ನವದೆಹಲಿ: ಟ್ರ್ಯಾಕ್ಟರ್ ಪರೇಡ್ ವೇಳೆ ರೈತ ಪ್ರತಿಭಟನಾಕಾರರು ದೆಹಲಿಯಲ್ಲಿ ಹಿಂಸಾಚಾರ ಸೃಷ್ಟಿಗೆ ಕಾರಣವಾಗಿದ್ದು, ಸಾಕಷ್ಟು ಆಸ್ತಿ-ಪಾಸ್ತಿ ಹಾನಿಗೆ ಕಾರಣವಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೇಂದ್ರ ವಕ್ಫ್ ಮಂಡಳಿಯಿಂದ ಅಧಿಕಾರಿಗಳಿಗಾಗಿ ಆಯೋಜಿಸಲಾಗಿದ್ದ ಸಭೆಯೊಂದರಲ್ಲಿ ಮಾತನಾಡಿದ ಅವರು, ಅರಾಜಕತಾವಾದಿ ಪಿತೂರಿಯಿಂದ ಅಭಿವೃದ್ಧಿಯ ಅಲೆಯನ್ನು ತಪ್ಪಿಸಲು ಸಾಧ್ಯವಿಲ್ಲ ಎಂದು ಪ್ರತಿಭಟನಾಕಾರರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ನೇತೃತ್ವದ ಸರ್ಕಾರ ಅಭಿವೃದ್ಧಿ ಪರವಾಗಿದೆ. ಘನತೆಯೊಂದಿಗೆ ಅಭಿವೃದ್ಧಿ ಮತ್ತು ತಾರತಮ್ಯವಿಲ್ಲದ ಅಭಿವೃದ್ಧಿ ಎಂಬುದನ್ನು ಆಧಾರವಾಗಿಸಿಕೊಂಡಿದೆ. ಇದು ಕ್ರಾಂತಿಕಾರಿ ಫಲಿತಾಂಶಕ್ಕೆ ಕಾರಣವಾಗುತ್ತದೆ ಎಂದು ಮುಖ್ತಾರ್ ಅಬ್ಬಾಸ್ ನಖ್ವಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ದೆಹಲಿ ಪ್ರತಿಭಟನೆ ವೇಳೆ ಖಡ್ಗಧಾರಿಯ ದಾಳಿ ಫೋಟೋ ವೈರಲ್: ಪೊಲೀಸ್ ಪಾರಾಗಿದ್ದು ಹೇಗೆ?
ಸಮಾಜದ ಪ್ರತಿಯೊಂದು ವರ್ಗವೂ ಮುಖ್ಯವಾಹಿನಿಯ ಅಭಿವೃದ್ಧಿಯ ಸಮಾನ ಪಾಲುದಾರನಾಗಿ ಮಾರ್ಪಟ್ಟಿದೆ ಎಂದಿರುವ ನಖ್ವಿ, ಕೆಲವು ವಿನಾಶಕಾರಿ ಅಂಶಗಳು ದೇಶದ ವಿರುದ್ಧದ ಪಿತೂರಿಗಾಗಿ ಗಣರಾಜ್ಯ ದಿನಾಚರಣೆಯನ್ನು ಆಯ್ಕೆ ಮಾಡಿಕೊಂಡಿರುವುದು ದುರದೃಷ್ಟಕರ ಎಂದಿದ್ದಾರೆ. ಇಂಥಹ ವ್ಯಕ್ತಿಗಳನ್ನು ಸಮಾಜ ಮತ್ತು ಸರ್ಕಾರ ಕ್ಷಮಿಸಲು ಸಾಧ್ಯವಿಲ್ಲ ಎಂದು ಈ ವೇಳೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೋದಿ ಸರ್ಕಾರವು ದೇಶಾದ್ಯಂತ ವಕ್ಫ್ ಆಸ್ತಿಗಳ ಮೇಲೆ ಸಾಮಾಜಿಕ-ಆರ್ಥಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳು ಮತ್ತು ಕೌಶಲ್ಯ ಅಭಿವೃದ್ಧಿ ಯೋಜನೆಗಳಿಗಾಗಿ ದೊಡ್ಡ ಪ್ರಮಾಣದಲ್ಲಿ ಮೂಲ ಸೌಕರ್ಯಗಳನ್ನು ನಿರ್ಮಿಸಿದೆ. ವಕ್ಫ್ ದಾಖಲೆಗಳ ಡಿಜಿಟಲೀಕರಣದ ಪಟ್ಟಭದ್ರ ಹಿತಾಸಕ್ತಿಗಳ ಹಿಡಿತದಿಂದ ವಕ್ಫ್ ಮುಕ್ತವಾಗಿದೆ ಎಂದು ನಖ್ವಿ ಸ್ಪಷ್ಟನೆ ನೀಡಿದ್ದಾರೆ.
ಕಳೆದ ಆರು ವರ್ಷಗಳಲ್ಲಿ ಮೋದಿ ಸರ್ಕಾರ ಶಾಲೆಗಳು, ಕಾಲೇಜುಗಳು, ಐಟಿಐಗಳು, ಪಾಲಿಟೆಕ್ನಿಕ್ ಕಾಲೇಜುಗಳು, ಬಾಲಕಿಯರ ವಸತಿ ನಿಲಯಗಳು, ಆಸ್ಪತ್ರೆಗಳು, ಬಹುಪಯೋಗಿ ಸಮುದಾಯ ಭವನ, ಸಾಮಾನ್ಯ ಸೇವಾ ಕೇಂದ್ರಗಳು, ಉದ್ಯೋಗ ಆಧಾರಿತ ಕೌಶಲ್ಯ ಅಭಿವೃದ್ಧಿ ಕೇಂದ್ರಗಳನ್ನು ನಿರ್ಮಿಸಲು ವಕ್ಫ್ಗೆ ಮೂಲ ಸೌಕರ್ಯ ಕಲ್ಪಿಸಲಾಗಿದೆ ಎಂದು ನಖ್ವಿ ಹೇಳಿದ್ದಾರೆ.