ನವದೆಹಲಿ: ವಿಸ್ಕಿ ಬ್ರ್ಯಾಂಡ್ಗಳ ಟ್ರೇಡ್‌ಮಾರ್ಕ್ ಉಲ್ಲಂಘನೆ ಆರೋಪದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಿತ್ರ ಹಾಗೂ ಅಸಾಧಾರಣ ಘಟನೆಗೆ ಸಾಕ್ಷಿಯಾಗಿದೆ. ದೇಶದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳ ಪೀಠದ ಮುಂದೆಯೇ ಮದ್ಯದ ಬಾಟಲಿಗಳನ್ನು ವಕೀಲರು ಇಟ್ಟು ಪ್ರದರ್ಶಿಸಿದ್ದಾರೆ.
ಮದ್ಯ ತಯಾರಕ ಕಂಪನಿಗಳಾದ ಪೆರ್ನೋಡ್ ರಿಕಾರ್ಡ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಮತ್ತು ಜೆಕೆ ಎಂಟರ್‌ಪ್ರೈಸಸ್ ನಡುವೆ ಟ್ರೇಡ್‌ಮಾರ್ಕ್ ವಿವಾದ ಏರ್ಪಟ್ಟಿದೆ. ಇದು ಕೆಳ ಹಂತದ ನ್ಯಾಯಾಲಯ, ಹೈಕೋರ್ಟ್ನಲ್ಲಿ ಕಾನೂನು ಹೋರಾಟಕ್ಕೂ ಕಾರಣವಾಗಿದೆ. ಈಗ ಸುಪ್ರೀಂ ಕೋರ್ಟ್ ಮೆಟ್ಟಿಲೇರಿಸಿದೆ. ಈ ಪ್ರಕರಣದ ವಿಚಾರಣೆಯು ಶುಕ್ರವಾರ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಜೆ ಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠದ ಮುಂದೆ ಬಂದಿತ್ತು.
ಈ ವಿಚಾರಣೆ ವೇಳೆ ಪೆರ್ನೋಡ್ ರಿಕಾರ್ಡ್ ಪರ ವಾದ ಮಂಡಿಸಿದ ಹಿರಿಯ ವಕೀಲ ಮುಕುಲ್ ರೋಹಟಗಿ ಅವರು ವಿಸ್ಕಿ ಬಾಟಲಿಗಳನ್ನು ಪೀಠಕ್ಕೆ ತೋರಿಸಿ, ಎರಡೂ ಬಾಟಲಿ ಕೂಡ ಒಂದೇ ಆಗಿರುತ್ತವೆ ಎಂದು ತಮ್ಮ ವಾದ ಮಂಡಿಸಿದರು. ಆಗ ನ್ಯಾಯ ಪೀಠವು ಈ ಪ್ರಕರಣದಲ್ಲಿ ತಡೆಯಾಜ್ಞೆ ನೀಡಬೇಕೆಂಬ ಮನವಿ ಮೇರೆಗೆ ನೋಟಿಸ್ ಜಾರಿ ಮಾಡಿ, ಜನವರಿ 19ಕ್ಕೆ ವಿಚಾರಣೆ ಮುಂದೂಡಿತು. ಇನ್ನು, ನ್ಯಾಯ ಪೀಠದ ಅನುಮತಿಯನ್ನು ಪಡೆದೇ ವಕೀಲರು ಮದ್ಯದ ಬಾಟಲಿಗಳನ್ನು ಒಳಗಡೆ ತಂದಿದ್ದರು ಎಂದು ವರದಿಯಾಗಿದೆ.
ಪ್ರಕರಣದ ಹಿನ್ನೆಲೆ?: ಟ್ರೇಡ್‌ಮಾರ್ಕ್ ವಿಚಾರವಾಗಿ ಈ ಹಿಂದೆ ಮಧ್ಯಪ್ರದೇಶದ ಇಂದೋರ್‌ನ ವಾಣಿಜ್ಯ ನ್ಯಾಯಾಲಯವು ತೀರ್ಪೊಂದನ್ನು ನೀಡಿತ್ತು. ಈ ಆದೇಶದ ವಿರುದ್ಧ 'ಬ್ಲೆಂಡರ್ಸ್ ಪ್ರೈಡ್' ಮತ್ತು 'ಇಂಪೀರಿಯಲ್ ಬ್ಲೂ' ವಿಸ್ಕಿಯನ್ನು ತಯಾರಕ, ಮಾರಾಟ ಮಾಡುವ ಪ್ರಮುಖ ಮದ್ಯ ಕಂಪನಿ ಪೆರ್ನೋಡ್ ರಿಕಾರ್ಡ್ ಮಧ್ಯಪ್ರದೇಶ ಹೈಕೋರ್ಟ್ ಮೊರೆ ಹೋಗಿತ್ತು. ವಾಣಿಜ್ಯ ನ್ಯಾಯಾಲಯ ಆದೇಶಕ್ಕೆ ತಾತ್ಕಾಲಿಕ ತಡೆಯಾಜ್ಞೆ ನೀಡಬೇಕೆಂದು ಕೋರಿತ್ತು. ಆದರೆ, ಕಳೆದ ನವೆಂಬರ್‌ನಲ್ಲಿ ಪೆರ್ನೋಡ್ ರಿಕಾರ್ಡ್ ಅರ್ಜಿಯನ್ನು ಹೈಕೋರ್ಟ್‌ನ ವಜಾಗೊಳಿಸಿದೆ. ಹೀಗಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಲಾಗಿದೆ.
