನೆ ನೀಡಿದ್ದು, ಇಂತಹ ಅನುಮಾನಕ್ಕೆ ಕಾರಣವಾಗಿದೆ.
28 ವರ್ಷದ ಹಾರ್ದಿಕ್ 2015ರಲ್ಲಿ ಗುಜರಾತ್ನಲ್ಲಿ ಪಟೇಲ್ ಸಮುದಾಯದ ಮೀಸಲಾತಿ ಚಳವಳಿ ಮುನ್ನಡೆಸುವ ಮೂಲಕ ಮುನ್ನೆಲೆಗೆ ಬಂದಿದ್ದರು. ನಂತರ 2019ರಲ್ಲಿ ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದರು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಯನ್ನು ಹೊಗಳಿದ್ದ ಅವರು, ರಾಹುಲ್ಗೆ ಪ್ರಾಮಾಣಿಕತೆಯ ಸರ್ಟಿಫಿಕೇಟ್ ಕೊಟ್ಟಿದ್ದರು.
ಸರ್ವಾಧಿಕಾರಿಯಂತೆ ರಾಹುಲ್ ವರ್ತಿಸಲ್ಲ ಎಂದೂ ಹೇಳಿದ್ದರು. ಅಲ್ಲದೇ, 2017ರ ಗುಜರಾತ್ ವಿಧಾನಸಭಾ ಚುನಾವಣೆಯಲ್ಲೂ ಕಾಂಗ್ರೆಸ್‌ಗೆ ಹಾರ್ದಿಕ್ ಬೆಂಬಲ ನೀಡಿದ್ದರು. ಆಗ ಆಡಳಿತಾರೂಢ ಬಿಜೆಪಿಗೆ ಕಾಂಗ್ರೆಸ್ ತೀವ್ರ ಸ್ಪರ್ಧೆಯನ್ನೂ ನೀಡಿತ್ತು.
ಇತ್ತ, ಜುಲೈ 2019ರಲ್ಲಿ ಗುಜರಾತ್ನ ಮಾಜಿ ಕಾಂಗ್ರೆಸ್ ಶಾಸಕರಾದ ಅಲ್ಪೇಶ್ ಠಾಕೂರ್ ಮತ್ತು ಇವರ ಆಪ್ತ ಸಹಾಯಕ ಧವಲ್ಸಿನ್ಹಾ ಝಾಲಾ ಪಕ್ಷ ತೊರೆದು ಬಿಜೆಪಿ ಸೇರಿದ್ದರು. 43 ವರ್ಷದ ಅಲ್ಪೇಶ್, 2015ರಲ್ಲಿ ಪಟೇಲ್ ಮೀಸಲಾತಿಯ ಆಂದೋಲನದ ನಂತರ ಪ್ರಮುಖ ಇತರ ಹಿಂದುಳಿದ ವರ್ಗಗಳ ನಾಯಕರಾಗಿಯೂ ಹೊರಹೊಮ್ಮಿದ್ದರು. ನಂತರ ಠಾಕೂರ್ ಸೇನೆ ಎಂಬ ಸಂಘಟನೆಯನ್ನೂ ಕಟ್ಟಿದರು.
ರಾಹುಲ್ ನಂಬಿ ಪಕ್ಷ ಸೇರಿದ್ದೆ ಆದ್ರೆ?: ಈ ವೇಳೆ 'ನಾನು ರಾಹುಲ್ ಗಾಂಧಿಯನ್ನು ನಂಬಿ ಕಾಂಗ್ರೆಸ್ ಸೇರಿದ್ದೆ. ಆದರೆ, ದುರದೃಷ್ಟವಶಾತ್ ಅವರು ಏನನ್ನೂ ಮಾಡಲು ಸಾಧ್ಯವಾಗಲಿಲ್ಲ, ನಾನು ಬಡವರು ಮತ್ತು ನಿರ್ಗತಿಕರಿಗಾಗಿ ಕೆಲಸ ಮಾಡಲು ಬಂದಿದ್ದೆ. ಕಾಂಗ್ರೆಸ್ನಲ್ಲಿದ್ದು ನಾನು ಯಾವುದನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದರು.
