ಕೋಲ್ಕತ್ತಾ (ಪಶ್ಚಿಮ ಬಂಗಾಳ): ಯಾಸ್ ಚಂಡಮಾರುತದ ನಡುವೆ ಪರಿಹಾರ ಕೇಂದ್ರಗಳನ್ನ ತೆರೆದು ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದ ಜನರನ್ನು ಒಂದೆಡೆ ಸೇರಿಸಿ ಎಂಬ ಬಿಜೆಪಿ ನಾಯಕರ ವಾಟ್ಸ್ಆ್ಯಪ್ ಚಾಟ್ ಇದೀಗ ವೈರಲ್ ಆಗಿದ್ದು, ಪಶ್ಚಿಮ ಬಂಗಾಳದಲ್ಲಿ ಹೊಸ ವಿವಾದ ಸೃಷ್ಟಿಸಿದೆ.
ಯಾಸ್ ಚಂಡಮಾರುತ ಪೀಡಿತರನ್ನು ಪರಿಹಾರ ಕೇಂದ್ರಕ್ಕೆ ಸೇರಿಸಿ ಆ ಮೂಲಕ ಕೊರೊನಾ ಹರಡುವ ಸಾಧ್ಯತೆ ಹೆಚ್ಚಾಗುತ್ತದೆ. ಇದು ಸರ್ಕಾರಕ್ಕೆ ಸಮಸ್ಯೆ ತಂದೊಡ್ಡಲಿದೆ ಎಂಬ ವಾಟ್ಸ್ಆ್ಯಪ್ ಚಾಟ್ಗಳು ಹರಿದಾಡುತ್ತಿದ್ದು, ಎಲ್ಲೆಡೆ ವಿರೋಧ ಕೇಳಿ ಬಂದಿದೆ.
ಈ ಗ್ರೂಪಿನಲ್ಲಿ ಬಿಜೆಪಿ ಪ್ರಮುಖ ನಾಯಕರು ಸಹ ಇದ್ದು, ಶಾಸಕರು, ಸಂಸದರು ಸೇರಿದ್ದಾರೆ ಎಂದು ಟಿಎಂಸಿ ಬಲವಾಗಿ ಆರೋಪಿಸಿದೆ. ಗ್ರೂಪ್ನಲ್ಲಿ ವಿದ್ಯಾಸಾಗರ್ ಚಕ್ರವರ್ತಿ ಎಂಬ ಹೆಸರಿನಿಂದ ಮೆಸೇಜ್ ಮಾಡಲಾಗಿದ್ದು, ಪರಿಹಾರ ಕೇಂದ್ರಗಳಿಗೆ ಜನರನ್ನು ಪುನರ್ವಸತಿ ಮಾಡುವುದು ಒಳ್ಳೆಯದು.
ಯಾಕೆಂದರೆ, ಒಂದು ನಿರ್ದಿಷ್ಟ ಜಾಗದಲ್ಲಿ ಹೆಚ್ಚು ಜನರು ತುಂಬಿಕೊಳ್ಳುವುದರಿಂದ ಕೋವಿಡ್ ಹರಡುವ ಸಾಧ್ಯತೆ ಹೆಚ್ಚು. ಇದು ಸರ್ಕಾರಕ್ಕೆ ಸಮಸ್ಯೆಯಾಗಲಿದೆ ಎಂದಿದ್ದಾರೆ.
ಇನ್ನೊಂದು ಎಂಪಿ ಜ್ಯೋತಿರ್ಮೋಯಾದ ಹೆಸರಿನಿಂದ, ಮಾಧ್ಯಮಗಳಿಗೆ ಈ ಮಾಹಿತಿ ತಲುಪಿಸಲು ನಾನು ಕೇಂದ್ರ ಸರ್ಕಾರವನ್ನು ಕೇಳುತ್ತೇನೆ. ಈ ಬಗ್ಗೆ ಹೆಚ್ಚಿನ ಫೋಟೋ, ವಿಡಿಯೋ ಸೆರೆ ಹಿಡಿಯಲು ನಮ್ಮ ಕಾರ್ಯಕರ್ತರಿಗೆ ತಿಳಿಸಬೇಕಾಗಿದೆ ಎಂದಿರುವ ಮೆಸೇಜ್ ಬಂದಿದೆ.
ಈ ಚಾಟ್ಗಳು ವೈರಲ್ ಆಗುತ್ತಿದ್ದು, ಟಿಎಂಸಿ ನಾಯಕರು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಚುನಾವಣೆಯಲ್ಲಿ ಸೋತಿದೆ ಮತ್ತು ಈಗ ಆ ಪಕ್ಷದ ನಾಯಕರು ಪಶ್ಚಿಮ ಬಂಗಾಳದಲ್ಲಿ ಇಂತಹ ಚಟುವಟಿಕೆಗಳನ್ನು ಯೋಜಿಸುತ್ತಿದ್ದಾರೆ.
ಆದ್ದರಿಂದ ಹೇಗಾದರೂ ಮಾಡಿ ಸರ್ಕಾರವನ್ನು ಕೆಡವಲು ನಿರ್ಧರಿಸಿದ್ದಾರೆ ಎಂದು ಪುರುಲಿಯಾ ಜಿಲ್ಲೆಯ ಟಿಎಂಸಿ ವಕ್ತಾರನ ಬೆಂಡು ಮಹಾಲಿ ಹೇಳಿದ್ದಾರೆ.
ಆದರೆ, ಈ ಗ್ರೂಪ್ ಅಧಿಕೃತವಾಗಿ ಬಿಜೆಪಿಗೆ ಸೇರಿದೆಯೇ ಎಂಬುದು ತಿಳಿದು ಬಂದಿಲ್ಲ. ಅಲ್ಲದೆ ಈ ಆರೋಪವನ್ನು ಬಿಜೆಪಿ ಶಾಸಕ ನರಹರಿ ಮಹತೋ ನಿರಾಕರಿಸಿದ್ದಾರೆ.