ನವದೆಹಲಿ: ಫೇಸ್ಬುಕ್ ಒಡೆತನದ ವಾಟ್ಸ್ ಆ್ಯಪ್ ಮತ್ತು ಕೇಂದ್ರ ಸರ್ಕಾರದ ನಡುವಿನ ಖಾಸಗಿತನಕ್ಕೆ ಸಂಬಂಧಿಸಿದ ಸಮರ ಮುಂದುವರೆದಿದೆ. ಗ್ರಾಹಕರ ಖಾಸಗಿ ಮಾಹಿತಿಯ ಗೌಪ್ಯತೆ ಕಾಪಾಡುವುದು ನಮ್ಮ ಡಿಎನ್ಎಯಲ್ಲೇ ಇದೆ. ಹಾಗಾಗಿ, ಭಾರತ ಸೇರಿದಂತೆ ಯಾವುದೇ ಸರ್ಕಾರಗಳು ಕೇಳಿದರೂ ನಾವು 'ಮೂಲ ಮಾಹಿತಿ ಸೃಷ್ಟಿಕರ್ತರ' ಬಗ್ಗೆ ಮಾಹಿತಿ ನೀಡುವುದಕ್ಕೆ ಸಾಧ್ಯವೇ ಇಲ್ಲ ಎಂದು ವಾಟ್ಸ್ ಆ್ಯಪ್ ಹೇಳಿದ್ದು, ಸರ್ಕಾರದ ವಿರುದ್ಧ ಕೋರ್ಟ್ ಮೆಟ್ಟಿಲೇರಿದೆ.
ಏನಿದು ಜಟಾಪಟಿ?
ಹೊಸದಾಗಿ ಜಾರಿಗೆ ತಂದಿರುವ ಮಾಹಿತಿ ಮಾಹಿತಿ ತಂತ್ರಜ್ಞಾನ ಕಾನೂನುಗಳನ್ನು (ಐಟಿ ನಿಯಮ) ಅಳವಡಿಸಿಕೊಳ್ಳುವಂತೆ ಫೇಸ್ಬುಕ್ ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಕೇಂದ್ರ ಸರ್ಕಾರ ಸೂಚಿಸಿತ್ತು. ಇದಕ್ಕಾಗಿ ಮೇ 25 ರ ಗಡುವು ನೀಡಿತ್ತು. ಆದರೆ, ಸರ್ಕಾರದ ಕಾನೂನಿಗೆ ವಿರೋಧ ವ್ಯಕ್ತಪಡಿಸಿದ್ದ ಸಾಮಾಜಿಕ ಮಾಧ್ಯಮಗಳು, ಹೊಸ ನಿಯಮಗಳನ್ನು ಅಳವಡಿಸಿಕೊಂಡಿರಲಿಲ್ಲ. ಇದರಿಂದ ಕುಪಿತಗೊಂಡ ಕೇಂದ್ರ ಸರ್ಕಾರ ಮೇ 26 ರಿಂದ ಫೇಸ್ಬುಕ್, ವಾಟ್ಸ್ ಆ್ಯಪ್, ಇನ್ಸ್ಟಾಗ್ರಾಂ ಆ್ಯಪ್ಗಳನ್ನು ನಿಷೇಧಿಸುವುದಾಗಿ ಎಚ್ಚರಿಕೆ ನೀಡಿತ್ತು. ಸರ್ಕಾರದ ಈ ನಿಯಮ ಪ್ರಶ್ನಿಸಿ ಇದೀಗ ವಾಟ್ಸ್ ಆ್ಯಪ್ ದೆಹಲಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದೆ.
ವಾಟ್ಸ್ ಆ್ಯಪ್ ವಾದ ಏನು?
