ವಯನಾಡು( ಕೇರಳ) : ವಯನಾಡಿನ ಪುಲ್ಪಲ್ಲಿ ಮೂಲದ ಅಜಯಕುಮಾರ್ ಕೃಷಿಯಲ್ಲಿ ಸಾಕಷ್ಟು ವಿಫಲತೆಗಳನ್ನು ಕಂಡು ಇದೀಗ, ಆ ಸೋಲುಗಳನ್ನೆ ಮಟ್ಟಿಲುಗಳನ್ನಾಗಿ ಮಾಡಿಕೊಂಡಿದ್ದಾರೆ. ಅಷ್ಟೇ ಅಲ್ಲ ಸ್ಥಳೀಯ ಅಕ್ಕಿ- ಗೋಧಿ ಉತ್ಪನ್ನಗಳನ್ನು ವಿಶ್ವ ಮಾರುಕಟ್ಟೆಗಳಲ್ಲಿ ಲಭ್ಯವಾಗುವಂತೆ ಮಾಡಿದ್ದಾರೆ. ಇವರ ಪರಿಶ್ರಮದ ಫಲ ವಿವಿಧ ಬಗೆಯ ಲೋಕಲ್ ಅಕ್ಕಿ ವಿವಿಧ ರಾಷ್ಟ್ರಗಳಿಗೆ ರಫ್ತಾಗುತ್ತಿವೆ.
ಸುಮಾರು 11 ವರ್ಷಗಳ ಹಿಂದೆ ಅಜಯ್ ಅಕ್ಕಿ ಮಾರಾಟ ಆರಂಭಿಸಿದ್ರು. ವಿದೇಶಗಳೊಂದಿಗಿನ ಕೆಲವು ವ್ಯಾಪಾರ ಪ್ರಯತ್ನಗಳಲ್ಲಿ ವಿಫಲವಾದಾಗ ಕರ್ನಾಟಕಕ್ಕೆ ಬಂದು ಶುಂಠಿ ಬೆಳೆಯಲು ಪ್ರಯತ್ನಿಸಿದರು. ಅಜಯಕುಮಾರ್ ಒಂಬತ್ತು ವಿವಿಧ ರೀತಿಯ ಅಕ್ಕಿ ಮಾರಾಟ ಮಾಡುತ್ತಿದ್ದಾರೆ. ಇವುಗಳಲ್ಲಿ ಐದು ವಯನಾಡಿನ ಸ್ಥಳೀಯ ಅಕ್ಕಿ ತಳಿಗಳಾಗಿವೆ. ಗಂಧಕಶಾಲಾ, ಮುಲ್ಲಾನ್ಕೈಮ, ಅದುಕ್ಕನ್, ಮತ್ತು ಪಲ್ತೋಂಡಿ ವಯನಾಡಿನ ಅಕ್ಕಿ ತಳಿಗಳು. ಪಲ್ತೋಂಡಿ ಅಕ್ಕಿಗೆ ಸಾಕಷ್ಟು ಡಿಮ್ಯಾಂಡ್ ಇದೆ.
ಇನ್ನು ಅಕ್ಕಿ ಜೊತೆಗೆ ಅಜಯಕುಮಾರ್ ಹೆಚ್ಚಾಗಿ ಬುಡಕಟ್ಟು ಜನಾಂಗದವರಿಂದ ಗೋಧಿ ಸಂಗ್ರಹಿಸುತ್ತಿದ್ದಾರೆ. ಅಕ್ಕಿ ಮತ್ತು ಬಾಯಿಲ್ಡ್ ರೈಸ್ ಅನ್ನು ಸಹ ಇಲ್ಲಿ ತಯಾರಿಸಲಾಗುತ್ತದೆ. ಅಕ್ಕಿ ಪ್ರತಿ ಕೆಜಿಗೆ 30 ರೂಗಳಿಂದ 60 ರೂಗಳ ವರೆಗೆ ಬೆಲೆ ಇದೆ. ಇಲ್ಲಿಂದ ಭತ್ತದ ತಳಿಗಳನ್ನು ಕೇರಳಿಗರು ವಾಸಿಸುವ ದೇಶದ ಎಲ್ಲ ಸ್ಥಳಗಳಿಗೆ ರಫ್ತು ಮಾಡಲಾಗುತ್ತಿದೆ.