ಗಯಾ (ಬಿಹಾರ) : ಕಳೆದೆರಡು ದಿನಗಳ ಹಿಂದೆ ಪೊಲೀಸರ ಕೈಗೆ ಸೆರೆಸಿಕ್ಕಿದ್ದ ನಕ್ಸಲ್ ಪೊಲಿಟ್ಬ್ಯುರೊ ಸದಸ್ಯ ಪ್ರಮೋದ್ ಮಿಶ್ರಾ, ಬಿಹಾರದಲ್ಲಿ ಶಾಲೆಗಳನ್ನು ಗುರಿಯಾಗಿಸಿ ನಡೆದ ಸ್ಫೋಟಕ್ಕೆ ಉಗ್ರಗಾಮಿ ಗುಂಪು ಕಾರಣ ಎಂಬುದನ್ನು ಒಪ್ಪಿಕೊಂಡಿದ್ದಾರೆ. ಬಿಹಾರದ ನ್ಯಾಯಾಲಯಕ್ಕೆ ಹಾಜರು ಪಡಿಸುವ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶಾಲೆಗಳನ್ನು ಕೇಂದ್ರ ಪಡೆಗಳು ಹಾಗೂ ಪೊಲೀಸ್ ಸಿಬ್ಬಂದಿಗೆ ಆಶ್ರಯ ಮನೆಗಳಾಗಿ ಬಳಸುತ್ತಿದ್ದ ಕಾರಣ ಅವುಗಳನ್ನು ಸ್ಫೋಟಿಸಿದೆವು ಎಂದು ಹೇಳಿದ್ದಾರೆ.
ವಿರೋಧ ಪಕ್ಷದ ನಾಯಕತ್ವದ ಮೇಲೆ ತೀವ್ರ ವಾಗ್ದಾಳಿ ನಡೆಸಿದ ನಕ್ಸಲ್ ನಾಯಕ, "ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಪ್ರತಿಪಕ್ಷಗಳು ಮೌನವಾಗಿವೆ. ಮಣಿಪುರದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಯೋಚಿಸಿ. ಇದರ ವಿರುದ್ಧ ಪ್ರತಿಪಕ್ಷಗಳ ಪಾತ್ರ ಏನೂ ಸಮಾಧಾನಕರವಿಲ್ಲ. ಪ್ರತಿಪಕ್ಷಗಳು ಸುಮ್ಮನಿರುವುದನ್ನು ನೋಡಿದರೆ ಅವರು ಬಿಜೆಪಿ ಸರ್ಕಾರವನ್ನು ಬೆಂಬಲಿಸುವಂತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ ಮತ್ತು ಈಶಾನ್ಯ ರಾಜ್ಯಗಳು ಸೇರಿದಂತೆ ಹಲವಾರು ರಾಜ್ಯಗಳನ್ನು ನಿಯಂತ್ರಣದಲ್ಲಿಟ್ಟುಕೊಂಡಿದ್ದ ಪೂರ್ವ ವಲಯದ ಕಮಾಂಡ್ ನಕ್ಸಲ್ ನಾಯಕ ಪ್ರಮೋದ್ ಮಿಶ್ರಾ ಮುಂದುವರಿದು, "ಆದರೆ ಇತ್ತೀಚಿನ ದಿನಗಳಲ್ಲಿ ವಿಶೇಷವಾಗಿ ಬಿಹಾರದಲ್ಲಿ ಬಡೇ ಸರ್ಕಾರ್ ಎಂದೇ ಕರೆಯುವ ಸಂದೀಪ್ ಯಾದವ್ ನಿಧನ ನಂತರ ಸಂಘಟನೆಗೆ ಹಿನ್ನಡೆಯಾಗಿದೆ. ಬಡೇ ಸರ್ಕಾರ ನಿಧನದಿಂದ ಸಂಘಟನೆಯಲ್ಲಿ ಅನಿಶ್ಚಿತ ಪರಿಸ್ಥಿತಿ ನಿರ್ಮಾಣವಾಗಿದೆ. ಈಗ ಸಂಘಟನೆಗೆ ಅವರಂತಹ ಇನ್ನೊಬ್ಬ ವ್ಯಕ್ತಿಯನ್ನು ಕಂಡುಕೊಳ್ಳಬೇಕಿದೆ" ಎಂದು ಹೇಳಿದ್ದಾರೆ.
