ಕೋಝಿಕೋಡ್(ಕೇರಳ): ನಗರದಲ್ಲಿ ವಿಶೇಷ ಮದುವೆಯೊಂದು ನಡೆದಿದೆ. ಎಲ್ಲಾ ಮದುವೆಗಳು ಕಲ್ಯಾಣ ಮಂಟಪ ಹಾಗೂ ದೇವಾಲಯಗಳಲ್ಲಿ ನಡೆದರೆ, ಈ ಮದುವೆ ನಡೆದಿದ್ದು ಮದ್ಯದಂಗಡಿಯ ಮುಂಭಾಗ.
ಕೋಝಿಕೋಡ್‌ನ ಮಿನಿ ಬೈಪಾಸ್ ರಸ್ತೆಯಲ್ಲಿರುವ ಮದ್ಯದಂಗಡಿ ಅಪರೂಪದ ಘಟನೆಗೆ ಸಾಕ್ಷಿಯಾಯಿತು. ಇಲ್ಲಿ ನವ ವಧು-ವರರು ಪರಸ್ಪರ ಹಾರ ಬದಲಿಸಿಕೊಂಡು ವಿವಾಹವಾದರು. ಆದಾಗ್ಯೂ, ಈ ವಿವಾಹವು ಕೇರಳ ಕ್ಯಾಟರರ್ಸ್ ಅಸೋಸಿಯೇಶನ್‌ನ ಪ್ರತಿಭಟನೆಯ ಭಾಗವಾಗಿತ್ತು.
ಕೋವಿಡ್ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ವಿವಾಹ ಕಾರ್ಯಗಳಿಗಾಗಿ ಅತಿಥಿಗಳ ಮಿತಿಯನ್ನು 50ಕ್ಕೆ ನಿಗದಿಪಡಿಸಿದೆ. ಈ ನಿರ್ಧಾರವನ್ನು ಆಲ್ ಕೇರಳ ಕ್ಯಾಟರರ್ಸ್ ಅಸೋಸಿಯೇಷನ್ ವಿರೋಧಿಸಿದ್ದು ರಾಜ್ಯಾದ್ಯಂತ ಮದ್ಯದಂಗಡಿಗಳ ಮುಂದೆ ಪ್ರತಿಭಟನೆ ಘೋಷಿಸಿದೆ. ಈ ಪ್ರತಿಭಟನಾ ಕೂಟದಲ್ಲಿ ಭಾಗವಹಿಸಿ ಕೋಝಿಕೋಡ್ ಸಂಸದ ಎಂ.ಕೆ.ರಾಘವನ್ ತಮ್ಮ ಭಾಷಣವನ್ನು ಮುಕ್ತಾಯಗೊಳಿಸುತ್ತಿದ್ದಂತೆ, ಪ್ರಮೋದ್ ಮತ್ತು ಧನ್ಯಾ ಎಂಬವರು ಪರಸ್ಪರ ಹಾರ ಬದಾಲಾಯಿಸುವ ಮೂಲಕ ವಿವಾಹವಾದರು. ಈ ಮುಖೇನ ಸರ್ಕಾರದ ನಿರ್ಧಾರವನ್ನು ಖಂಡಿಸಿದರು.
ಪ್ರಮೋದ್ ಮತ್ತು ಧನ್ಯಾ ಹಲವು ವರ್ಷಗಳಿಂದ ಕ್ಯಾಟರಿಂಗ್ ವ್ಯವಹಾರದಲ್ಲಿದ್ದಾರೆ. ದೊಡ್ಡ ವಿವಾಹ ಕೂಟಗಳಿಗೆ ಸರ್ಕಾರದ ನಿರ್ಬಂಧದಿಂದಾಗಿ ಕಳೆದೆರಡು ತಿಂಗಳಿನಿಂದ ಅವರು ನಿರುದ್ಯೋಗಿಗಳಾಗಿದ್ದಾರೆ ಎಂದು ಸಂಘ ಹೇಳಿದೆ. 50 ಮತ್ತು 20 ಜನರಿಗೆ ಅಡುಗೆ ಸೇವೆಗಳನ್ನು ಒದಗಿಸುವುದು ಕಾರ್ಯಸಾಧ್ಯವಲ್ಲ ಎಂದು ಕ್ಯಾಟರರ್ಸ್ ಅಸೋಸಿಯೇಷನ್ ಹೇಳಿದೆ.
ಇದನ್ನೂ ಓದಿ : ಮಲಗಿದ್ದ ವ್ಯಕ್ತಿಯನ್ನು ಎಬ್ಬಿಸಿ ಕೊಲೆ : ಸಿಸಿಟಿವಿಯಲ್ಲಿ ಸೆರೆಯಾಯ್ತು ಕೃತ್ಯ