ಹೈದರಾಬಾದ್: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ನಾಲ್ಕನೇ ಹಂತ ನಾಳೆ ನಡೆಯಲಿದ್ದು, ಇದರಲ್ಲಿ ಸುಮಾರು 373 ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮತ್ತು ಪಕ್ಷದ ಉಳಿದ ಉನ್ನತ ನಾಯಕರು ಪಶ್ಚಿಮ ಬಂಗಾಳದಲ್ಲಿ ಬಿರುಸಿನ ಪ್ರಚಾರ ನಡೆಸಿದ್ದು, ಟಿಎಂಸಿ ಭದ್ರಕೋಟೆಗೆ ಸವಾಲು ಹಾಕಿದ್ದಾರೆ. ಇತ್ತ ಟಿಎಂಸಿ ಕೂಡಾ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿಯಲು ಶತ ಪ್ರಯತ್ನ ನಡೆಸಿದೆ.
ನಾಲ್ಕನೇ ಹಂತದ ವಿಧಾನಸಭಾ ಚುನಾವಣೆಯಲ್ಲಿ 10 ರಾಜಕೀಯ ಪಕ್ಷಗಳ ಒಟ್ಟು 373 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ರಾಜ್ಯ ಚುನಾವಣೆ ಎಂಟು ಹಂತಗಳಲ್ಲಿ ಪೂರ್ಣಗೊಳ್ಳಲಿದ್ದು, ನಾಲ್ಕನೇ ಹಂತ ಏಪ್ರಿಲ್ 10 ಶನಿವಾರದಂದು ನಡೆಯಲಿದೆ. ಶನಿವಾರ ಮತದಾರರು 323 ಪುರುಷ ಮತ್ತು 50 ಮಹಿಳಾ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಸಂಗ್ರಹಿಸಿದ ಮಾಹಿತಿಯ ಪ್ರಕಾರ, 44 ಕ್ಷೇತ್ರಗಳಲ್ಲಿ 12 (27%) ರೆಡ್ ಅಲರ್ಟ್ ಕ್ಷೇತ್ರಗಳಾಗಿದ್ದು, ಅಲ್ಲಿ ಮೂರು ಅಥವಾ ಹೆಚ್ಚಿನ ಸ್ಪರ್ಧಾಳುಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ.
ಎಡಿಆರ್ ವರದಿಯ ಪ್ರಕಾರ, 373 ಅಭ್ಯರ್ಥಿಗಳಲ್ಲಿ 81 ಜನ (22%) ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದರೆ, 65 (17%) ಜನರು ತಮ್ಮ ವಿರುದ್ಧ ಗಂಭೀರ ಕ್ರಿಮಿನಲ್ ಪ್ರಕರಣಗಳನ್ನು ಘೋಷಿಸಿದ್ದಾರೆ.
ರಾಜ್ಯದಲ್ಲಿ ಭದ್ರತೆ ಒದಗಿಸಲು ಮತ್ತು ಮುಕ್ತ ಹಾಗೂ ನ್ಯಾಯಯುತ ಚುನಾವಣೆಗಾಗಿ ಕೇಂದ್ರ ಪಡೆಗಳ ಒಟ್ಟು 944 ಕಂಪನಿಗಳನ್ನು ಬಂಗಾಳದಲ್ಲಿ ನೇಮಿಸಲಾಗಿದೆ.