ಬಿಜೆಪಿ ಹಾಗೂ ಕೇಂದ್ರ ಸರ್ಕಾರವನ್ನು 'ಫ್ಯಾಸಿಸ್ಟ್' ಎಂದು ಕರೆದ ಮಿಶ್ರಾ, "ಕೇಂದ್ರ ಸಸರ್ಕಾರ ಉನ್ನತ ಕಾರ್ಪೊರೇಟ್ ಸಂಸ್ಥೆಗಳೊಂದಿಗೆ ಕೈಜೋಡಿಸುತ್ತಿದ್ದು, ಜನರನ್ನು ಶೋಷಿಸಲು ಪ್ರಯತ್ನಿಸುತ್ತಿದ್ದಾರೆ. ನಿಜವಾದ ವಿಮೋಚನೆಯ ಮಾರ್ಗ ಮಾರ್ಕ್ಸ್ ವಾದ, ಹೊಸ ಪ್ರಜಾಪ್ರಭುತ್ವ, ಸಮಾಜವಾದ ಮತ್ತು ಕಮ್ಯುನಿಸಂ ತತ್ವಗಳಲ್ಲಿದೆ" ಎಂದರು.
ಬುಧವಾರ ರಾತ್ರಿ ಜಾರ್ಖಂಡ್ ಹಾಗೂ ಬಿಹಾರದ ಗಡಿ ಹತ್ತಿರದ ಬಿಹಾರದ ಗಯಾದಲ್ಲಿ ಪ್ರಮೋದ್ ಮಿಶ್ರಾ ಹಾಗೂ ಅವರ ಸಹಚರರನ್ನು ಭದ್ರತಾ ಸಂಸ್ಥೆ ಕಾರ್ಯಾಚರಣೆ ನಡೆಸಿ ಬಂಧಿಸಿತ್ತು. ಪೊಲೀಸ್ ವಶದಲ್ಲಿದ್ದ ನಕ್ಸಲ್ ನಾಯಕನನ್ನು ಇಂದು ಬಿಹಾರ ನ್ಯಾಯಾಲಯಕ್ಕೆ ಹಾಜರು ಪಡಿಸಲಾಯಿತು. ಇತ್ತೀಚಿನವರೆಗೂ ಪ್ರಮೋದ್ ಮಿಶ್ರಾ ಜಾರ್ಖಂಡ್, ಬಿಹಾರ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ ಹಾಗೂ ಈಶಾನ್ಯ ರಾಜ್ಯಗಳ ಮೇಲ್ವಿಚಾರಣೆಯ ನಕ್ಸಲ್ ಪೂರ್ವ ಪ್ರಾದೇಶಿಕ ಬ್ಯೂರೋದ ಪ್ರಧಾನ ಕಚೇರಿಯಾಗಿ ಕಾರ್ಯ ನಿರ್ವಹಿಸುವ ಸರಂದಾ ಪ್ರದೇಶದಲ್ಲಿದ್ದಾರೆ ಎಂದು ನಂಬಲಾಗಿತ್ತು.
ಇದನ್ನೂ ಓದಿ: ಮಾವೋವಾದಿ ನಾಯಕನ ಬಂಧನದ ವಿರುದ್ಧ ಪ್ರತಿಭಟನೆ : ಬ್ರಿಡ್ಜ್ ಸ್ಫೋಟಗೊಳಿದ ನಕ್ಸಲರು