ಕೇಂದ್ರದ ಹೊಸ ಐಟಿ ನಿಯಮ ಬಳಕೆದಾರರ ಗೌಪ್ಯತೆಯನ್ನು ಉಲ್ಲಂಘಿಸುತ್ತದೆ. ಸ್ನೇಹಿತರೊಂದಿಗೆ ಸಂಪರ್ಕದಲ್ಲಿರಲು, ನೈಸರ್ಗಿಕ ವಿಪತ್ತುಗಳ ಸಮಯದಲ್ಲಿ ಪ್ರಮುಖ ಮಾಹಿತಿಗಳನ್ನು ಹಂಚಿಕೊಳ್ಳಲು ಮತ್ತು ಬೇರ್ಪಟ್ಟ ಕುಟುಂಬಗಳನ್ನು ಒಂದುಗೂಡಿಸಲು ಸೇರಿದಂತೆ ಹಲವು ರೀತಿಯಲ್ಲಿ ವಾಟ್ಸ್ ಆ್ಯಪ್ ಸಹಕಾರಿಯಾಗಿದೆ ಎಂಬುವುದು ಕಂಪನಿಯ ವಾದವಾಗಿದೆ.
ಗ್ರಾಹಕರು ಖಾಸಗಿ ಮಾಹಿತಿಗಳನ್ನು ಹಂಚಿಕೊಳ್ಳುವ ಸಲುವಾಗಿ ಎಂಡ್ ಟು ಎಂಡ್ ಎನ್ಕ್ರಿಪ್ಶನ್ ವ್ಯವಸ್ಥೆಯನ್ನು ನಾವು ಅಭಿವೃದ್ದಿಪಡಿಸಿದ್ದೇವೆ. ಇದು ಗ್ರಾಹಕರ ಖಾಸಗಿ ಮಾಹಿತಿಗಳು, ಫೋಟೋ, ವಿಡಿಯೋ, ಆಡಿಯೋ, ಡಾಕ್ಯುಮೆಂಟ್ಗಳು ಬೇರೆಯವರ ಕೈಗೆ ಸಿಗದಂತೆ ಭದ್ರವಾಗಿ ಕಾಪಾಡುತ್ತದೆ. ಹಾಗಾಗಿ, ಗ್ರಾಹಕರ ಗೌಪ್ಯ ಮಾಹಿತಿ ಸರ್ಕಾರಕ್ಕೆ ನೀಡಲು ನಾವು ಸಿದ್ದರಿಲ್ಲ ಎಂದು ವಾಟ್ಸ್ ಆ್ಯಪ್ ಹೇಳಿದೆ.
ಸರ್ಕಾರದ ವಾದ ಏನು?
ಸರ್ಕಾರ ವಿರುದ್ಧದ ಮಾಹಿತಿಗಳು, ಸಮಾಜಘಾತುಕ ಕೃತ್ಯಗಳನ್ನು ಪ್ರೇರೇಪಿಸುವ ಮತ್ತು ಅಶ್ಲೀಲ ಮಾಹಿತಿಗಳ ಮೂಲ ಸೃಷ್ಟಿಕರ್ತರ ಬಗ್ಗೆ ನಾವು ಕೇಳಿದಾಗ ಮಾಹಿತಿ ನೀಡಬೇಕು ಎಂಬುವುದು ಸರ್ಕಾರದ ವಾದ. ಇದಕ್ಕಾಗಿ ಕಂಪನಿಯಲ್ಲಿ ಪ್ರತ್ಯೇಕ ವಿಭಾಗ ತೆರೆಯುವಂತೆಯು ಸರ್ಕಾರ ವಾಟ್ಸ್ ಆ್ಯಪ್ ಸೇರಿದಂತೆ ಸಾಮಾಜಿಕ ಮಾಧ್ಯಮಗಳಿಗೆ ಸೂಚಿಸಿದೆ. ಆದರೆ, ಇದನ್ನು ಒಪ್ಪಿಕೊಳ್ಳಲು ಸಾಮಾಜಿ ಮಾಧ್ಯಮಗಳು ತಯಾರಿಲ್ಲ.