ನವದೆಹಲಿ: 2014 ರಿಂದ ದೇಶದಲ್ಲಿ ಬಾಕಿ ಉಳಿದಿರುವ ರಸ್ತೆ ಯೋಜನೆಗಳನ್ನು ಪೂರ್ಣಗೊಳಿಸುವ ಮೂಲಕ 3 ಲಕ್ಷ ಕೋಟಿ ರೂಪಾಯಿ ಎನ್‌ಪಿಎ (ಅನುತ್ಪಾದಕ ಆಸ್ತಿ ಅಥವಾ ಪಾವತಿಸಲು ವಿಫಲವಾದ ಸಾಲ ) ತಪ್ಪಿಸಿ ಭಾರತೀಯ ಬ್ಯಾಂಕುಗಳನ್ನು ಉಳಿಸಿದ್ದೇವೆ ಎಂದು ಕೇಂದ್ರ ಸರ್ಕಾರ ಮಂಗಳವಾರ ರಾಜ್ಯಸಭೆಯಲ್ಲಿ ಪ್ರತಿಪಾದಿಸಿದೆ.
ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ರಾಜ್ಯಸಭೆಗೆ ಈ ಮಾಹಿತಿ ನೀಡಿದ್ದು, ಒಟ್ಟಾರೆ 415 ರಸ್ತೆ ಯೋಜನೆಗಳನ್ನು ವಿಳಂಬಗೊಂಡ ಯೋಜನೆಗಳ ಪಟ್ಟಿಗೆ ಸೇರಿಸಲಾಗಿದ್ದು, ಇವುಗಳಲ್ಲಿ ಶೇ 95ರಷ್ಟು ಯೋಜನೆಗಳ ಕಾಮಗಾರಿ ಪೂರ್ಣಗೊಂಡಿದೆ ಎಂದರು. ಅಂಥ ಎಲ್ಲ ಬಾಕಿ ಇರುವ ಅಥವಾ ವಿಳಂಬವಾಗಿರುವ ಯೋಜನೆಗಳ ಬಗ್ಗೆ ಸರ್ಕಾರ ಶೀಘ್ರದಲ್ಲೇ ರಾಜ್ಯವಾರು ಮೇಲ್ವಿಚಾರಣೆ ನಡೆಸಲಿದೆ ಮತ್ತು ಅವುಗಳನ್ನು ಶೀಘ್ರವಾಗಿ ಪೂರ್ಣಗೊಳಿಸಲು ಸಹಾಯ ಮಾಡಲಿದೆ ಎಂದು ಸಚಿವರು ಇದೇ ವೇಳೆ ಸ್ಪಷ್ಟಪಡಿಸಿದರು.
ಶೇ 95ರಷ್ಟು ಕಾಮಗಾರಿ ಪೂರ್ಣ: 415 ಯೋಜನೆಗಳ ಪೈಕಿ ಶೇ 95ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಇವುಗಳನ್ನು ವಿಳಂಬಗೊಂಡ ಯೋಜನೆಗಳೆಂದು ವರ್ಗೀಕರಿಸಲಾಗಿದೆ. 2014ರಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದಾಗ 3.85 ಲಕ್ಷ ಕೋಟಿ ರೂಪಾಯಿ ವೆಚ್ಚ ಯೋಜನೆಗಳು ಕಾರಣಾಂತರಗಳಿಂದ ಸ್ಥಗಿತಗೊಂಡಿದ್ದವು.
ನಾವು ಭಾರತೀಯ ಬ್ಯಾಂಕುಗಳ 3 ಲಕ್ಷ ಕೋಟಿ ರೂಪಾಯಿಗಳಷ್ಟು ಅನುತ್ಪಾದಕ ಆಸ್ತಿಯನ್ನು ಉಳಿಸಿದ್ದೇವೆ. ಗುತ್ತಿಗೆದಾರರು ಅಥವಾ ನಮ್ಮ ನಿಯಂತ್ರಣಕ್ಕೆ ಮೀರಿದ ಇತರ ಸಮಸ್ಯೆಗಳ ಕಾರಣಗಳಿಂದ ಯೋಜನೆಗಳು ವಿಳಂಬವಾಗಿವೆ. ನಾವು ಮೂರು ತಿಂಗಳೊಳಗೆ ಅಪೂರ್ಣ ಮತ್ತು ವಿಳಂಬವಾಗಿರುವ ಎಲ್ಲಾ ಯೋಜನೆಗಳ ರಾಜ್ಯವಾರು ಮೇಲ್ವಿಚಾರಣೆ ನಡೆಸಲಿದ್ದೇವೆ ಎಂದು ಗಡ್ಕರಿ ರಾಜ್ಯಸಭೆಯಲ್ಲಿ ಮಾಹಿತಿ ನೀಡಿದರು.
ಸರ್ಕಾರವು ಮಂಜೂರಾದ ಯೋಜನೆಗಳನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತದೆ ಮತ್ತು ಈ ಕಾರ್ಯದ ಭಾಗವಾಗಿ ವಿವಿಧ ರಾಜ್ಯಗಳಲ್ಲಿ 719 ವಿಳಂಬಗೊಂಡ ರಾಷ್ಟ್ರೀಯ ಹೆದ್ದಾರಿ ಯೋಜನೆಗಳನ್ನು ಗುರುತಿಸಲಾಗಿದೆ. ಈ ಯೋಜನೆಗಳು ಸ್ಥಗಿತಗೊಂಡಿಲ್ಲ, ಆದರೆ ಕೆಲವು ರಾಜ್ಯಗಳಲ್ಲಿ ಸರಾಸರಿಗಿಂತ ಅತ್ಯಧಿಕ ಮಾನ್ಸೂನ್ ಮಳೆ ಸೇರಿದಂತೆ ಕೋವಿಡ್-19 ಸಾಂಕ್ರಾಮಿಕ, ಭೂಸ್ವಾಧೀನದಲ್ಲಿ ಅಡಚಣೆಗಳು, ಶಾಸನಬದ್ಧ ಅನುಮತಿ, ಮಣ್ಣು ಲಭ್ಯವಾಗದಿರುವುದು, ಕಾನೂನು ಮತ್ತು ಸುವ್ಯವಸ್ಥೆ, ರಿಯಾಯಿತಿದಾರರ ಆರ್ಥಿಕ ಮುಗ್ಗಟ್ಟು, ಗುತ್ತಿಗೆದಾರರ ಕಳಪೆ ಕಾರ್ಯಕ್ಷಮತೆ ಇತ್ಯಾದಿ ಕಾರಣಗಳಿಂದಾಗಿ ಪೂರ್ಣಗೊಳಿಸಬೇಕಾದ ನಿಗದಿತ ದಿನಾಂಕವನ್ನು ಮೀರಿವೆ ಎಂದು ತಿಳಿಸಿದರು.
ಇದನ್ನೂ ಓದಿ: 15 ವರ್ಷದ ಹಳೆಯ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಯ ವಾಹನಗಳು ಗುಜರಿಗೆ : ಸಚಿವ ನಿತಿನ್ ಗಡ್ಕರಿ