ಕೋಲ್ಕತಾ: ಬಿಜೆಪಿ ಕುತಂತ್ರದಿಂದ ಸಂಪಾದಿಸಿದ ಹಣದಿಂದ ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಉರುಳಿಸುತ್ತಿದೆ ಎಂದು ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಆಕ್ರೋಶ ವ್ಯಕ್ತಪಡಿಸಿದರು. ಕೋಲ್ಕತ್ತಾದಲ್ಲಿ ಪಕ್ಷದ ವಿದ್ಯಾರ್ಥಿ ವಿಭಾಗದಿಂದ ನಡೆದ ರ್ಯಾಲಿಯಲ್ಲಿ ಪಾಲ್ಗೊಂಡು ಮಾತನಾಡುತ್ತಾ ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಟೀಕೆಗಳ ಸುರಿಮಳೆಗೈದರು.
"ಬಿಜೆಪಿ ನಾಯಕರು ಭೇಟಿ ಪಡಾವೋ ಭೇಟಿ ಬಚಾವೋ ಬಗ್ಗೆ ಮಾತನಾಡ್ತಾರೆ. ಆದ್ರೆ ಅವರದ್ದೇ ಸರ್ಕಾರ ಬಿಲ್ಕಿಸ್ ಬಾನೋ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಬಂಧಿತರಾದ ಆರೋಪಿಗಳನ್ನು ಬಿಡುಗಡೆ ಮಾಡಿದ್ದಾರೆ" ಎಂದು ಲೇವಡಿ ಮಾಡಿದರು. ಅವರು ಚುನಾಯಿತ ಸರ್ಕಾರಗಳನ್ನು ಉರುಳಿಸಲು ಕಪ್ಪು ಹಣ ಮತ್ತು ಕೇಂದ್ರೀಯ ತನಿಖಾ ದಳಗಳನ್ನು ಬಳಸುತ್ತಿದ್ದಾರೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಸರ್ಕಾರವನ್ನು ಸೋಲಿಸುವುದಾಗಿ ಮಮತಾ ಬ್ಯಾನರ್ಜಿ ಇದೇ ವೇಳೆ ಶಪಥಗೈದರು.
ಬಿಜೆಪಿಯ ನಾಯಕರ ನಾಲಿಗೆ ಹರಿದು ಹಾಕುತ್ತಿದ್ದೆ: ನನ್ನನ್ನೂ ಸೇರಿದಂತೆ ಟಿಎಂಸಿಯ ಹಿರಿಯ ನಾಯಕರಾದ ಫಿರಾದ್ ಹಕೀಂ ಮತ್ತು ಅಭಿಷೇಕ್ ಬ್ಯಾನರ್ಜಿ ವಿರುದ್ಧ ಬಿಜೆಪಿ ಅಪಪ್ರಚಾರ ಮಾಡುತ್ತಿದೆ. ಅವರು ಎಲ್ಲರನ್ನೂ ಕಳ್ಳರನ್ನಾಗಿ ಮಾಡುತ್ತಿದ್ದಾರೆ. ಅವರ ಪ್ರಕಾರ, ಟಿಎಂಸಿ ಎಲ್ಲರೂ ಕಳ್ಳರೇ. ಆದ್ರೆ ಬಿಜೆಪಿಗರು ಮಾತ್ರ ಪರಿಶುದ್ಧರು. ನಾನು ರಾಜಕೀಯದಲ್ಲಿ ಇಲ್ಲದೇ ಇರುತ್ತಿದ್ದರೆ ಬಿಜೆಪಿಯ ನಾಯಕರ ನಾಲಿಗೆ ಹರಿದು ಹಾಕುತ್ತಿದ್ದೆ ಎಂದು ತೀವ್ರ ಆಕ್ರೋಶದ ಧ್ವನಿಯಲ್ಲಿ ಮಾತನಾಡಿದರು.
ಇದನ್ನೂ ಓದಿ: ಸ್ವಪಕ್ಷದ ವಿರುದ್ಧ ವಾಗ್ದಾಳಿ, ಮಮತಾ ಭೇಟಿ: ಚಾಣಾಕ್ಷ ಸುಬ್ರಮಣಿಯನ್ ಸ್ವಾಮಿ ನಡೆಯೇನು?
ತಾಕತ್ ಇದ್ದರೆ ನನ್ನನ್ನು ಬಂಧಿಸಿ ನೋಡಿ: ಟಿಎಂಸಿ ನಾಯಕರುಗಳ ಮೇಲೆ ಆರೋಪ ಮಾಡುತ್ತಿರುವ ಕೇಂದ್ರ ಬಿಜೆಪಿ ನಾಯಕರಿಗೆ ತಾಕತ್ ಇದ್ದರೆ ನನ್ನನ್ನು ಬಂಧಿಸಲಿ ಎಂದು ಮಮತಾ ಸವಾಲೆಸೆದರು. ಭಾರತ-ಬಾಂಗ್ಲಾ ಗಡಿಯಲ್ಲಿ ಮಹಿಳೆಯ ಮೇಲೆ ಬಿಎಸ್‌ಎಫ್ ಸಿಬ್ಬಂದಿ ನಡೆಸಿದ್ದಾರೆ ಎನ್ನಲಾದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾತನಾಡಿ, ಬಿಎಸ್‌ಎಫ್ ಗಡಿ ಕಾರ್ಯವ್ಯಾಪ್ತಿಯನ್ನು ಕೇಂದ್ರ ಸರ್ಕಾರ 15 ಕಿ ಮೀ ನಿಂದ 50 ಕಿಮೀ ಗೆ ಏರಿಸಿದ್ದೇ ಇಂಥ ಘಟನೆಗೆ ಕಾರಣವಾಗಿರಬಹುದು ಎಂದು ಅಚ್ಚರಿ ವ್ಯಕ್ತಪಡಿಸಿದರು.