ಹೈದರಾಬಾದ್ : ಪ್ರತಿಪಕ್ಷ ನಾಯಕರ ಮೇಲೆ ಕೇಂದ್ರ ಸರ್ಕಾರವು ಐಟಿ, ಇಡಿ, ಸಿಬಿಐ ದಾಳಿ ನಡೆಸುತ್ತಿದೆ ಎಂದು ಬಿಆರ್‌ಎಸ್ ಕಾರ್ಯಾಧ್ಯಕ್ಷ ಹಾಗೂ ಸಚಿವ ಕೆಟಿ ರಾಮ್ರಾವ್ ಆರೋಪಿಸಿದ್ದಾರೆ. ಇಲ್ಲಿನ ತೆಲಂಗಾಣ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಇಡಿ, ಸಿಬಿಐ, ಐಟಿ ಇಲಾಖೆಗಳು ಬಿಜೆಪಿ ನಾಯಕರ ವಿರುದ್ಧ ದಾಖಲಿಸಿರುವ ಒಂದು ಪ್ರಕರಣವನ್ನು ತೋರಿಸಬಹುದೇ? ಎಂದು ಸವಾಲು ಹಾಕಿದರು.
ಈ ವೇಳೆ ಪ್ರಧಾನಿ ಮೋದಿ, ಬಿಜೆಪಿ ಧೋರಣೆ ವಿರುದ್ಧ ವಾಗ್ದಾಳಿ ನಡೆಸಿದ ಅವರು, ತಮ್ಮ ಪಕ್ಷದ ಎಂಎಲ್‌ಸಿ ಕವಿತಾ ಅವರು ಕಾನೂನನ್ನು ಗೌರವಿಸುತ್ತಾರೆ. ಇಡಿ ತನಿಖೆಯನ್ನು ಪರಿಣಾಮಕಾರಿಯಾಗಿ ಎದುರಿಸುತ್ತಾರೆ ಎಂದು ಹೇಳಿದರು. ಬಿಆರ್‌ಎಸ್ ನಾಯಕರ ಮೇಲೆ ಕೇಂದ್ರ ಸಂಸ್ಥೆಗಳು ದಾಳಿ ಮಾಡುತ್ತಿವೆ. ನಮ್ಮ ಪಕ್ಷದ ಒಟ್ಟು 12 ನಾಯಕರ ವಿರುದ್ಧ ಸಿಬಿಐ ಮತ್ತು ಇಡಿ ದಾಳಿ ನಡೆಸಲಾಗಿದೆ. ಇವು ಇಡಿ ಸಮನ್ಸ್ ಅಲ್ಲ. ಮೋದಿ ಸಮನ್ಸ್ ಎಂದು ಕಿಡಿಕಾರಿದರು. ಇನ್ನು ಕೇಂದ್ರ ಸರ್ಕಾರವು ಪ್ರತಿಪಕ್ಷಗಳ ಮೇಲೆ ಕೇಸುಗಳ ದಾಖಲಿಸುವ ಮೂಲಕ ಜೊತೆಗೆ ಜನರ ಮೇಲೆ ಬೆಲೆ ಏರಿಕೆ ಮೂಲಕ ಹೈರಾಣಾಗಿಸಿದೆ ಎಂದು ಹೇಳಿದರು. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ 9 ವರ್ಷಗಳ ಆಡಳಿತಾವಧಿಯಲ್ಲಿ 9 ರಾಜ್ಯಗಳಲ್ಲಿ ಸರ್ಕಾರಗಳು ಉರುಳಿದವು ಎಂದು ಅವರು ಹೇಳಿದರು.
ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, ಗೌತಮ್ ಅದಾನಿ ಮೋದಿಯ ಬೇನಾಮಿಯಾಗಿದ್ದಾರೆ. ಇನ್ನು ಕೈಗಾರಿಕೋದ್ಯಮಿ ಗೌತಮ್ ಅದಾನಿ ಮತ್ತು ಮೋದಿ ನಡುವಿನ ಗಾಢ ಗೆಳೆತನ ಎಲ್ಲರಿಗೂ ಗೊತ್ತಿದೆ. ಅದಾನಿ ಯಾರು ಎಂದು ಚಿಕ್ಕ ಹುಡುಗನನ್ನು ಕೇಳಿದರೆ ಆತನೂ ಅದಾನಿ ಬಗ್ಗೆ ಹೇಳುತ್ತಾನೆ. ಅದಾನಿ ಒಡೆತನದ ಮುಂದ್ರಾ ಬಂದರಿನಲ್ಲಿ 21 ಸಾವಿರ ಕೋಟಿ ರೂ.ಗಳ ಡ್ರಗ್ಸ್ ಪತ್ತೆಯಾಗಿದ್ದರೂ ಅದಾನಿ ವಿರುದ್ಧ ಏಕೆ ಕ್ರಮ ಕೈಗೊಳ್ಳಲಿಲ್ಲ ಎಂದು ಪ್ರಶ್ನಿಸಿದರು.
