ಕೋಲ್ಕತ್ತಾ(ಪಶ್ಚಿಮ ಬಂಗಾಳ): ಶಿಕ್ಷಣ ಪ್ರತಿಯೊಬ್ಬ ಮಗುವಿನ ಮೂಲಭೂತ ಹಕ್ಕು. ಅದಕ್ಕೆ ಬೇಕಾಗಿರುವ ಅಗತ್ಯ ಮೂಲಭೂತ ಸೌಲಭ್ಯ ಒದಗಿಸಬೇಕಾಗಿರುವುದು ಸರ್ಕಾರದ ಕರ್ತವ್ಯ. ಆದರೆ, ಪಶ್ಚಿಮ ಬಂಗಾಳದಲ್ಲಿ ಶಾಕಿಂಗ್ ನ್ಯೂಸ್ವೊಂದು ಹೊರಬಿದ್ದಿದೆ. ಕಳೆದ 10 ವರ್ಷಗಳ ಅವಧಿಯಲ್ಲಿ ದಾಖಲೆಯ 7 ಸಾವಿರಕ್ಕೂ ಅಧಿಕ ಸರ್ಕಾರಿ ಪ್ರಾಥಮಿಕ ಶಾಲೆಗಳು ಬಂದ್ ಆಗಿವೆ. ಇದಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳ ಶಿಕ್ಷಣ ಇಲಾಖೆ ಅಂಕಿ-ಅಂಶ ಬಹಿರಂಗಪಡಿಸಿದೆ.
ಕಳೆದ 10 ವರ್ಷಗಳಲ್ಲಿ 7,018 ಸರ್ಕಾರಿ ಪ್ರಾಥಮಿಕ ಶಾಲೆಗಳು ಮುಚ್ಚಿವೆ. ಅಂಕಿ-ಅಂಶಗಳ ಪ್ರಕಾರ, ಮಾರ್ಚ್ 31, 2012ರಲ್ಲಿ ಪಶ್ಚಿಮ ಬಂಗಾಳದಲ್ಲಿ 74,717 ಸರ್ಕಾರಿ ಶಾಲೆಗಳಿದ್ದವು. ಆದರೆ, ಮಾರ್ಚ್ 31, 2022ರ ಹೊತ್ತಿಗೆ ಅವುಗಳ ಸಂಖ್ಯೆ 67,699ಕ್ಕೆ ಇಳಿಕೆಯಾಗಿದೆ. ಮುಖ್ಯವಾಗಿ ದಕ್ಷಿಣ 24 ಪರಗಣ ಜಿಲ್ಲೆಯಲ್ಲಿ ಹೆಚ್ಚಿನ ಶಾಲೆಗಳು ಬಂದ್ ಆಗಿವೆ. ಇಲ್ಲಿ ಒಟ್ಟು 1,192 ಶಾಲೆಗಳನ್ನ ಮುಚ್ಚಲಾಗಿದೆ. ಉಳಿದಂತೆ ಪಶ್ಚಿಮ ಮಿಡ್ನಾಪುರದಲ್ಲಿ ಶಾಲೆಗಳ ಸಂಖ್ಯೆ 8,404ರಿಂದ 7,357ಕ್ಕೆ ಇಳಿದಿದೆ.
ಸರ್ಕಾರಿ ಶಾಲೆಗಳ ಸಂಖ್ಯೆಯಲ್ಲಿ ಗಣನೀಯವಾದ ಇಳಿಕೆ ಕಂಡು ಬಂದಿರುವ ಕಾರಣ ಅಲ್ಲಿಗೆ ದಾಖಲಾಗುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಯಲ್ಲೂ ಕುಸಿತ ಕಂಡಿದೆಯಂತೆ. ಮಾರ್ಚ್ 31, 2012ರಲ್ಲಿ 78,04,684 ಹೊಂದಿದ್ದ ವಿದ್ಯಾರ್ಥಿಗಳ ಸಂಖ್ಯೆ ಇದೀಗ 71,95,728ಕ್ಕೆ ಇಳಿದಿದೆ.
10 ವರ್ಷದ ಅಂತರದಲ್ಲಿ ಪ್ರಾಥಮಿಕ ಶಾಲೆಗಳ ಸಂಖ್ಯೆ ಗಣನೀಯವಾಗಿ ಇಳಿಕೆಯಾಗಲು ಮುಖ್ಯ ಕಾರಣ ಹಣಕಾಸು. ರಾಜ್ಯ ಸರ್ಕಾರ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಸರಿಯಾಗಿ ಅನುದಾನ ನೀಡದ ಕಾರಣ ಈ ಸಮಸ್ಯೆ ಕಾಣಿಸಿಕೊಂಡಿದೆಯಂತೆ. ರಾಜ್ಯದ ಅನೇಕ ಪ್ರಾಥಮಿಕ ಶಾಲೆಗಳಲ್ಲಿ ಒಬ್ಬರೇ ಶಿಕ್ಷಕರಿದ್ದಾರೆ. ಬಹುತೇಕ ಶಾಲೆಗಳಲ್ಲಿ ಶಿಕ್ಷಕರು ನಿವೃತ್ತರಾದ ಬಳಿಕ ಹೊಸ ನೇಮಕಾತಿ ಮಾಡದ ಕಾರಣ ನೂರಾರು ಶಾಲೆಗಳು ಮುಚ್ಚಿವೆ ಎಂದು ಶಿಕ್ಷಕರ ಸಂಘದ ಅಧ್ಯಕ್ಷ ದೇಬಾಶಿಶ್ ದತ್ತಾ ತಿಳಿಸಿದ್ದಾರೆ.