ಧವಲ್ಸಿನ್ಹಾ ಸಹ, ನಮಗೆ ಪದೇ ಪದೇ ಅವಮಾನ ಮಾಡಲಾಗಿದೆ. ಪಕ್ಷದ ದೊಡ್ಡ ನಾಯಕರು ಸಣ್ಣವರ ಮಾತನ್ನು ಎಂದಿಗೂ ಕೇಳುವುದಿಲ್ಲ. ಈ ಕಾರಣಗಳಿಂದ ನಾನು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದ್ದರು. ಹೀಗೆ ರಾಹುಲ್ ಗಾಂಧಿಯನ್ನು ಮೆಚ್ಚಿದ್ದ ಮತ್ತು ಅವರಿಗೆ ನಿಕಟವಾಗಿರುವ ಯುವ ನಾಯಕರು ಹಳೆಯ ಪಕ್ಷವನ್ನು ಬಿಡುತ್ತಿರುವುದಕ್ಕೆ ಹಿರಿಯರು ಕಾರಣ ಎಂಬುವುದುನ್ನು ಸೂಚ್ಯವಾಗಿ ಹೇಳಿದ್ದರು.
ಅಸ್ಸೋಂನಲ್ಲೂ ಅಸಮಾಧಾನ: ಇಂತಹದ್ದೇ ಬೆಳವಣಿಗೆಗಳು ಇತರ ರಾಜ್ಯಗಳಲ್ಲೂ ನಡೆದಿವೆ. ಅಸ್ಸೋಂನ ಸಿಲ್ಚಾರ್‌ನ ಮಾಜಿ ಲೋಕಸಭಾ ಸದಸ್ಯೆ ಮತ್ತು ಕಾಂಗ್ರೆಸ್ ರಾಷ್ಟ್ರೀಯ ಮಹಿಳಾ ಘಟಕದ ಅಧ್ಯಕ್ಷೆಯಾಗಿದ್ದ ಸುಶ್ಮಿತಾ ದೇವ್ ಸಹ ಕಳೆದ ವರ್ಷ ಕಾಂಗ್ರೆಸ್‌ಗೆ ಬಿಟ್ಟು ಟಿಎಂಸಿ ಸೇರಿದ್ದಾರೆ. ಸಂಸತ್ತಿನಲ್ಲಿ ಉತ್ತಮವಾಗಿ ಭಾಷಣ ಮಾಡುತ್ತಿದ್ದ ಸುಶ್ಮಿತಾ ದೇವ್ ಕಾಂಗ್ರೆಸ್‌ಗೆ ಶಕ್ತಿಯಾಗಿದ್ದರು.
ಉತ್ತರ ಪ್ರದೇಶದಲ್ಲೂ ಜಿತಿನ್ ಪ್ರಸಾದ್ ಮತ್ತು ಮಧ್ಯಪ್ರದೇಶದಲ್ಲಿ ಜ್ಯೋತಿರಾದಿತ್ಯ ಸಿಂಧಿಯಾ, ತ್ರಿಪುರಾದಲ್ಲಿ ಮಾಣಿಕ್ಯ ದೇಬ್ ಬರ್ಮನ್ ಸಹ ಆಂತರಿಕ ಕಲಹದಿಂದಲೇ ಪಕ್ಷದ ಬಿಟ್ಟರು ಎಂಬುವುದೂ ಗುಟ್ಟಾಗಿ ಉಳಿದಿಲ್ಲ. ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷದ ಬಿಟ್ಟ ನಂತರ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ಸರ್ಕಾರವೇ ಬಿದ್ದು ಹೋಯಿತು. 2020ರಲ್ಲಿ ರಾಜಸ್ಥಾನದ ಯುವ ನಾಯಕ ಸಚಿನ್ ಪೈಲಟ್ ಕಾಂಗ್ರೆಸ್ ತೊರೆಯುವ ಅಂಚಿನಲ್ಲಿದ್ದರು. ಅದೃಷ್ಟವಶಾತ್ ಅವರು ಪಕ್ಷದಲ್ಲಿ ಹಾಗೆ ಉಳಿದುಕೊಂಡಿದ್ದಾರೆ.
ಇದನ್ನೂ ಓದಿ: ಸ್ವಪಕ್ಷದ ವಿರುದ್ಧ ವಾಗ್ದಾಳಿ... ಗುಜರಾತ್ ಕಾಂಗ್ರೆಸ್ ಕಾರ್ಯಾಧ್ಯಕ್ಷ ಸ್ಥಾನದಿಂದ ಹಾರ್ದಿಕ್ ವಜಾ!?