ಹೈದರಾಬಾದ್: ತೆಲಂಗಾಣ ವಿಧಾನಸಭೆ ಚುನಾವಣೆಯಲ್ಲಿ 64 ಸ್ಥಾನಗಳನ್ನು ಗೆದ್ದು ಅಧಿಕಾರದ ಗದ್ದುಗೆ ಏರಿರುವ ಕಾಂಗ್ರೆಸ್ಗೆ ಸಿಎಂ ಆಯ್ಕೆಯೇ ದೊಡ್ಡ ತಲೆನೋವಾಗಿದೆ. ರೇಸ್ನಲ್ಲಿ ಹಲವಾರು ಹಿರಿಯ ನಾಯಕರಿದ್ದು, ಯಾರನ್ನು ಸಿಎಂ ಗಾದಿಯಲ್ಲಿ ಕೂಡಿಸಬೇಕು ಎಂಬುದು ಹೈಕಮಾಂಡ್ಗೆ ಪ್ರಶ್ನೆಯಾಗಿದೆ. ಜೊತೆಗೆ ಜಾತಿ ಸಮೀಕರಣ ಮತ್ತ ಪ್ರಾದೇಶಿಕವಾರು ಸಚಿವ ಸ್ಥಾನ ನೀಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಯುತ್ತಿದೆ.
ಚುನಾವಣೆಯಲ್ಲಿ ಪಕ್ಷಕ್ಕೆ ಭರ್ಜರಿ ಗೆಲುವು ತಂದುಕೊಟ್ಟ ರಾಜ್ಯಾಧ್ಯಕ್ಷ ರೇವಂತ್ ರೆಡ್ಡಿ ಸಿಎಂ ಸ್ಥಾನದ ಪ್ರಬಲ ಆಕಾಂಕ್ಷಿ. ಇವರಿಗೆ 50 ಕ್ಕೂ ಅಧಿಕ ಶಾಸಕರ ಬೆಂಬಲವಿದೆ ಎಂದು ಹೇಳಲಾಗಿದೆ. ಇವರ ಜೊತೆಗೆ ಭಟ್ಟಿ ವಿಕ್ರಮಾರ್ಕ, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರು ಪೈಪೋಟಿಯಲ್ಲಿದ್ದಾರೆ. ಇದರ ಜೊತೆಗೆ ಉಪಮುಖ್ಯಮಂತ್ರಿ, ಸಚಿವರು, ಪಿಸಿಸಿ ಅಧ್ಯಕ್ಷ ಸ್ಥಾನ, ಸ್ಪೀಕರ್, ಉಪಸಭಾಪತಿ ಮತ್ತಿತರ ಹುದ್ದೆಗಳ ನೇಮಕದ ಕುರಿತು ಚರ್ಚೆ ನಡೆಯುತ್ತಿದೆ.
ಯಾರಿಗೆ ಸಿಎಂ ಪಟ್ಟ?: ಸೋಮವಾರ ನಡೆದ ಶಾಸಕಾಂಗ ಸಭೆಯಲ್ಲಿ ನಾಯಕನ ಆಯ್ಕೆ ಒಮ್ಮತಕ್ಕೆ ಬಾರದ ಕಾರಣ, ಸಿಎಂ ಯಾರಾಗಬೇಕು ಎಂಬುದನ್ನು ಹೈಕಮಾಂಡ್ ನಿರ್ಧರಿಸಲು ಒಂದು ಸಾಲಿನ ನಿಲುವಳಿಯನ್ನು ಅಂಗೀಕರಿಸಲಾಯಿತು. ಅಂದರೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ಈ ಹೊಣೆ ನೀಡಲಾಗಿದೆ. ಸುಮಾರು 55 ಶಾಸಕರು ರೇವಂತ್ ರೆಡ್ಡಿ ಅವರನ್ನು ಸಿಎಂ ಮಾಡುವ ಒಲವು ತೋರಿದ್ದಾರೆ ಎನ್ನಲಾಗಿದೆ. ಇದನ್ನು ಎಐಸಿಸಿ ವೀಕ್ಷಕರು ದೆಹಲಿ ಹೈಕಮಾಂಡ್ ಗಮನಕ್ಕೆ ತಂದಿದ್ದಾರೆ.
