ಹೈದರಾಬಾದ್: ಪಶ್ಚಿಮ ಬಂಗಾಳದ 294 ವಿಧಾನಸಭೆ ಕ್ಷೇತ್ರಗಳಿಗೆ 8 ಹಂತಗಳಲ್ಲಿ ಮತದಾನ ನಡೆಯುತ್ತಿದ್ದು, ಈಗಾಗಲೇ 4 ಹಂತದ ಮತದಾನ ಮುಕ್ತಾಯಗೊಂಡಿದೆ. ನಾಳೆ 5ನೇ ಹಂತದ ಚುನಾವಣೆ ನಡೆಯಲಿದ್ದು, ಪ್ರಚಾರ ಕಾರ್ಯಕ್ಕೆ ತೆರೆಬಿದ್ದಿದೆ.
ಇದೀಗ 5ನೇ ಹಂತದಲ್ಲಿ ಘಟಾನುಘಟಿ ನಾಯಕರ ಭವಿಷ್ಯ ನಿರ್ಧಾರವಾಗಲಿದ್ದು, ಕೋವಿಡ್ ನಡುವೆ ಮತದಾನ ಪ್ರಮಾಣ ಕಡಿಮೆಯಾಗುವ ಭೀತಿ ಸಹ ಎದುರಾಗಿದೆ. ಒಟ್ಟು 319 ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು 57,23,766 ಪುರುಷರು, 56,11,354 ಮಹಿಳೆಯರು ಮತ್ತು ಇತರ ಲಿಂಗಗಳ 224 ಮಂದಿ ಸೇರಿದಂತೆ ಒಟ್ಟು 1,13,35,344 ಮತದಾರರು ಮತ ಚಲಾಯಿಸಲಿದ್ದಾರೆ.
6 ಜಿಲ್ಲೆಗಳಲ್ಲಿ ಒಟ್ಟು 15,789 ಮತಕೇಂದ್ರಗಳು ಸಿದ್ದಗೊಂಡಿದ್ದು, ಒಟ್ಟಾರೆ 319 ಅಭ್ಯರ್ಥಿಗಳ ಪೈಕಿ 218 ಪುರುಷ ಹಾಗೂ 38 ಮಂದಿ ಮಹಿಳಾ ಅಭ್ಯರ್ಥಿಗಳಾಗಿದ್ದಾರೆ. ಒಟ್ಟು 45 ಕ್ಷೇತ್ರಗಳ ಪೈಕಿ 9 ಕ್ಷೇತ್ರಗಳು ರೆಡ್ ಅಲರ್ಟ್ ಕ್ಷೇತ್ರ ಎಂದು ಘೋಷಿಸಲಾಗಿದ್ದು, 3 ಅಥವಾ ಅದಕ್ಕಿಂತ ಹೆಚ್ಚಿನ ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆ ಉಳ್ಳವರಾಗಿದ್ದಾರೆ. ಇದರಲ್ಲಿ ಬಿಜೆಪಿಯ 28 ಅಭ್ಯರ್ಥಿಗಳು ಕ್ರಿಮಿನಲ್ ಹಿನ್ನೆಲೆಯುಳ್ಳವರಾಗಿದ್ದಾರೆ.
ಇತ್ತ ಡಾರ್ಜಿಲಿಂಗ್ ಜಿಲ್ಲೆಯ 23 ಅಸೆಂಬ್ಲಿ ಕ್ಷೇತ್ರ ಮತ್ತು ನಾಡಿಯಾ ಜಿಲ್ಲೆಯ 92 ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಸಿಬ್ಬಂದಿ ಮತಯಂತ್ರಗಳ ಸಾಗಿಸುವಲ್ಲಿ ನಿರತರಾಗಿದ್ದಾರೆ. ಅಲ್ಲದೇ ರಾಜ್ಯದ ಇತರ ಕೇಂದ್ರಗಳಿಗೂ ಸಿಬ್ಬಂದಿ ತೆರಳಿದ್ದಾರೆ.
ಇನ್ನು ಮತದಾನ ಪ್ರಕ್ರಿಯೆ ವೇಳೆ ಯಾವುದೇ ಅಹಿತಕರ ಘಟನೆ ನಡೆದಂತೆ ಚುನಾವಣಾ ಆಯೋಗ ಕಟ್ಟೆಚ್ಚರ ವಹಿಸಲು ಸೂಚಿಸಿದ್ದು, ಭದ್ರತಾ ಪಡೆಗಳು ನಿಯೋಜನೆ ಮಾಡಿದೆ.