ಪುಣೆ: ಸೀರಮ್ ಇನ್ಸಟಿಟ್ಯೂಟ್ ಯಾವಾಗಲೂ ಭಾರತದ ಲಸಿಕೆ ಅಗತ್ಯಕ್ಕೆ ಆದ್ಯತೆ ನೀಡಿದ್ದು, ದೇಶದ ಹಿತಾಸಕ್ತಿ ಕಡೆಗಣಿಸಿ ವಿದೇಶಗಳಿಗೆ ಲಸಿಕೆ ರಫ್ತು ಮಾಡಿಲ್ಲ ಎಂದು ಸೀರಮ್ ಇನ್ಸಟಿಟ್ಯೂಟ್ ಸಿಇo ಅದಾರ್ ಪೂನಾವಾಲಾ ಸ್ಪಷ್ಟಪಡಿಸಿದ್ದಾರೆ.
ದೇಶದಲ್ಲಿ ಕೋವಿಡ್ ಲಸಿಕೆಗಳ ಕೊರತೆ ಕಾಡುತ್ತಿದ್ದರೂ ಸೀರಮ್ ಇನ್ಸಟಿಟ್ಯೂಟ್ ವಿದೇಶಗಳಿಗೆ ಲಸಿಕೆ ಕಳುಹಿಸುತ್ತಿದೆ ಎಂಬ ಆರೋಪಗಳು ವ್ಯಾಪಕವಾಗಿ ಕೇಳಿ ಬಂದ ಹಿನ್ನೆಲೆಯಲ್ಲಿ ಪೂನಾವಾಲಾ ಅವರ ಸ್ಪಷ್ಟೀಕರಣ ಮಹತ್ವ ಪಡೆದಿದೆ.
"ಭಾರತದ ಜನತೆಯ ಹಿತ ಕಡೆಗಣಿಸಿ ನಾವು ಯಾವತ್ತೂ ಲಸಿಕೆ ರಫ್ತು ಮಾಡಿಲ್ಲ. ಭಾರತದ ಜನರಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡಲು ಬದ್ಧರಾಗಿದ್ದೇವೆ." ಎಂದು ಪೂನಾವಾಲಾ ಹೇಳಿದ್ದಾರೆ.
"ಜನವರಿ 2021ರಲ್ಲಿ ನಮ್ಮ ಬಳಿ ಲಸಿಕೆಯ ಬೃಹತ್ ದಾಸ್ತಾನು ಸಂಗ್ರಹವಾಗಿತ್ತು. ಆಗ ಲಸಿಕೆ ಅಭಿಯಾನ ಆರಂಭವಾಗಿತ್ತಾದರೂ, ಹೊಸ ಸೋಂಕು ಪ್ರಕರಣಗಳು ಅತ್ಯಂತ ಕಡಿಮೆ ಇದ್ದವು. ಆವಾಗ ನಾವು ದೊಡ್ಡ ಪ್ರಮಾಣದ ಕೋವಿಶೀಲ್ಡ್ ಲಸಿಕೆಗಳನ್ನು ರಫ್ತು ಮಾಡಿದ್ದೆವು. ಆಗ ಬಹುತೇಕ ವೈದ್ಯಕೀಯ ತಜ್ಞರು ಹಾಗೂ ಜನತೆ, ನಾವು ಕೋವಿಡ್ ಸೋಲಿಸಿ ಬಿಟ್ಟಿದ್ದೇವೆ ಎಂದು ನಂಬಿದ್ದರು. ಆದರೆ ಆಗ ಇನ್ನಿತರ ದೇಶಗಳಲ್ಲಿ ಕೋವಿಡ್ ಸೋಂಕು ವ್ಯಾಪಕವಾಗಿತ್ತು." ಎಂದು ಅವರು ತಿಳಿಸಿದ್ದಾರೆ.