ನವದೆಹಲಿ: ಸತತ ಕಳೆದ ಮೂರು ತಿಂಗಳುಗಳಲ್ಲಿ ಮೈನಸ್ 0.52 ಶೇಕಡಾಕ್ಕೆ ಕುಸಿತ ಕಂಡಿದ್ದ ದೇಶದ ಸಗಟು ಮಾರಾಟಗಳ ಆಧಾರಿತ ಹಣದುಬ್ಬರ ನವೆಂಬರ್ನಲ್ಲಿ ಶೇಕಡಾ 0.26ರಷ್ಟು ಏರಿಕೆ ದಾಖಲಿಸಿದೆ ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ತಿಳಿಸಿದೆ.
ಗುರುವಾರ ಅಂಕಿ - ಅಂಶ ಬಿಡುಗಡೆ ಮಾಡಿರುವ ಸಚಿವಾಲಯ, ಈ ವರ್ಷದ ಮಾರ್ಚ್ನಿಂದ ನಿರಂತರವಾಗಿ ಕುಸಿತದ ಮಟ್ಟದಲ್ಲೇ ಇದ್ದ ಸಗಟು ಮಾರಾಟದ ಬೆಲೆಗಳಲ್ಲಿ ಏರಿಕೆ ಕಂಡು ಬಂದಿರುವುದರಿಂದ ಈ ವಲಯದ ಹಣದುಬ್ಬರ ಮೊದಲ ಬಾರಿಗೆ ಇಳಿತದ ವಲಯದಿಂದ ಹೊರಬಂದು ನವೆಂಬರ್ ತಿಂಗಳಿನಲ್ಲಿ ಭಾರಿ ಏರಿಕೆ ದಾಖಲಿಸಿದೆ. ಇದು ಕುಸಿತ ಕಾಣುತ್ತಿದ್ದ ಕಳೆದ ಎಂಟು ತಿಂಗಳುಗಳಲ್ಲಿ ಗರಿಷ್ಠ ಮಟ್ಟದ ಸಗಟು ಬೆಲೆ ಸೂಚ್ಯಂಕ(WPI) ದಾಖಲಾಗಿದೆ ಎಂದು ಹೇಳಿದೆ.
2022ರ ನವೆಂಬರ್ನಲ್ಲಿ 6.12 ಶೇಕಡಾ ಇದ್ದ ಸಗಟು ಬೆಲೆ ಆಧಾರಿತ ಮಾರಾಟದ ಹಣದುಬ್ಬರ 2023 ರ ಅಕ್ಟೋಬರ್ನಲ್ಲಿ ಮೈನಸ್ 0.52ಕ್ಕೆ ಇಳಿದಿತ್ತು. ಆಹಾರ ಸೂಚ್ಯಂಕದಲ್ಲಿ ಶೇಕಡಾ 1.9ರಷ್ಟು ಏರಿಕೆಯಾದ ಹಿನ್ನೆಲೆಯಲ್ಲಿ ಇದೀಗ ಸಗಟು ಬೆಲೆ ಆಧಾರಿತ ಹಣದುಬ್ಬರವೂ ಏರಿಕೆ ಕಂಡಿದೆ. ತರಕಾರಿಗಳ ಬೆಲೆಗಳು ತಿಂಗಳಿನಿಂದ ತಿಂಗಳಿಗೆ 16.45 ಶೇಕಡಾದಷ್ಟು ಹೆಚ್ಚಾಗಿದೆ. ಈರುಳ್ಳಿ ಬೆಲೆಯು 41.3 ಶೇಕಡಾದಷ್ಟು ಜಿಗಿದಿದ್ದು, ಬೆಲೆಯಲ್ಲಿ ಏರಿಕೆಯಾಗಿದೆ.
ಸಗಟು ಬೆಲೆ ಸೂಚ್ಯಂಕ ಡೇಟಾವು ದೇಶದ ಚಿಲ್ಲರೆ ಹಣದುಬ್ಬರ ಅಂಕಿ - ಅಂಶಗಳನ್ನು ಆಧರಿಸಿರುತ್ತದೆ. ಕಳೆದ ಮೂರು ತಿಂಗಳುಗಳ ಏರಿಕೆಯನ್ನು ಗಮನಿಸಿದರೆ ಗರಿಷ್ಠ 5.55 ಶೇಕಡಾದಷ್ಟು ಸಗಟು ಬೆಲೆ ಆಧಾರಿತ ಹಣದುಬ್ಬರ ಏರಿಕೆಯಾಗಿದೆ.
ಇದನ್ನೂ ಓದಿ: ಐಟಿ ಷೇರುಗಳ ಮೌಲ್ಯ ಕುಸಿತ: ಅಲ್ಪ ಏರಿಕೆ ಕಂಡ ಬಿಎಸ್ಇ, ನಿಫ್ಟಿ
ಈ ತ್ರೈಮಾಸಿಕ ಅವಧಿಯಲ್ಲಿ ಅಂದರೆ ಮೂರು ತಿಂಗಳಲ್ಲಿ ಈಗಾಗಲೇ ಚಿಲ್ಲರೆ ವ್ಯಾಪಾರದ ಹಣದುಬ್ಬರ ಶೇ 4.87 ರಿಂದ 5.5ಕ್ಕೆ ಏರಿಕೆ ಕಂಡಿದೆ. ಆದರೆ ಈ ಬೆಲೆ ಏರಿಕೆ ಆರ್ಬಿಐ ಅಂದಾಜಿಸಿದ್ದಕ್ಕಿಂತ ಕಡಿಮೆ ಅಂದರೆ 5.7 ರಷ್ಟಕ್ಕಿಂತ ತುಸು ಕಡಿಮೆ ದಾಖಲಾಗಿತ್ತು. ತರಕಾರಿ, ಹಣ್ಣುಗಳ ಬೆಲೆಯಲ್ಲಿ ಕಂಡು ಬಂದ ಏರಿಕೆಯಿಂದಾಗಿ ಹಣದುಬ್ಬರದಲ್ಲಿ ಈ ಹೆಚ್ಚಳ ದಾಖಲಾಗಿದೆ ಎಂದು ಆರ್ಬಿಐ ಇತ್ತೀಚಿನ ತನ್ನ ನೀತಿ ಪ್ರಕಟಣೆ ವೇಳೆ ಹೇಳಿತ್ತು.
ಪ್ರಸ್ತುತ ಮಾರುಕಟ್ಟೆಯಲ್ಲಿ ಕಳೆದ ನವೆಂಬರ್ನಿಂದಲೇ ಈರುಳ್ಳಿ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬಂದಿದೆ. ಟೊಮೆಟೊ ಬೆಲೆಯಲ್ಲೂ ನಿಧಾನವಾಗಿ ಹೆಚ್ಚಳವಾಗುತ್ತಿದೆ. ಹೀಗಾಗಿ ಸಗಟು ವ್ಯವಹಾರಗಳ ಮೇಲೂ ಇದು ಪ್ರಭಾವ ಬೀರಿದ್ದು, ಸಗಟು ವಹಿವಾಟಿನ ಹಣದುಬ್ಬರ ಕೂಡಾ ಹೆಚ್ಚಳ ಕಂಡಿದೆ.