ನವದೆಹಲಿ : ಬಳಕೆದಾರರು ತನ್ನ ಹೊಸ ಗೌಪ್ಯತಾ ನೀತಿ ಒಪ್ಪಿಕೊಳ್ಳಲು ವಿಧಿಸಲಾಗಿದ್ದ ಮೇ 15ರ ಗಡುವನ್ನು ಮುಂದೂಡಿಲ್ಲ ಎಂದು ಮೊಬೈಲ್ ಮೆಸೇಜಿಂಗ್ ಸೇವಾ ಕಂಪನಿ ವಾಟ್ಸ್‌ಆ್ಯಪ್ ಸೋಮವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.
ಬಳಕೆದಾರರನ್ನು ವಿಶ್ವಾಸಕ್ಕೆ ಪಡೆಯಲು ಕಂಪನಿ ಪ್ರಯತ್ನಿಸುತ್ತಿದೆ. ಆದಾಗ್ಯೂ ಅವರು ಗೌಪ್ಯತಾ ನೀತಿ ಒಪ್ಪದಿದ್ದರೆ ಕಂಪನಿಯು ನಿಧಾನವಾಗಿ ಇಂಥ ಬಳಕೆದಾರರ ಖಾತೆಗಳನ್ನು ಅಳಿಸಿ ಹಾಕಲಿದೆ ಎಂದು ಕಂಪನಿ ಪರ ವಕೀಲ ಕಪಿಲ್ ಸಿಬಲ್, ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಮತ್ತು ನ್ಯಾಯಮೂರ್ತಿ ಜ್ಯೋತಿ ಸಿಂಗ್ ಅವರ ನ್ಯಾಯಪೀಠಕ್ಕೆ ತಿಳಿಸಿದರು.
ನ್ಯಾಯಾಲಯದಲ್ಲಿ ಕೇಂದ್ರವನ್ನು ಪ್ರತಿನಿಧಿಸುವ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್ಜಿ) ಚೇತನ್ ಶರ್ಮಾ, ಈ ನೀತಿಯು ಮಾಹಿತಿ ತಂತ್ರಜ್ಞಾನ ಕಾಯ್ದೆ 2000 ಮತ್ತು ಅದರ ನಿಯಮಗಳನ್ನು ಉಲ್ಲಂಘಿಸುತ್ತದೆ ಎಂಬ ಆತಂಕಗಳಿವೆ.
ಕಂಪನಿಯ ಸಿಇಒಗೆ ಸರ್ಕಾರ ಪತ್ರ ಬರೆದಿದ್ದು, ಉತ್ತರಕ್ಕಾಗಿ ಕಾಯುತ್ತಿದೆ ಎಂದು ನ್ಯಾಯಪೀಠಕ್ಕೆ ಮಾಹಿತಿ ನೀಡಿದರು. ನವೀಕರಿಸಿದ ಗೌಪ್ಯತಾ ನೀತಿಯು, ವಾಟ್ಸ್‌ಆ್ಯಪ್ ತನ್ನ ಮೂಲ ಕಂಪನಿ ಫೇಸ್‌ಬುಕ್‌ನೊಂದಿಗೆ ವ್ಯವಹಾರ ಖಾತೆಗಳ ಬಳಕೆದಾರರ ಕುರಿತು ಕೆಲ ಡೇಟಾ ಹಂಚಿಕೊಳ್ಳಲು ಅನುಮತಿಸುತ್ತದೆ ಎಂದು ಶರ್ಮಾ ಹೇಳಿದರು.
ಸಿಬಲ್ ಜೊತೆಗೆ ವಾಟ್ಸ್‌ಆ್ಯಪ್ ಪ್ರತಿನಿಧಿಸುತ್ತಿರುವ ಹಿರಿಯ ವಕೀಲ ಅರವಿಂದ ದಾತಾರ್, ವಕೀಲ ಮನೋಹರ್ ಲಾಲ್ ಅವರ ವಾದಕ್ಕೆ ಆಕ್ಷೇಪಿಸಿದರು. ಗೌಪ್ಯತಾ ನೀತಿಗೆ ಸಮ್ಮತಿಸದ ಬಳಕೆದಾರರಿಗೆ ಅಪ್ಲಿಕೇಶನ್ ಬಳಸಲು ಅನುಮತಿ ಇಲ್ಲ ಎಂದು ಮನೋಹರ್ ಲಾಲ್ ಹೇಳಿದ್ದರು.
"ನಮ್ಮ ಗೌಪ್ಯತೆ ನೀತಿಯು ಐಟಿ ನಿಯಮಗಳನ್ನು ಉಲ್ಲಂಘಿಸುವುದಿಲ್ಲ, ಬೇಕಾದರೆ ಪ್ರತಿ ನಿಯಮವನ್ನು ನೀವು ಪರಿಶೀಲಿಸಬಹುದು" ಎಂದು ದಾತಾರ್ ಹೇಳಿದರು.
ಸದ್ಯ ಹೈಕೋರ್ಟ್ ಈ ವಿಷಯದ ವಿಚಾರಣೆಯನ್ನು ಜೂನ್ 3 ರವರೆಗೆ ಮುಂದೂಡಿದೆ. ಕಂಪನಿಯು ಭಾರತೀಯ ಕಾನೂನಿಗೆ ಅನುಗುಣವಾಗಿ ನಡೆದುಕೊಳ್ಳುತ್ತದೆ ಹಾಗೂ ಹೊಸ ಗೌಪ್ಯತೆ ನೀತಿಗಾಗಿ ಬಳಕೆದಾರರು ತಮ್ಮ ಒಪ್ಪಿಗೆಯನ್ನು ಹಿಂತೆಗೆದುಕೊಂಡರೆ ಕಂಪನಿಯು ಖಾತೆಯನ್ನು ಅಥವಾ ಡೇಟಾವನ್ನು ಅಳಿಸದಂತೆ ಯಥಾಸ್ಥಿತಿಯನ್ನು ಕಾಪಾಡಿಕೊಳ್ಳಬೇಕು ಎಂಬುದಾಗಿ ಕಂಪನಿಯ ವಕೀಲರ ಕಡೆಯಿಂದ ಲಿಖಿತ ಖಾತರಿಯನ್ನು ಪಡೆಯಬೇಕೆಂದು ಸಾಲಿಸಿಟರ್ ಜನರಲ್ ಕೋರ್ಟಿಗೆ ಪ್ರಾರ್ಥಿಸಿದರು.
ವಾಟ್ಸ್‌ಆ್ಯಪ್‌ನ ವಕೀಲರು ಈ ನಿಲುವಿಗೆ ಆಕ್ಷೇಪ ವ್ಯಕ್ತಪಡಿಸಿ, ಅಂಥ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದರು. ವಾಟ್ಸ್‌ಆ್ಯಪ್‌ನ ಹೊಸ ಗೌಪ್ಯತೆ ನೀತಿಯ ವಿರುದ್ಧ ಸೀಮಾ ಸಿಂಗ್ ಮತ್ತು ಕಾನೂನು ವಿದ್ಯಾರ್ಥಿನಿ ಚೈತನ್ಯ ರೋಹಿಲ್ಲಾ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ವೇಳೆ ಈ ಎಲ್ಲ ವಾದ-ವಿವಾದಗಳು ನಡೆದವು.