ಪೆರ್ನೋಡ್ ರಿಕಾರ್ಡ್ ವಾದವೇನು?: 'ಬ್ಲೆಂಡರ್ಸ್ ಪ್ರೈಡ್' ಮತ್ತು 'ಇಂಪೀರಿಯಲ್ ಬ್ಲೂ'ಗೆ ಸಂಬಂಧಿಸಿದಂತೆ ಟ್ರೇಡ್ ಮಾರ್ಕ್ಅನ್ನು ನಾವು ನೋಂದಾಯಿಸಿಕೊಂಡಿದ್ದೇವೆ. ಆದರೆ, ಜೆಕೆ ಎಂಟರ್‌ಪ್ರೈಸಸ್ ನಮ್ಮದೇ ಟ್ರೇಡ್ ಮಾರ್ಕ್ಅನ್ನು ಅನುಕರಿಸಿದೆ. ಅಲ್ಲದೇ, ತನ್ನ ವಿಸ್ಕಿಯನ್ನು 'ಲಂಡನ್ ಪ್ರೈಡ್' ಎಂಬ ಟ್ರೇಡ್ ಮಾರ್ಕ್ ಅಡಿಯಲ್ಲಿ ತಯಾರಿಸಿ ಮಾರಾಟ ಮಾಡುತ್ತಿದೆ ಎಂದು ಪೆರ್ನೋಡ್ ರಿಕಾರ್ಡ್ ಆರೋಪವಾಗಿದೆ.
1995ರಿಂದ ನಮ್ಮ ಟ್ರೇಡ್‌ಮಾರ್ಕ್ 'ಬ್ಲೆಂಡರ್ಸ್ ಪ್ರೈಡ್'ನ ಅತ್ಯಂತ ಅಗತ್ಯ, ಹೆಮ್ಮೆಯಾಗಿದೆ. ಮತ್ತೊಂದು ಬ್ರ್ಯಾಂಡ್ 'ಇಂಪೀರಿಯಲ್ ಬ್ಲೂ'ಗೆ ಬಳಸಲಾಗುತ್ತಿದೆ. ಪ್ರತಿವಾದಿಯಾದ ಜೆಕೆ ಎಂಟರ್‌ಪ್ರೈಸಸ್ ತನ್ನ 'ಲಂಡನ್ ಪ್ರೈಡ್' ಬಳಸುವ ಟ್ರೇಡ್ ಮಾರ್ಕ್ ನಮ್ಮ ಬ್ರ್ಯಾಂಡ್ಗಳನ್ನು ಮೋಸಗೊಳಿಸುವ ರೀತಿಯಲ್ಲಿ ಹೋಲುತ್ತವೆ ಎಂದು ಹೈಕೋರ್ಟ್ ಮುಂದೆ ಪೆರ್ನೋಡ್ ರಿಕಾರ್ಡ್ ವಾದಿಸಿತ್ತು. ಆದರೆ, ಜೆಕೆ ಎಂಟರ್‌ಪ್ರೈಸಸ್‌ನ ಟ್ರೇಡ್ಮಾರ್ಕ್ನಲ್ಲಿ ಯಾವುದೇ ಸಾಮ್ಯತೆ ಕಂಡು ಬರುತ್ತಿಲ್ಲ ಎಂದು ಪರಿಗಣಿಸಿ ಈ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿತ್ತು.
ಇದನ್ನೂ ಓದಿ: ಏರು ಧ್ವನಿಯಲ್ಲಿ ವಾದ ಮಂಡಿಸಿದ ವಕೀಲನಿಗೆ ಸಿಜೆಐ ಖಡಕ್ ವಾರ್ನಿಂಗ್