ನವದೆಹಲಿ: ಈ ಹಿಂದಿನಿಂದಲೂ ಭಾರತ - ರಷ್ಯಾ ನಡುವೆ ಉತ್ತಮ ಸಂಬಂಧವಿದ್ದು, ಅನೇಕ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿವೆ. ಇದೀಗ ಮತ್ತೊಮ್ಮೆ ಭಾರತದ ಪ್ರವಾಸ ಕೈಗೊಂಡಿರುವ ರಷ್ಯಾ ಅಧ್ಯಕ್ಷ ವಾಡ್ಲಿಮಿರ್ ಪುಟಿನ್ 21ನೇ ವಾರ್ಷಿಕ ಭಾರತ - ರಷ್ಯಾ ಶೃಂಗಸಭೆಯಲ್ಲಿ ಭಾಗಿಯಾದರು.
ಪ್ರಧಾನಿ ಮೋದಿ ಜೊತೆಗಿನ ಮಹತ್ವದ ಚರ್ಚೆ ವೇಳೆ ಭಾರತದ ಗುಣಗಾನ ಮಾಡಿರುವ ವಾಡ್ಲಿಮಿರ್, ಭಾರತವನ್ನ ನಾವು ಮಹಾನ್ ಶಕ್ತಿ, ಸ್ನೇಹಪರ ರಾಷ್ಟ್ರ ಮತ್ತು ಸಮಯ ಪರೀಕ್ಷಿತ ಸ್ನೇಹಿತ ಎಂದಿದ್ದಾರೆ. ಈ ಶೃಂಗಸಭೆವೊಂದಿಗೆ ಭಾರತ - ರಷ್ಯಾ ನಡುವಿನ ಸಂಬಂಧ ಮತ್ತಷ್ಟು ಗಟ್ಟಿಯಾಗಿದ್ದು, ಭವಿಷ್ಯದ ದೃಷ್ಟಿಯಿಂದ ಈ ಚರ್ಚೆ ಬಹಳ ಮಹತ್ವ ಪಡೆದುಕೊಂಡಿದೆ ಎಂದರು.
ಈ ಹಿಂದೆ 2019ರಲ್ಲಿ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗಿಯಾಗಲು ಪುಟಿನ್ ಭಾರತದ ಪ್ರವಾಸ ಕೈಗೊಂಡಿದ್ದರು. ಇದಾದ ಬಳಿಕ ರಷ್ಯಾ ಅಧ್ಯಕ್ಷರು ಕೈಗೊಂಡಿರುವ ಮೊದಲ ಭಾರತದ ಪ್ರವಾಸ ಇದಾಗಿದೆ. ಉಭಯ ನಾಯಕರು ದೆಹಲಿಯಲ್ಲಿರುವ ಹೈದರಾಬಾದ್ ಹೌಸ್ನಲ್ಲಿ ಮಹತ್ವದ ಮಾತುಕತೆಯಲ್ಲಿ ಭಾಗಿಯಾದರು. ಈ ವೇಳೆ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ-ರಷ್ಯಾ ನಡುವಿನ ಸಂಬಂಧ ಸದೃಢವಾಗಿದ್ದು,ವಿಶ್ವಾಸಾರ್ಹವಾಗಿದೆ ಎಂದರು.
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲೂ ಉಭಯ ದೇಶಗಳ ನಡುವಿನ ಸಂಬಂಧದಲ್ಲಿ ಯಾವುದೇ ರೀತಿಯ ಬದಲಾವಣೆ ಆಗಿಲ್ಲ. ಉಭಯ ದೇಶಗಳು ನಡುವಿನ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತಿದ್ದು, ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ನಾವು ಚರ್ಚೆ ನಡೆಸುತ್ತಿದ್ದೇವೆ ಎಂದರು.
ಇದನ್ನೂ ಓದಿರಿ: ಭಾರತದಲ್ಲಿ AK-203 ಅಸಾಲ್ಟ್ ರೈಫಲ್ ಉತ್ಪಾದನೆ, 2031ರವರೆಗೆ ಮಿಲಿಟರಿ ಸಹಕಾರ: ಭಾರತ - ರಷ್ಯಾ ನಡುವೆ ಏನೆಲ್ಲ ಒಪ್ಪಂದ!?
ಕೋವಿಡ್ ಸಾಂಕ್ರಾಮಿಕ ಸಂದರ್ಭದಲ್ಲಿ ಅನೇಕ ಸವಾಲು ಎದುರಿಸಿದ್ದೇವೆ. ಸಹಕಾರದ ಜೊತೆಗೆ ಪರಸ್ಪರ ಸೂಕ್ಷ್ಮತೆ ಗಮನದಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದೇವೆ ಎಂದು ನಮೋ ತಿಳಿಸಿದರು. ಕಳೆದ ಕೆಲ ದಶಕಗಳಲ್ಲಿ ಅನೇಕ ರೀತಿಯ ಬದಲಾವಣೆಗಳಾಗಿವೆ. ಆದರೆ, ಭಾರತ ಮತ್ತು ರಷ್ಯಾ ನಡುವಿನ ಸ್ನೇಹ ಸ್ಥಿರವಾಗಿದೆ ಎಂದು ಪ್ರಧಾನಿ ಮೋದಿ ಹೇಳಿದರು. ಸದ್ಯ ರಷ್ಯಾದಿಂದ 38 ಬಿಲಿಯನ್ಗಿಂತಲೂ ಅಧಿಕ ಹೂಡಿಕೆ ಭಾರತಕ್ಕೆ ಹರಿದು ಬರುತ್ತಿದ್ದು, ಮಿಲಿಟರಿ ಸೇರಿದಂತೆ ಅನೇಕ ವಲಯಗಳಲ್ಲಿ ಎರಡು ದೇಶಗಳ ನಡುವೆ ಒಪ್ಪಂದವಾಗಲಿದೆ ಎಂದರು.