ಕೇಂದ್ರ ಸರ್ಕಾರ ಡಬಲ್ ಇಂಜಿನ್ ಸರ್ಕಾರವನ್ನು ವ್ಯಂಗ್ಯವಾಡಿದ ಅವರು, ಡಬಲ್ ಇಂಜಿನ್ ಸರ್ಕಾರದಲ್ಲಿ ಒಂದು ಎಂಜಿನ್ ಮೋದಿ. ಮತ್ತೊಂದು ಎಂಜಿನ್ ಅದಾನಿ ಎಂದರು. ಇದು ಜಿ to ಜಿ ಎಂದರೆ ಸರ್ಕಾರದಿಂದ ಸರ್ಕಾರಕ್ಕೆ ಎಂದಲ್ಲ. ಜಿ to ಜಿ ಎಂದರೆ ಗೌತಮ್ ಅದಾನಿ ಗೊಟಾಬಯ ಡೀಲ್ ಎಂದು ಶ್ರೀಲಂಕಾದ ಪ್ರತಿನಿಧಿ ಹೇಳಿರುವುದನ್ನು ಉಲ್ಲೇಖಿಸಿದರು. ಅಷ್ಟೇ ಅಲ್ಲದೆ ಅದಾನಿ ವಿರುದ್ಧದ ಪ್ರಕರಣಗಳು ಏನಾಯಿತು. ಅದಾನಿ ವಿರುದ್ಧ ಶ್ರೀಲಂಕಾ ಮಾಡಿರುವ ಆರೋಪಗಳಿಗೆ ಉತ್ತರ ನೀಡಬೇಕು ಎಂದು ಕೆಟಿಆರ್ ಆಗ್ರಹಿಸಿದರು.
ಇನ್ನು ಕರ್ನಾಟಕದಲ್ಲಿ ಬಿಜೆಪಿ ಶಾಸಕರ ಮಗನಲ್ಲಿ ಹಣ ಪತ್ತೆಯಾದರೂ ಇಡಿ ಅವರ ವಿರುದ್ಧ ಹೋಗುವುದಿಲ್ಲ. ಅಲ್ಲದೇ ಕೆಲವರು ಬಿಜೆಪಿ ಸೇರಿದ ನಂತರ ಅವರ ಮೇಲಿನ ಪ್ರಕರಣಗಳು ಕಣ್ಮರೆಯಾಗುತ್ತಿವೆ ಎಂದು ಕೆಟಿಆರ್ ಆರೋಪಿಸಿದರು.
ಯಾವುದೇ ತನಿಖೆಯನ್ನು ಧೈರ್ಯವಾಗಿ ಎದುರಿಸುತ್ತೇನೆ : ಬಿಜೆಪಿಯನ್ನು ಪ್ರಶ್ನಿಸುವ ವಿರೋಧ ಪಕ್ಷಗಳ ನಾಯಕರ ಮೇಲೆ ತನಿಖಾ ಸಂಸ್ಥೆಗಳು ದಾಳಿ ನಡೆಸುತ್ತಿವೆ ಎಂದು ಬಿಆರ್‌ಎಸ್ ಎಂಎಲ್‌ಸಿ ಕೆ ಕವಿತಾ ಆರೋಪಿಸಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಮ್ಮ ಪಕ್ಷದ ಸಚಿವರು, ಸಂಸದರು, ಶಾಸಕರನ್ನು ಕೇಂದ್ರ ಸರ್ಕಾರ ಟಾರ್ಗೆಟ್ ಮಾಡಿ ತನಿಖಾ ಸಂಸ್ಥೆಗಳಿಂದ ದಾಳಿ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಧರಣಿಗೆ ದೆಹಲಿ ಪೊಲೀಸರ ನಿರಾಕರಣೆ : ವಿಧಾನಸಭೆಯಲ್ಲಿ ಶೇ.33ರಷ್ಟು ಮಹಿಳಾ ಮೀಸಲಾತಿ ಮಸೂದೆಗಾಗಿ ಎಂಎಲ್‌ಸಿ ಕವಿತಾ ಅವರ ಪ್ರತಿಭಟನೆಗೆ ದೆಹಲಿ ಪೊಲೀಸರು ಅನುಮತಿ ನೀಡಲು ನಿರಾಕರಿಸಿದ್ದಾರೆ. ಶುಕ್ರವಾರ ದೆಹಲಿಯ ಜಂತರ್ ಮಂತರ್‌ನಲ್ಲಿ ಧರಣಿ ನಡೆಸಲು ನಿರ್ಧರಿಸಲಾಗಿತ್ತು. ಆದರೆ ಪೊಲೀಸರು ಧರಣಿಗೆ ಅನುಮತಿ ನೀಡಲು ನಿರಾಕರಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಎಂಎಲ್‌ಸಿ ಕವಿತಾ ಧರಣಿ ನಡೆಸುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ : ದೆಹಲಿ ಅಬಕಾರಿ ನೀತಿ ಹಗರಣ: ಕೆಸಿಆರ್ ಪುತ್ರಿ ಕವಿತಾ ನಿವಾಸಕ್ಕೆ ಬಂದ ಸಿಬಿಐ ಅಧಿಕಾರಿಗಳು