ಹಾಗೊಂದು ವೇಳೆ ರೇವಂತ್ ರೆಡ್ಡಿ ಸಿಎಂ ಸ್ಥಾನಕ್ಕೆ ಆಯ್ಕೆಯಾದಲ್ಲಿ ಭಟ್ಟಿ ವಿಕ್ರಮಾರ್ಕ, ಉತ್ತಮ್ ಕುಮಾರ್ ರೆಡ್ಡಿ, ಕೋಮಟಿರೆಡ್ಡಿ ವೆಂಕಟ್ ರೆಡ್ಡಿ ಅವರಿಗೆ ಯಾವ ಜವಾಬ್ದಾರಿ ನೀಡಬೇಕು. ಉಪಮುಖ್ಯಮಂತ್ರಿ ಸ್ಥಾನಗಳನ್ನು ರಚಿಸಬೇಕೇ ಎಂಬ ಬಗ್ಗೆಯೂ ಪ್ರಶ್ನೆ ಇದೆ. ಡಿಸಿಎಂಗಳ ಜೊತೆಗೆ 18 ಸಚಿವರ ಸಂಪುಟ ರಚನೆ ಮಾಡುವ ಸಾಧ್ಯತೆ ಇದೆ. ಸ್ಪೀಕರ್ ಯಾರು ಎಂಬುದು ಕೂಡ ಚರ್ಚೆಯ ವಿಷಯವಾಗಿದೆ. ಖಮ್ಮಂ ಜಿಲ್ಲೆಗೆ ಆದ್ಯತೆ ನೀಡಿದಲ್ಲಿ ಸ್ಪೀಕರ್ ಸ್ಥಾನಕ್ಕೆ ತುಮ್ಮಲ ಅವರ ಹೆಸರನ್ನು ಪರಿಶೀಲಿಸುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
6 ಅಥವಾ 9 ಕ್ಕೆ ಪ್ರಮಾಣ: ನೂತನ ಸರ್ಕಾರದ ಸಿಎಂ, ಮಂತ್ರಿಗಳ ಆಯ್ಕೆ ಶೀಘ್ರದಲ್ಲೇ ನಡೆಯಲಿದೆ. ಪಕ್ಷದ ಮೂಲಗಳ ಪ್ರಕಾರ ಸಿಎಂ ಆಯ್ಕೆ ಕುರಿತು ಇನ್ನೂ ವರಿಷ್ಠರಿಂದ ತೀರ್ಮಾನ ಆಗದ ಕಾರಣ ಇದೇ 6 ಅಥವಾ 9 ರಂದು ಪ್ರಮಾಣ ವಚನ ಸ್ವೀಕಾರ ಮಾಡುವ ಸಾಧ್ಯತೆ ಇದೆ. ಇದರೊಂದಿಗೆ ಪೂರ್ಣ ಪ್ರಮಾಣದ ಸಚಿವ ಸಂಪುಟವೂ ಏಕಕಾಲಕ್ಕೆ ಅಧಿಕಾರ ವಹಿಸಿಕೊಳ್ಳಲಿದೆ ಎಂಬ ಅಭಿಪ್ರಾಯವಿದೆ.
ಇದನ್ನೂ ಓದಿ: ಮುಂದುವರಿದ ತೆಲಂಗಾಣ ಸಿಎಂ ಆಯ್ಕೆ ಸಸ್ಪೆನ್ಸ್: ಹೈಕಮಾಂಡ್ ಅಂಗಳದಲ್ಲಿ ಚಂಡು!.. ಯಾರಾಗ್ತಾರೆ ಅಧಿಪತಿ?