ನವದೆಹಲಿ: ದೇಶದಲ್ಲಿ ಮಹಿಳೆಯರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಆರೋಪಿಗಳಿಗೆ ಜಾಮೀನು ನೀಡುವ ವೇಳೆ ಹಾಕುವ ಷರತ್ತುಗಳ ಬಗ್ಗೆ ಹಾಗೂ ಲಿಂಗ ಸಮಾನತೆಯನ್ನು ಉತ್ತೇಜಿಸಲು ಕೆಲವೊಂದು ಶಿಫಾರಸುಗಳನ್ನು ಮಾಡುವಂತೆ ಸುಪ್ರೀಂಕೋರ್ಟ್ ಸೂಚಿಸಿದೆ.
ಮಧ್ಯಪ್ರದೇಶ ಹೈಕೋರ್ಟ್ ಲೈಂಗಿಕ ಕಿರುಕುಳದ ಆರೋಪಿಗೆ ಸಂತ್ರಸ್ತೆಯಿಂದ ರಾಖಿ ಕಟ್ಟುವಂತೆ ಆದೇಶಿಸಿದ್ದರ ಬಗ್ಗೆ ವಿಚಾರಣೆ ವೇಳೆ ಅಟಾರ್ನಿ ಜನರಲ್ ಕೆ.ಕೆ.ವೇಣುಗೋಪಾಲ್ ಹಾಗೂ ವಕೀಲರಿಗೆ ಸುಪ್ರೀಂಕೋರ್ಟ್ ಸೂಚನೆ ನೀಡಿದೆ.
ರಾಖಿ ಕಟ್ಟುವಂತೆ ಆರೋಪಿಗಳಿಗೆ ಷರತ್ತು ವಿಧಿಸುವುದು ‘ನಾಟಕ' ಎನಿಸುವುದರ ಜೊತೆಗೆ ಖಂಡನೀಯ ಎಂದಿರುವ ಅಟಾರ್ನಿ ಜನರಲ್, ದೌರ್ಜನ್ಯ ಪ್ರಕರಣಗಳಲ್ಲಿ ನ್ಯಾಯಮೂರ್ತಿಗಳಲ್ಲಿ ಅರಿವು ಮೂಡಿಸುವ ಅಗತ್ಯವಿದೆ ಎಂದರು.
ಇದರ ಜೊತೆಗೆ ಲಿಂಗ ಸಂವೇದನೆ ವಿಷಯವು ನ್ಯಾಯಮೂರ್ತಿಗಳ ನೇಮಕಾತಿ ಪರೀಕ್ಷೆಯ ಭಾಗವಾಗಿರಬೇಕು ಎಂದು ವೇಣುಗೋಪಾಲ್ ಹೇಳಿದ್ದು, ನ್ಯಾಯಾಂಗ ಅಕಾಡೆಮಿಗಳು ಈ ಬಗ್ಗೆ ಜಾಗೃತಿ ಮೂಡಿಸಬೇಕೆಂದು ಸುಪ್ರೀಂಕೋರ್ಟ್ಗೆ ಮನವಿ ಮಾಡಿದರು.
ಸದ್ಯಕ್ಕೆ ಸುಪ್ರೀಂಕೋರ್ಟ್ ಈ ಪ್ರಕರಣದ ವಿಚಾರಣೆಯನ್ನು ನವೆಂಬರ್ 27ಕ್ಕೆ ನಿಗದಿಪಡಿಸಿದೆ.