ನವದೆಹಲಿ: ಪ್ರಧಾನಮಂತ್ರಿಯವರು ರಾಜ್ಯಸಭೆಯಲ್ಲಿ ಭಾಷಣ ಮಾಡುವ ವೇಳೆ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ವಿರೋಧ ಪಕ್ಷವಾದ ಕಾಂಗ್ರೆಸ್ ಬಡವರಿಗೆ ಸಹಾಯ ಮಾಡಲು ಅಥವಾ ಅದರ ಭರವಸೆಗಳನ್ನು ಈಡೇರಿಸಲು ಪ್ರಯತ್ನಿಸಿಲ್ಲ ಎಂದು ಆರೋಪಿಸಿದ್ದಾರೆ.
ಕಾಂಗ್ರೆಸ್ ಪಕ್ಷದ ಅಸ್ತಿತ್ವವು ದೇಶದ ಪ್ರಜಾಪ್ರಭುತ್ವಕ್ಕೆ ಅಪಾಯವನ್ನುಂಟು ಮಾಡುತ್ತದೆ ಎಂದಿರುವ ಪ್ರಧಾನಿ ಮೋದಿ ಕಾಂಗ್ರೆಸ್‌ನಂತಹ ಪಕ್ಷಗಳು ದೇಶವನ್ನು ನೋಯಿಸುವ ರಾಜವಂಶದ ರಾಜಕಾರಣವನ್ನು ಅನುಸರಿಸುತ್ತಿವೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ರಾಹುಲ್ ಗಾಂಧಿಯವರ 'ರಾಜ್ಯಗಳ ಒಕ್ಕೂಟ' ಹೇಳಿಕೆಗೆ ಪ್ರತ್ಯುತ್ತರ ನೀಡಿದ ಪ್ರಧಾನಿ ಮೋದಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಅನ್ನು "ಕಾಂಗ್ರೆಸ್ ಒಕ್ಕೂಟ" ಎಂದು ಮರುನಾಮಕರಣ ಮಾಡಬೇಕು ಎಂದು ವ್ಯಂಗ್ಯ ಮಿಶ್ರಿತವಾಗಿ ಹೇಳಿದರು.
ಕಾಂಗ್ರೆಸ್ ಇಲ್ಲದಿದ್ದರೆ ತುರ್ತು ಪರಿಸ್ಥಿತಿ ಇರುತ್ತಿರಲಿಲ್ಲ. ಜಾತಿ ರಾಜಕಾರಣ ಇರುತ್ತಿರಲಿಲ್ಲ. ಸಿಖ್ಖರನ್ನು ಎಂದಿಗೂ ಕಗ್ಗೊಲೆ ಮಾಡುತ್ತಿರಲಿಲ್ಲ. ಸಮಸ್ಯೆಗಳು ಕಾಶ್ಮೀರಿ ಪಂಡಿತರ ಸ್ಥಿತಿ ಹೀಗಾಗುತ್ತಿರಲಿಲ್ಲ ಎಂದು ಕಾಂಗ್ರೆಸ್ ವಿರುದ್ಧ ಮೋದಿ ಹರಿಹಾರಿಯ್ದರು.
ಭಾರತ ಪ್ರಜಾಪ್ರಭುತ್ವದ ತಾಯಿ. ಶತಮಾನಗಳಿಂದ ಭಾರತದಲ್ಲಿ ಪ್ರಜಾಪ್ರಭುತ್ವ, ಚರ್ಚೆ ನಡೆಯುತ್ತಿದೆ. ಕಾಂಗ್ರೆಸ್ನ ಸಮಸ್ಯೆ ಎಂದರೆ ಅವರು ರಾಜವಂಶದ ಹೊರತಾಗಿ ಏನನ್ನೂ ಯೋಚಿಸಲಿಲ್ಲ ಎಂದು ಮೋದಿ ಹೇಳಿದರು.
ಸದನದಿಂದ ಹೊರನಡೆದ ಕಾಂಗ್ರೆಸ್: ಮೋದಿ ಭಾಷಣದ ವೇಳೆ ಕಾಂಗ್ರೆಸ್ ಸದಸ್ಯರು ಸದನದಿಂದ ಹೊರನಡೆದಿದ್ದು, ರಾಷ್ಟ್ರಪತಿಗಳ ಭಾಷಣದ ಬದಲು ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದ ಕಾರಣಕ್ಕೆ ನಾವು ಪ್ರಧಾನಿ ಭಾಷಣದಿಂದ ಹೊರನಡೆದಿದ್ದೇವೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.